ಸೋಮವಾರ, ಜೂನ್ 1, 2020
27 °C
ಲಂಚ ಪಡೆದ ಆರೋಪದಡಿ ಪ್ರಕರಣ ದಾಖಲು; ಸಾರಿಗೆ ಇನ್‌ಸ್ಪೆಕ್ಟರ್‌ಗಳ ಅಮಾನತು

'ಚಾಲಕ' ಚನ್ನಣ್ಣನವರ ಬಲೆಗೆ ಇನ್‌ಸ್ಪೆಕ್ಟರ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊರವಲಯದ ರಸ್ತೆಗಳಲ್ಲಿ ಸರಕು ಸಾಗಣೆ ವಾಹನಗಳನ್ನು ತಡೆದು ಲಂಚ ಪಡೆದು ನಗದೊಳಗೆ ಬಿಡುತ್ತಿದ್ದ ಸಾರಿಗೆ ಇಲಾಖೆ ಇನ್‌ಸ್ಪೆಕ್ಟರ್‌ಗಳಿಬ್ಬರು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಹೊಸೂರು ರಸ್ತೆಯ ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ಕೆಲಸ ಮಾಡುವ ಅಧಿಕಾರಿಗಳು ಲಂಚ ಪಡೆಯುವ ಹಾಗೂ ಚಾಲಕರಿಗೆ ಕಿರುಕುಳ ನೀಡುವ ಬಗ್ಗೆ ದೂರುಗಳು ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ರವಿ ಚನ್ನಣ್ಣನವರ,  ಲಾರಿ ಚಾಲಕನ ವೇಷದಲ್ಲಿ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿ ಲಂಚ ಪಡೆಯುತ್ತಿದ್ದ ವೇಳೆಯಲ್ಲೇ ಸಾರಿಗೆ ಇನ್‌ಸ್ಪೆಕ್ಟರ್‌ಗಳನ್ನು ಪುರಾವೆ ಸಮೇತ ಬಂಧಿಸಿದ್ದಾರೆ.

‘ದೇಶದಾದ್ಯಂತ ಲಾಕ್‌ಡೌನ್ ಇದೆ. ನಗರದಿಂದ ನಗರಕ್ಕೆ ಅಗತ್ಯ ವಸ್ತುಗಳನ್ನು ವಾಹನಗಳು ಸಾಗಣೆ ಮಾಡುತ್ತಿವೆ. ಇಂಥ ವಾಹನಗಳನ್ನೇ ತಡೆದು ಸಾರಿಗೆ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು’ ಎಂದು ರವಿ ಚನ್ನಣ್ಣನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಂಚ ಪಡೆದ ಆರೋಪದಡಿ ಇನ್‌ಸ್ಪೆಕ್ಟರ್‌ಗಳಾದ ಟಿ.ಕೆ. ಜಯಣ್ಣ ಹಾಗೂ ಕರಿಯಪ್ಪ ಅವರನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ ₹12,350 ಜಪ್ತಿ ಮಾಡಲಾಗಿದೆ. ಅವರಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದರು.

‘ಇನ್‌ಸ್ಪೆಕ್ಟರ್‌ಗಳ ವಿರುದ್ಧ ದಾಖಲಾದ ಪ್ರಕರಣದ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ವರದಿ ನೀಡಲಾಗಿದೆ. ಇನ್ನೂ ಹಲವರು ಇಂಥ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಅವರ ವಿರುದ್ಧವೂ ಕಾರ್ಯಾಚರಣೆ ನಡೆಸಲಾಗುವುದು’ ಎಂದರು.

ಕೆಲಸ ಬಿಟ್ಟಿದ್ದ ಗೃಹ ರಕ್ಷಕನೇ ಮಧ್ಯವರ್ತಿ: ‘ಪ್ರಕರಣ ಸಂಬಂಧ ಗೃಹ ರಕ್ಷಕ ವಿವೇಕ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ವಿವೇಕ್‌ನನ್ನು ಕೆಲ ತಿಂಗಳ ಹಿಂದಷ್ಟೇ ಕೆಲಸದಿಂದ ತೆಗೆಯಲಾಗಿದೆ. ಅಷ್ಟಾದರೂ ಆತ ಅತ್ತಿಬೆಲೆ ಚೆಕ್‌ಪೋಸ್ಟ್‌ಗೆ ಬರುತ್ತಿದ್ದ. ವಾಹನಗಳನ್ನು ತಡೆದು ಚಾಲಕರನ್ನು ಬೆದರಿಸುತ್ತಿದ್ದ. ಆತನನ್ನೇ ಮಧ್ಯವರ್ತಿ ಮಾಡಿಕೊಂಡು ಇನ್‌ಸ್ಪೆಕ್ಟರ್‌ಗಳು ಲಂಚ ಪಡೆಯುತ್ತಿದ್ದರು.’

‘ಸಾರಿಗೆ ಇಲಾಖೆಯ ಕೆಲ ಅಧಿಕಾರಿಗಳು ತಮ್ಮದೇ ತಂಡ ಕಟ್ಟಿಕೊಂಡು ಈ ರೀತಿ ಕೃತ್ಯ ಎಸಗುತ್ತಿದ್ದಾರೆ. ಈ ಬಗ್ಗೆಯೂ ತನಿಖೆ ಮುಂದುವರಿದಿದೆ’ ಎಂದು ಮೂಲಗಳು ಹೇಳಿವೆ.


ಕರಿಯಪ್ಪ ಹಾಗೂ ಜಯಣ್ಣ

ಹೀಗಿತ್ತು ಕಾರ್ಯಾಚರಣೆ...
ಇನ್‌ಸ್ಪೆಕ್ಟರ್‌ಗಳು ಲಂಚ ಪಡೆದು ಕಿರುಕುಳ ನೀಡುತ್ತಿದ್ದ ಬಗ್ಗೆ ಸರಕು ಸಾಗಣೆ ವಾಹನಗಳ ಮಾಲೀಕರು ಚನ್ನಣ್ಣನವರ ಅವರಿಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಲು ಮುಂದಾದ ಚನ್ನಣ್ಣನವರ, ಅತ್ತಿಬೆಲೆ ಟೋಲ್‌ಗೇಟ್‌ ಬಳಿ ಚಾಲಕನ ವೇಷದಲ್ಲಿ (ಹಳೇ ಅಂಗಿ ತೊಟ್ಟಿದ್ದರು. ತಲೆಗೆ ಟವಲ್ ಸುತ್ತಿದ್ದರು) ಗುರುವಾರ ರಾತ್ರಿ ಹಾಜರಾಗಿದ್ದರು. ಸಿಬ್ಬಂದಿ ಸಹ ಅವರ ಜೊತೆಗಿದ್ದರು.

ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಯೊಂದನ್ನು ಏರಿದ್ದ ಚನ್ನಣ್ಣನವರ, ಅದನ್ನು ತಾವೇ ಚಲಾಯಿಸಿಕೊಂಡು ಅತ್ತಿಬೆಲೆ ಚೆಕ್‌ಪೋಸ್ಟ್‌ ತಲುಪಿದ್ದರು. ಅದೇ ಸಂದರ್ಭದಲ್ಲೇ ಗೃಹ ರಕ್ಷಕ ವಿವೇಕ್‌ ಲಾರಿ ತಡೆದಿದ್ದ. ಅದೇ ವೇಳೆ ಸ್ಥಳಕ್ಕೆ ಬಂದಿದ್ದ ಮತ್ತೊಂದು ಸರಕು ಸಾಗಣೆ ವಾಹನವನ್ನೂ ಆತನೇ ತಡೆದು ನಿಲ್ಲಿಸಿದ್ದ. ಅದರ ಚಾಲಕನಿಂದ ಲಂಚ ಪಡೆದು, ಅದನ್ನು ಇನ್‌ಸ್ಪೆಕ್ಟರ್‌ಗಳಿಗೆ ಹೋಗಿ ಕೊಟ್ಟಿದ್ದ. ಚನ್ನಣ್ಣನವರ ಇದನ್ನೆಲ್ಲ ನೋಡುತ್ತಲೇ, ‘ಸಾಹೇಬ್ರೇ ಬಿಟ್ಟು ಬಿಡಿ. ಲಾರಿಯಲ್ಲಿ ಅಗತ್ಯ ವಸ್ತುಗಳಿವೆ. ಬೇಗನೇ ನಗರಕ್ಕೆ ತೆಗೆದುಕೊಂಡು ಹೋಗಬೇಕು’ ಎಂದು ಕೋರಿದ್ದರು. ಅವರ ಬಳಿಯೂ ಇನ್‌ಸ್ಪೆಕ್ಟರ್‌ಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅವಾಗಲೇ ಚನ್ನಣ್ಣನವರ ಆರೋಪಿಗಳನ್ನು ಬಂಧಿಸಿದರು.

ಇನ್‌ಸ್ಪೆಕ್ಟರ್‌ಗಳ ಅಮಾನತು
ಲಂಚ ಪಡೆದ ಆರೋಪದಡಿ ಪೊಲೀಸರು ಬಂಧಿಸಿರುವ ಜಯಣ್ಣ ಹಾಗೂ ಕರಿಯಪ್ಪ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು