ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಬೆಳೆ ನನ್ನ ಹಕ್ಕು ಇದು ರೈತನ ಮಂತ್ರ: ಎಪಿಎಂಸಿ ಕಾಯ್ದೆ ಬಗ್ಗೆ ಸಿಎಂ ಮಾತು

Last Updated 15 ಮೇ 2020, 8:45 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನ ಬೆಳೆ ನನ್ನ ಹಕ್ಕು’ ಇದು ರೈತನ ಮಂತ್ರ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಎಪಿಎಂಸಿ ತಿದ್ದುಪಡಿ ಕಾಯ್ದೆ ಕುರಿತುಸಮರ್ಥಿಸಿಕೊಂಡರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಪಿಎಂಸಿ ತಿದ್ದುಪಡಿ ಕಾಯ್ದೆಯ ಅನುಷ್ಠಾನದಿಂದ ‘ರೈತರೇ ಮೊದಲು’ ಎಂಬ ಘೋಷವಾಕ್ಯದ ಅನುಷ್ಠಾನ ಸಾಧ್ಯವಾಗುತ್ತದೆ. ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣದಲ್ಲಿ ಅಥವಾ ನೇರವಾಗಿ ಮಾರಾಟ ಮಾಡುವ ಅವಕಾಶ ಹೊಂದಿರುತ್ತಾರೆ’ ಎಂದು ಹೇಳಿದರು.

ಕಾಯ್ದೆಯಿಂದ ರೈತರಿಗೆ ತಮ್ಮ ಉತ್ಪನ್ನಗಳಿಗೆ ಯೋಗ್ಯ ಧಾರಣೆ ದೊರೆಯುವ ಅವಕಾಶ ಕಲ್ಪಿಸಿದಂತಾಗುತ್ತದೆ. ಈ ಕಾಯ್ದೆಯಿಂದ ಎಪಿಎಂಸಿ ಕಮಿಟಿಗಳ ಅಸ್ತಿತ್ವಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಅವು ಹಿಂದಿನಂತೆ ಮುಂದುವರೆಯುತ್ತವೆ ಎಂದರು.

ಮಾರುಕಟ್ಟೆ ಪ್ರಾಂಗಣದ ಹೊರಗೆ ಅಧಿಸೂಚಿತ ಕೃಷಿ ಉತ್ಪನ್ನಗಳ ವಹಿವಾಟು ನಡೆಸಲು ಮತ್ತು ಮೇಲ್ವಿಚಾರಣೆಯನ್ನು ಕೃಷಿ ಮಾರಾಟ ನಿರ್ದೇಶಕರು ಮಾಡುತ್ತಾರೆ. ಈ ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿ ಕಮಿಟಿಗಳನ್ನು ಮಾರುಕಟ್ಟೆ ಪ್ರಾಂಗಣಕ್ಕೆ ಸೀಮಿತಗೊಳಿಸಿ ರೈತರು ಉತ್ತಮ ಧಾರಣೆ ಪಡೆಯಲು ಅವಕಾಶ ಒದಗಿಸಿ ಆ ಮೂಲಕ ರೈತರ ಬೆಳೆಗಳಿಗೆ ಸ್ಪರ್ಧಾತ್ಮಕ ಮಾರುಕಟ್ಟೆ ಒದಗಿಸಿ ರೈತರ ಹಿತ ಕಾಯಲು ಅವಕಾಶ ನೀಡುತ್ತದೆ ಎಂದು ತಿಳಿಸಿದರು.

‌‌ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗಾಗಲಿ, ಕೇಂದ್ರ ಸರ್ಕಾರಕ್ಕಾಗಲಿ ರೈತರ ಹಿತಾಸಕ್ತಿ ಸಂರಕ್ಷಣೆಯೇ ಮುಖ್ಯ. 2022ರ ವೇಳೆಗೆ ರೈತರ ಆದಾಯ ದ್ವಿಗುಣ ಮಾಡಬೇಕು. ರೈತರಿಗೆ ನೆರವಾಗಬೇಕು ಎನ್ನುವುದಕ್ಕಾಗಿಯೇ ಅನೇಕ ಕಾರ್ಯಕ್ರಮಗಳನ್ನು ಮತ್ತು ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈಗಲೂ ಎಪಿಎಂಸಿ ಕಾಯ್ದೆಯನ್ನೇನೂ ನಾವು ತೆಗೆದು ಹಾಕಿಲ್ಲ. ಕೇವಲ ಕಾಯ್ದೆಯ ಎರಡು ಸೆಕ್ಷನ್‌ಗಳಿಗೆ ತಿದ್ದುಪಡಿ ಮಾಡಿದ್ದೇವೆ. ಈ ಸುಧಾರಣೆಯ ಉದ್ದೇಶ- ನಮ್ಮ ರೈತರಿಗೆ ಮಾರುಕಟ್ಟೆಯ ಹೆಚ್ಚಿನ ಆಯ್ಕೆಗಳು ಲಭಿಸಲಿವೆ. ನಮ್ಮ ರೈತರು ಎಪಿಎಂಸಿ ಯಾಗಲೀ ಅಥವಾ ಇತರೇ ವರ್ತಕರ ಅಧೀನಕ್ಕೆ ಒಳಪಡುವುದಿಲ್ಲ. ತಮ್ಮಿಷ್ಟದಂತೆ ಯಾರಿಗೆ ಬೇಕಾದರೂ ಉತ್ಪನ್ನ ಮಾರಾಟ ಮಾಡಬಹುದು ಎಂದು ಹೇಳಿದರು.

ಬೆಂಬಲ ಬೆಲೆಗೆ ಕಡಿಮೆ ದರದಲ್ಲಿ ಖರೀದಿ ಮಾಡುವ, ಎಷ್ಟೋ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇದೆ. ಈ ಶೋಷಣೆಯನ್ನು ಇನ್ನು ಮುಂದೆ ತಪ್ಪಿಸಬಹುದು. ಇನ್ನು ಮುಂದೆ ಎಪಿಎಂಸಿಯಲ್ಲಿ ವ್ಯವಹಾರ ಮಾಡುವ ವರ್ತಕರು ರೈತರನ್ನು ಶೋಷಣೆ ಮಾಡುವುದು ತಪ್ಪುತ್ತದೆ ಎಂದರು.

ಖಾಸಗಿಯವರೂ ಎಪಿಎಂಸಿ ಹೊರಗಡೆ ವ್ಯವಹಾರ ಮಾಡುವಾಗಲೂ ಕೂಡ ಷರತ್ತನ್ನು ಪಾಲಿಸಬೇಕಾಗುತ್ತದೆ. ಸರ್ಕಾರದ ಅನುಮತಿ ಪಡೆಯಬೇಕಾಗಿದೆ. ಇದೆಲ್ಲವೂ ನಮ್ಮ ರೈತರ ಹಿತರಕ್ಷಣೆ, ಮಾರಾಟ ಸ್ವಾತಂತ್ರ್ಯ ನೀಡಲು ಸುಧಾರಣೆ ತರಲಾಗುತ್ತಿದೆ. ಆದರೆ, ಕೆಲವರು ಕಾಯ್ದೆ ವಿರುದ್ಧ ಅಪಪ್ರಚಾರ ಮಾಡಿ ನಮ್ಮ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.

ರೈತರ ಹಿತಕ್ಕೆ ಧಕ್ಕೆ ಬರುವುದಾದರೆ, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯುವುದಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT