ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ | ಕಷ್ಟ ಹೇಳಿಕೊಂಡ ಬಾಲ ತಾಯಂದಿರು

ಬಾಲ್ಯವಿವಾಹದ ಕಷ್ಟ ತಿಳಿಸಲು ಅಪರೂಪದ ಪ್ರಯತ್ನ
Last Updated 11 ಡಿಸೆಂಬರ್ 2019, 2:06 IST
ಅಕ್ಷರ ಗಾತ್ರ

ಬೆಂಗಳೂರು: ಬಾಲ್ಯವಿವಾಹ ನಿಷೇಧ ಜಾರಿಯಲ್ಲಿದ್ದರೂ, ಅದು ಇನ್ನೂ ನಿಂತಿಲ್ಲ. ನಿಲ್ಲಿಸುವ ಪ್ರಯತ್ನವೂ ಫಲ ನೀಡಿಲ್ಲ. ಬಾಲ ತಾಯಂದಿರನ್ನು ಕರೆ ತಂದು, ಅವರಿಂದಲೇ ತಮ್ಮ ಕಷ್ಟದ ಬಾಳನ್ನು ಹಿರಿಯ ಅಧಿಕಾರಿಗಳ ಮುಂದೆ ವಿವರಿಸುವ ಯತ್ನವನ್ನು ಮಂಗಳವಾರ ಇಲ್ಲಿ ನಡೆಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ನಿರ್ದೇಶಕ ಕೆ.ಎ.
ದಯಾನಂದ ಅವರ ಕಚೇರಿಗೆ ಬಂದ ಆರು ಮಂದಿ ಬಾಲ ತಾಯಂದಿರು ಎಳೆ ಎಳೆಯಾಗಿ ತಮ್ಮ ಕಷ್ಟ ಹೇಳಿಕೊಂಡರು. ಈ ಪೈಕಿ 13 ವರ್ಷದ ಬಾಲಕಿಯ ಕಂಕುಳಲ್ಲಿ ಒಂದು ವರ್ಷದ ಮಗು ಇತ್ತು. ಇನ್ನೊಬ್ಬ ಬಾಲಕಿ ಇಬ್ಬರು ಪುಟಾಣಿ ಮಕ್ಕಳನ್ನು ತಬ್ಬಿಕೊಂಡಿದ್ದಳು. ಬಂದ ಬಾಲ ತಾಯಂದಿರ ಪೈಕಿ ಅತಿ ಹಿರಿಯಳ ವಯಸ್ಸು 17.

‘ಮದುವೆಯಾಗಿ ಗಂಡನ ಮನೆಯಲ್ಲಿದ್ದೇವೆ, ನಮ್ಮನ್ನು ಶಾಲೆಗೆ ಸೇರಿಸಿ ಕೊಳ್ಳುತ್ತಿಲ್ಲ, ನಾವು ಮನೆಯಲ್ಲಿ ಕಾಯಂ ಸೊಸೆಯಂದಿರು ಆಗಿಬಿಟ್ಟಿದ್ದೇವೆ, ನಮಗೆ ಆರ್ಥಿಕ ಸ್ವಾವಲಂಬನೆ ಇಲ್ಲ, ನಮ್ಮ ಬಾಲ್ಯ ಕಸಿದುಕೊಳ್ಳಲಾಗಿದೆ,ನಮ್ಮಲ್ಲಿ ಕೆಲವರಿಗೆ ಲೈಂಗಿಕ ಸೋಂಕೂ ಇದೆ...’ ಹಲವರು ಹಲವು ಬಗೆಯಲ್ಲಿ ಕಷ್ಟ ತೋಡಿಕೊಂಡರು.

ಮಕ್ಕಳ ಕಷ್ಟಗಳಿಗೆ ಪೂರಕವಾಗಿ ಮಾತನಾಡಿದ ಚೈಲ್ಡ್‌ ರೈಟ್‌ ಟ್ರಸ್ಟ್‌ನ ವಾಸುದೇವ ಶರ್ಮಾ, ‘2017ರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಪ್ರಕಾರ, 18 ವರ್ಷದೊಳಗಿನ ಹೆಂಡತಿಯೊಂದಿಗಿನ ಲೈಂಗಿಕ ಸಂಬಂಧವನ್ನು ಅತ್ಯಾಚಾರ ಎಂದೇ ಪರಿಗಣಿಸಲಾಗಿದೆ. ಈ ಒಂದು ಪ್ರಮುಖ ಅಂಶವನ್ನು ಅಧಿಕಾರಿಗಳು ಗಮನಿಸಿದರೆ ಪರಿಸ್ಥಿತಿ ಸ್ವಲ್ಪ ಸುಧಾರಿಸೀತು’ ಎಂದರು.

ವಿವಾಹವಾದ ಬಾಲಕಿಯರಿಗೆ ವಿಚ್ಛೇದನ ಕೊಡಿಸಿ, ಅವರು ಹೊಸ ಜೀವನ ಸಾಗಿಸುವುದಕ್ಕೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲೂ ಚರ್ಚೆ ನಡೆಯಿತು.

ಹಿನ್ನೆಲೆ: ಬಾಗಲಕೋಟೆ, ಬೆಳಗಾವಿ, ಬೀದರ್‌, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಈಗಲೂ ನಡೆಯುತ್ತಿರುವ ಬಾಲ್ಯವಿವಾಹ ಕುರಿತು 3 ವರ್ಷಗಳಿಂದ ಅಧ್ಯಯನ ನಡೆಸಲಾಗುತ್ತಿದೆ.

ತಜ್ಞರ ಸಮಿತಿ ರಚಿಸಿ, ಕಾಲ ಕಾಲಕ್ಕೆ ಸಭೆ ನಡೆಸಿ ಸಮಸ್ಯೆ ಚರ್ಚಿಸುವ ನಿರ್ಧಾರಕ್ಕೆ ಬರಲಾಗಿತ್ತು. ಸರ್ಕಾರ ಸಮಿತಿಯನ್ನೂ ರಚಿಸಿತ್ತು. ಸಮಿತಿಯಲ್ಲಿ ವಾಸುದೇವ ಶರ್ಮಾ ಅವರಲ್ಲದೆ,ನೀನಾ ಪಿ. ನಾಯಕ್‌, ಮೀನಾ ಜೈನ್‌, ರಾಘವೇಂದ್ರ ಕುಣಿಲ, ಜೈನಾ ಕೊತಾರಿ ಇದ್ದಾರೆ. ಸಮಿತಿಯ ಮೊದಲ ಸಭೆ ವರ್ಷ ಕಳೆದರೂ ನಡೆದಿರಲಿಲ್ಲ.

ಕೊನೆಗೂ ಮಂಗಳವಾರ ನಡೆದ ಮೊದಲ ಸಭೆಯೇ ಬಾಲ ತಾಯಂದಿರ ಅಳಲಿಗೆ ಧ್ವನಿಯಾಯಿತು.

‘ಸೌಲಭ್ಯ ಕೊಡಿಸುತ್ತೇವೆ’

‘ಬಾಲ ತಾಯಂದಿರಿಗೆ ಎಂತಹ ಸೌಲಭ್ಯ ಸಿಗಬೇಕೋ, ಅದನ್ನು ಕೊಡಿಸುತ್ತೇವೆ,‘ಮಾತೃವಂದನೆ’, ‘ಭಾಗ್ಯಲಕ್ಷ್ಮಿ’ ಯೋಜನೆಗಳಿಗೆ ಇವರನ್ನೂ ಸೇರಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಮೊದಲಾಗಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಗೆ ತೆರಳಿ ಬಾಲ್ಯವಿವಾಹ ಪಿಡುಗಿನ ಕುರಿತು ಖುದ್ದು ಪರಿಶೀಲನೆ ನಡೆಸಲಾಗುವುದು’ ಎಂದು ಭರವಸೆ ನೀಡಿದ ಅಧಿಕಾರಿಗಳು, 18 ವರ್ಷದೊಳಗಿನ ವಿವಾಹಿತರು ತಮ್ಮ ನಿಜವಾದ ವರ್ಷವನ್ನು ದಾಖಲಿಸಬೇಕು, ಶಾಲೆಗಳು ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಬೇಕುಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT