ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್ ಶಾ ತಂತ್ರಕ್ಕೆ ತತ್ತರಿಸಿದ ‘ಮೈತ್ರಿ’ ಪಡೆ !

ಶಾಸಕರೊಂದಿಗೆ ನೇರಾ– ನೇರಾ ಮಾತುಕತೆ
Last Updated 10 ಜುಲೈ 2019, 2:16 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯ ‘ಸೈಲೆಂಟ್‌ ಆಪರೇಷನ್‌’ಗೆ ಜೆಡಿಎಸ್‌ ಮಾತ್ರವಲ್ಲ ಕಾಂಗ್ರೆಸ್‌ನ ಘಟಾನುಘಟಿ ನಾಯಕರೇ ಬೇಸ್ತು ಬಿದ್ದಿದ್ದಾರೆ. ಈ ಬಾರಿ ‘ಆಪರೇಷನ್‌’ ಯಶಸ್ಸು ಕಾಣಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ತಂತ್ರಗಳೇ ಕಾರಣ ಎಂದು ಹೇಳಲಾಗುತ್ತಿದೆ.

ಈ ಬಾರಿ ಅತ್ಯಂತ ಕರಾರುವಾಕ್ಕಾದ ಹೆಜ್ಜೆಗಳನ್ನು ಇಡಲಾಗಿದೆ. ಶಾಸಕ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಪಕ್ಷ ಸೇರಲು ಬಯಸುವ ಶಾಸಕರೊಂದಿಗೆ ಮಾತನಾಡಿ, ನಿರ್ಧಾರ ಖಚಿತವಾದ ಬಳಿಕವೇ ಹಸಿರು ನಿಶಾನೆ ನೀಡಲಾಗಿದೆ.

ಆನಂದ್ ಸಿಂಗ್‌ ರಾಜೀನಾಮೆ ಕೊಟ್ಟ ದಿನವೇ ಇನ್ನೂ ಆರು ಶಾಸಕರು ರಾಜೀನಾಮೆ ನೀಡಬೇಕಿತ್ತು. ಆದರೆ, ಒಬ್ಬ ಶಾಸಕ ಕೊನೆಯ ಕ್ಷಣದಲ್ಲಿ ರಾಜೀನಾಮೆಗೆ ಹಿಂದೇಟು ಹಾಕಿದ ಕಾರಣ. ಆರು ಶಾಸಕರ ರಾಜೀನಾಮೆಯನ್ನು ತಡೆ ಹಿಡಿಯಲಾಯಿತು. ಇದರಿಂದಾಗಿ ರಮೇಶ ಜಾರಕಿಹೊಳಿ ಅವರೂ ಅಂದು ರಾಜೀನಾಮೆ ನೀಡಲಿಲ್ಲ.

ಆಪರೇಷನ್‌ ಅತ್ಯಂತ ಗೋಪ್ಯವಾಗಿ ನಡೆಸುವ ಉದ್ದೇಶದಿಂದ ಈ ಹಿಂದೆ ಮಾಹಿತಿ ಸೋರಿಕೆ ಮಾಡಿದ್ದ ನಾಯಕರನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲಿಲ್ಲ. ಹೀಗಾಗಿ ಏನು ನಡೆಯುತ್ತಿದೆ ಎಂಬುದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೊಬ್ಬರಿಗೆ ಮಾತ್ರ ‘ಆಪರೇಷನ್‌’ನ ಖಚಿತ ಮಾಹಿತಿ ಸಿಗುತ್ತಿತ್ತು.

ಬಹಳ ಹಿಂದೆಯೇ ವೇದಿಕೆ ಸಿದ್ಧ: ಕರ್ನಾಟಕದ ಆಪರೇಷನ್‌ಗೆ ಬಹಳ ಹಿಂದೆಯೇ ವೇದಿಕೆ ಸಿದ್ಧಪಡಿಸಲಾಗಿತ್ತು.ಲೋಕಸಭಾ ಚುನಾವಣೆಗೆ ಮುನ್ನ ಮತ್ತು ಆ ಬಳಿಕ ಪಶ್ಚಿಮ ಬಂಗಾಳ, ಮಹಾರಾಷ್ಟ್ರವೂ ಸೇರಿ ಹಲವುರಾಜ್ಯಗಳಲ್ಲಿ ಕಾಂಗ್ರೆಸ್‌, ಟಿಎಂಸಿ, ಟಿಡಿಪಿಯ ಶಾಸಕರು ಮತ್ತು ರಾಜ್ಯಸಭಾ ಸದಸ್ಯರನ್ನು ಆಪರೇಷನ್‌ ಮಾಡಿತ್ತು. ಆ ರಾಜ್ಯಗಳಲ್ಲಿ ಆಪರೇಷನ್‌ ಯಶಸ್ವಿ ಆಗುತ್ತಿದ್ದಂತೆ, ಸದ್ದುಗದ್ದಲವಿಲ್ಲದೇ, ಕರ್ನಾಟಕದ ಆಪರೇಷನ್‌ ಪ್ಲಾನ್‌ ಕಾರ್ಯಗತಗೊಳಿಸಲು ಬಿಜೆಪಿ ಸಜ್ಜಾಯಿತು.

ಅತೃಪ್ತರಲ್ಲಿ ಎಷ್ಟು ಜನ ಬರಲು ಸಿದ್ಧರಿದ್ದಾರೆ ಎಂಬುದನ್ನು ತಲೆ ಎಣಿಕೆ ಮಾಡಿ ಅವರನ್ನು ಸಂಪರ್ಕಿಸುವ ಕೆಲಸವನ್ನು ಪಕ್ಷದ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರಿಗೆ ವಹಿಸಲಾಯಿತು. ಅದಾಗಲೇ ರಮೇಶ್‌ ಜಾರಕಿಹೊಳಿ ಮತ್ತು ತಂಡ ಒಂದು ಕಾಲು ಹೊರಗಿಟ್ಟಿದ್ದರಿಂದ, ಇನ್ನಷ್ಟು ಅತೃಪ್ತರನ್ನು ಒಟ್ಟುಗೂಡಿಸುವ ಜವಾಬ್ದಾರಿ ಅರವಿಂದ್‌ ಹೆಗಲಿಗೆ ಬಿತ್ತು.

ಆರಂಭದಿಂದಲೂ ಮೈತ್ರಿ ಸರ್ಕಾರದ ಬಗ್ಗೆ ವಿವಿಧ ಕಾರಣಗಳಿಂದ ಅಸಮಾಧಾನ ಹೊಂದಿದ್ದ ಸಿದ್ದರಾಮಯ್ಯ ಅವರ ಆಪ್ತ ವಲಯದ ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಭೈರತಿ ಬಸವರಾಜ್, ಮುನಿರತ್ನ ಅವರನ್ನು ಅರವಿಂದ ಸಂಪರ್ಕಿಸಿದರೆ, ಎಚ್‌. ವಿಶ್ವನಾಥ್‌, ರಾಮಲಿಂಗಾರೆಡ್ಡಿ ಇನ್ನು ಮುಂತಾದವರನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಪರ್ಕಿಸಿದರು ಎನ್ನಲಾಗಿದೆ.

ಇವರೆಲ್ಲರೂ ಬೇರೆ, ಬೇರೆ ಕಾರಣಗಳಿಗೆ ಮೈತ್ರಿ ಸರ್ಕಾರದ ಬಗ್ಗೆ ಒಳಗೊಳಗೇ ಕುದಿಯುತ್ತಿದ್ದರು. ಇವರು ಪಕ್ಷ ತೊರೆಯಲು ಸಿದ್ಧ ಎಂಬುದು ಖಚಿತವಾದ ಬಳಿಕ ನೇರವಾಗಿ ಅಮಿತ್‌ಶಾ ಅವರ ಜತೆ ದೂರವಾಣಿ ಜತೆ ಮಾತನಾಡಿಸಲು ವ್ಯವಸ್ಥೆ ಮಾಡಿಸಲಾಗುತ್ತಿತ್ತು ಎಂದು ಮೂಲಗಳು ಹೇಳಿವೆ.

ಬಳ್ಳಾರಿ ಹೊಣೆ ಶ್ರೀರಾಮುಲುಗೆ
ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಾಸಕರು ಮತ್ತು ಜೆಡಿಎಸ್‌ ಶಾಸಕರನ್ನು ಆಪರೇಷನ್‌ ಮಾಡುವ ಉಸ್ತುವಾರಿ ಪಕ್ಷದ ಉಪಾಧ್ಯಕ್ಷ ಬಿ.ಶ್ರೀರಾಮುಲು ಅವರಿಗೇ ನೀಡಲಾಗಿತ್ತು. ಆನಂದ್‌ ಸಿಂಗ್‌ ಬಿಜೆಪಿಗೆ ಬರಲು ಒಪ್ಪಿಕೊಂಡಿದ್ದರು.

ಅಲ್ಲದೇ, ಗಣೇಶ್‌ ಮತ್ತು ಭೀಮಾನಾಯ್ಕ ಅವರನ್ನು ಬಿಜೆಪಿಗೆ ಕರೆ ತರುವುದಾದರೆ, ತಾವು ಬರುವುದಿಲ್ಲ ಎಂಬ ಷರತ್ತು ಹಾಕಿದ್ದರು. ಇವರಿಬ್ಬರೊಂದಿಗೆ ಸಂಬಂಧ ಹಳಸಿರುವುದೇ ಆನಂದ್‌ ನಕಾರಕ್ಕೆ ಕಾರಣ. ಇದರಿಂದಾಗಿ ಗಣೇಶ್‌ ಮತ್ತು ಭೀಮಾನಾಯ್ಕ ಅವರು ಬಿಜೆಪಿಗೆ ಬರಲು ತಯಾರಿದ್ದರೂ ಬಿಜೆಪಿ ಆ ಪ್ರಯತ್ನಕ್ಕೆ ತಡೆ ಹಿಡಿದಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ...

6ಕ್ಕೂ ಹೆಚ್ಚು ಶಾಸಕರ ರಾಜೀನಾಮೆ ಸಾಧ್ಯತೆ–http://bit.ly/2RXrabi

ಮೈತ್ರಿ ನಾಯಕರಿಂದಲೂ ‘ಆಪರೇಷನ್’–http://bit.ly/2L9GFMI

ಸರ್ಕಾರ ರಚನೆಯ ಮೂಡ್‌ನಲ್ಲಿ ಬಿಜೆಪಿ–http://bit.ly/2YGYgie

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT