ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರ‍್ಯಾಂಕ್‌ ಬರುವ ನಿರೀಕ್ಷೆ ಇತ್ತು’: ಸಿಇಟಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಮಾತು

Last Updated 25 ಮೇ 2019, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಸಿಇಟಿ ಪರೀಕ್ಷೆಯನ್ನು ಉತ್ತಮವಾಗಿ ಮಾಡಿದ್ದು, ಮೊದಲ 10 ರ‍್ಯಾಂಕ್‌ನಲ್ಲಿ ಬರುವ ವಿಶ್ವಾಸವಿತ್ತು. ಇದೀಗ 2 ನೇ ರ‍್ಯಾಂಕ್ ಬಂದಿದೆ. ಬಹಳ ಸಂತಸವಾಗಿದೆ. ಮೊದಲಿನಿಂದಲೂ ವಿಜ್ಞಾನಿ ಆಗಬೇಕು ಎನ್ನುವ ಬಯಕೆ ಇದೆ. ಸಂಶೋಧನೆ ಕ್ಷೇತ್ರದಲ್ಲಿ ಮುಂದುವರಿಯುತ್ತೇನೆ.’

ಸಿಇಟಿ ಎಂಜಿನಿಯರಿಂಗ್‌ನಲ್ಲಿ 2 ನೇ ರ‍್ಯಾಂಕ್ ಹಾಗೂ ಫಾರ್ಮಸಿಯಲ್ಲಿ 3 ನೇ ರ‍್ಯಾಂಕ್‌ ಪಡೆದಿರುವ ನಗರದ ಎಕ್ಸ್‌ಪರ್ಟ್‌ ಕಾಲೇಜಿನ ವಿದ್ಯಾರ್ಥಿ ಚಿನ್ಮಯ್‌ ಮಾತಿದು.

ಮೈಸೂರಿನವರಾದ ಚಿನ್ಮಯ ತಂದೆ ರವಿಶಂಕರ್‌, ತಾಯಿ ಸುಧಾ ರವಿಶಂಕರ್ ಸದ್ಯಕ್ಕೆ ಬಳ್ಳಾರಿಯಲ್ಲಿ ನೆಲೆಸಿದ್ದಾರೆ. ರಾಜ್ಯ ಬೀಜ ನಿಗಮದ ಸಹಾಯಕ ನಿರ್ದೇಶಕರಾಗಿ ರವಿಶಂಕರ್‌ ಬಳ್ಳಾರಿಯಲ್ಲಿ ಕೆಲಸ ಮಾಡುತ್ತಿದ್ದು, ಚಿನ್ಮಯ್‌ ಬಳ್ಳಾರಿಯ ಡ್ರೀಮ್‌ ವರ್ಲ್ಡ್‌ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಾಡಿದ್ದಾರೆ.

‘ಎರಡು ವರ್ಷ ಹಾಸ್ಟೆಲ್‌ನಲ್ಲಿದ್ದು, ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದೇನೆ. ಐಐಟಿ ಮದ್ರಾಸ್‌ನಲ್ಲಿ ಎಂಜಿನಿಯರಿಂಗ್ ಅಥವಾ ಇಂಡಿಯನ್‌ ಇನ್‌ಸ್ಟಿಟ್ಯೂಟರ್ ಆಫ್‌ ಸೈನ್ಸ್‌ನಲ್ಲಿ ಸಂಶೋಧನೆ ಮಾಡಬೇಕು ಎನ್ನುವ ಬಯಕೆ ನನ್ನದು’ ಎಂದು ಚಿನ್ಮಯ್‌ ಹೇಳುತ್ತಾರೆ.

‘ವೈದ್ಯನಾಗುವ ಹೆಬ್ಬಯಕೆ’

ಬಿಎಸ್ಸಿ ಕೃಷಿಯಲ್ಲಿ 2 ನೇ ರ‍್ಯಾಂಕ್‌ ಹಾಗೂ ನ್ಯಾಚರೋಪತಿಯಲ್ಲಿ 6 ನೇ ರ‍್ಯಾಂಕ್‌ ಪಡೆದಿರುವ ಎಕ್ಸ್‌ಪರ್ಟ್‌ ಕಾಲೇಜಿನ ಭುವನ್‌ ವಿ.ಬಿ.ಗೆ ವೈದ್ಯನಾಗುವ ಆಸೆ ಇದೆ.

‘ನೀಟ್‌ ಪರೀಕ್ಷೆಯ ಫಲಿತಾಂಶವನ್ನು ಕಾಯುತ್ತಿದ್ದೇನೆ. ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ನನ್ನ ಆಸೆ. ಬೆಂಗಳೂರಿನವನಾದ ನಾನು, ಎರಡು ವರ್ಷಗಳಿಂದ ಇಲ್ಲಿನ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಪಿಯುಸಿ ಕಲಿತಿದ್ದೇನೆ. ರ‍್ಯಾಂಕ್‌ ಬರುವ ನಿರೀಕ್ಷೆ ಇತ್ತು. ಆದರೆ, 2 ನೇ ರ‍್ಯಾಂಕ್‌ ಬರುತ್ತದೆ ಎಂದು ಎಣಿಸಿರಲಿಲ್ಲ’ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

ಭೂವನ್‌ ವಿ.ಬಿ., ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಬಿ.ಎಂ. ವೀರೇಗೌಡ ಹಾಗೂ ಡಾ. ಲೀನಾ ಗೌಡರ ದಂಪತಿಯ ಪುತ್ರ.

ಮೈಸೂರಿನ ಇಬ್ಬರ ಸಾಧನೆ

ಮೈಸೂರಿನ ಬೇಸ್‌ ಪಿಯು ಕಾಲೇಜಿನ ವಿದ್ಯಾರ್ಥಿ ವಿ.ವಾಸುದೇವ, ಯೋಗವಿಜ್ಞಾನದಲ್ಲಿ 2ನೇ ರ್‍ಯಾಂಕ್‌ ಪಡೆದಿದ್ದಾರೆ. ಪಶು ವಿಜ್ಞಾನ (4), ಔಷಧ ವಿಜ್ಞಾನ (7), ಬಿ-ಫಾರ್ಮಾ ಹಾಗೂ ಡಿ-ಫಾರ್ಮಾ (7), ಕೃಷಿ ವಿಜ್ಞಾನ (13) ವಿಭಾಗದಲ್ಲಿಯೂ ಉತ್ತಮ ಸ್ಥಾನ ಪಡೆದಿರುವ ಅವರು ಎಂಜಿನಿಯರಿಂಗ್‌ ವಿಭಾಗದಲ್ಲಿ 193ನೇ ರ‍್ಯಾಂಕ್ ಪಡೆದಿದ್ದಾರೆ.

‘ಫಲಿತಾಂಶ ಸಂತಸ ನೀಡಿದೆ. ನಾನು ನೀಟ್‌ ಫಲಿತಾಂಶ ಎದುರುನೋಡುತ್ತಿದ್ದೇನೆ. ವೈದ್ಯಕೀಯ ಶಿಕ್ಷಣ ಪಡೆಯುವುದು ನನ್ನ ಆಸೆಯಾಗಿದೆ’ ಎಂದು ವಾಸುದೇವ ‘ಪ್ರಜಾವಾಣಿ’ಗೆ ತಿಳಿಸಿದರು.

ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆ ಪಿಯುಕಾಲೇಜಿನ ವಿದ್ಯಾರ್ಥಿ ರೋಹಿತ್ ರಾಜ್, ಬಿಎಸ್ಸಿ ಕೃಷಿ ವಿಜ್ಞಾನದಲ್ಲಿ 6ನೇರ‍್ಯಾಂಕ್ ಪಡೆದಿದ್ದಾರೆ. ಇವರು ಕೃಷಿ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದರು.

**

ಕೋಚಿಂಗ್‌ಗೆ ಹೋಗಿದ್ದರಿಂದ ಪರೀಕ್ಷೆ ಎದುರಿಸಲು ಅನುಕೂಲವಾಯಿತು. ಮೂಲ ವಿಜ್ಞಾನ ಮತ್ತು ಕೃಷಿ ವಿಜ್ಞಾನದಲ್ಲಿ ಆಸಕ್ತಿಯಿದೆ. ಯೋಚಿಸಿ ಮುಂದಿನ ಕೋರ್ಸ್‌ ಆಯ್ದುಕೊಳ್ಳುತ್ತೇನೆ.
–ಕೀರ್ತನಾ ಎಂ ಅರುಣ್‌,ನ್ಯಾಷನಲ್‌ ಪಬ್ಲಿಕ್‌ ಶಾಲೆ, ಬೆಂಗಳೂರು

**

ಜೆಇಇ ಅಡ್ವಾನ್ಸ್‌ ಪರೀಕ್ಷೆಗೆ ಓದುತ್ತಿದ್ದೇನೆ. ಈ ಮಧ್ಯೆ ಸಿಇಟಿ ಬರೆದೆ. ಮುಂದೆ ಉತ್ತಮ ಎಂಜಿನಿಯರ್‌ ಆಗುವ ಗುರಿಯಿದೆ.
– ಸಾಯಿ ಸಾಕೇತಿಕಾ ಚೆಕುರಿ, ಚೈತನ್ಯ ಟೆಕ್ನೊ ಕಾಲೇಜು, ಬೆಂಗಳೂರು

**

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT