ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಜ್ವರಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಡ: ತಜ್ಞರೊಂದಿಗೆ ಸಿ.ಎಂ ಸಮಾಲೋಚನೆ

ಕೋವಿಡ್ ನಿಯಂತ್ರಣ
Last Updated 1 ಜುಲೈ 2020, 19:24 IST
ಅಕ್ಷರ ಗಾತ್ರ

ಬೆಂಗಳೂರು: ‘ರೋಗ ಲಕ್ಷಣ ಇಲ್ಲದ ಅಥವಾ ಅತ್ಯಂತ ಕಡಿಮೆ ಜ್ವರದ ಲಕ್ಷಣಗಳಿದ್ದರೆ ಅವರನ್ನು ಆಸ್ಪತ್ರೆಗೆ ದಾಖಲಿಸದೆ ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ಆರೋಗ್ಯದ ಮೇಲೆ ನಿಗಾ ಇಡುವುದು ಸೂಕ್ತ. ಇದರಿಂದ ಆಸ್ಪತ್ರೆಗಳ ಮೇಲಿನ ಒತ್ತಡ ತಡೆಯಬಹುದು’ ಎಂದು ಬಹುತೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್–19 ನಿರ್ವಹಣೆ ಕುರಿತು ತಜ್ಞ ವೈದ್ಯರೊಂದಿಗೆ ಬುಧವಾರ ಇಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮಾಲೋಚನೆ ನಡೆಸಿದ ವೇಳೆ ಇಂತಹ ಹಲವು ಸಲಹೆಗಳನ್ನು ನೀಡಲಾಯಿತು.

ಕೋವಿಡ್ ಚಿಕಿತ್ಸೆಗೆ ಹಾಗೂ ನಿರ್ವಹಣೆಗೆ ಅಳವಡಿಬೇಕಾದ ಮಾರ್ಗಸೂಚಿಗಳನ್ನು ನಿಗದಿಪಡಿಸುವ ಕುರಿತು ಚರ್ಚಿಸಲಾಯಿತು.

‘ತೀವ್ರ ಸೋಂಕಿನ ಲಕ್ಷಣಗಳು ಹೊಂದಿರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿರುವವರು ಸೋಂಕಿತರಾದಲ್ಲಿ, ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಆದ್ಯತೆ ನೀಡಬೇಕು. ಪ್ರಕರಣ ದ್ವಿಗುಣಗೊಳ್ಳುವ ವೇಗ ತಗ್ಗಿಸಬೇಕು. ಮುಚ್ಚಿದ ಸ್ಥಳಗಳು, ನಿಕಟ ಸಂಪರ್ಕ ಹಾಗೂ ಜನಸಂದಣಿಯ ಸ್ಥಳಗಳಲ್ಲಿ ಜನತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ಟೆಲಿಮೆಡಿಸಿನ್ ವ್ಯವಸ್ಥೆಯ ಮೂಲಕ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಬಹುದು’ ಎಂದು ತಜ್ಞರು ಹೇಳಿದರು.

ಹೆಚ್ಚಿನ ಸಿಬ್ಬಂದಿ ಅಗತ್ಯ: ‘ಆರೋಗ್ಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಅಗತ್ಯವಿದೆ. ಸಂಪರ್ಕ ಪತ್ತೆ ಹಚ್ಚಲು ಹೆಚ್ಚುವರಿ ಮಾನವ ಸಂಪನ್ಮೂಲ ಬೇಕಿದ್ದು, ಇತರ ಇಲಾಖೆಯ ಸಿಬ್ಬಂದಿ ಸೇವೆ ಬಳಸಿಕೊಳ್ಳಬೇಕು. ಟೆಲಿ ಐಸಿಯು ಹಾಗೂ ಚಿಕಿತ್ಸೆಯ ನಿಗದಿತ ಮಾನದಂಡಗಳ ಕುರಿತು ಹೆಚ್ಚಿನ ತರಬೇತಿ ಅಗತ್ಯವಿದೆ. ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಸರಪಣಿ ಹಾಗೂ ಹೊಸ ಔಷಧಿಗಳ ಪೂರೈಕೆ ಸರಪಣಿ ಅಬಾಧಿತವಾಗಿರಬೇಕು’ ಎಂದರು.

ತಜ್ಞರ ಈ ಅಭಿಪ್ರಾಯಗಳ ಕುರಿತು ಸರ್ಕಾರದ ಹಂತದಲ್ಲಿ ವಿವರವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಶೀಘ್ರ ಮಾರ್ಗಸೂಚಿ: ‘ತಜ್ಞರ ಸಲಹೆಗಳನ್ನು ಸ್ವೀಕರಿಸಲಾಗಿದ್ದು, ಮುಖ್ಯಮಂತ್ರಿ ಅವರು ಶೀಘ್ರದಲ್ಲೇ ಮತ್ತೊಂದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಬಳಿಕ ಮುಂದಿನ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು’ ಎಂದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದರು.

ಸಭೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ ಭಾರತದ ಪ್ರತಿನಿಧಿ ಆಶಿಶ್ ಸತ್ಪತಿ, ಕಿಮ್ಸ್‌ನ ಡಾ.ಲೋಕೇಶ್, ಮಣಿಪಾಲ ಆಸ್ಪತ್ರೆಯ ಮುಖ್ಯಸ್ಥ ಡಾ.ಸುದರ್ಶನ್ ಬಲ್ಲಾಳ್, ತಜ್ಞರಾದ ಡಾ.ಅಂಜನಪ್ಪ, ಡಾ.ಶರಣ್ ಪಾಟೀಲ ಮತ್ತಿತರರಿದ್ದರು.

*
ಮಾಧ್ಯಮಗಳು ಜನರಿಗೆ ಗಾಬರಿ ಹುಟ್ಟಿಸಬಾರದು.ರೋಗ ಲಕ್ಷಣ ಇಲ್ಲದವರು ಆಸ್ಪತ್ರೆಗೆ ಬಂದು ದಾಖಲಾಗಬೇಕಿಲ್ಲ. ಆಗ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಆಗುವುದಿಲ್ಲ
-ಡಾ.ಸುದರ್ಶನ್‌ ಬಲ್ಲಾಳ್‌, ಮಣಿಪಾಲ ಆಸ್ಪತ್ರೆ

*
ಯಾವ ಆಸ್ಪತ್ರೆಯಲ್ಲಿ ಹಾಸಿಗೆ ಇದೆ ಅನ್ನುವುದು ಗೊತ್ತಾಗಬೇಕು. ಉಸಿರಾಟದ ತೊಂದರೆ ಇದ್ದರೆ ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು. ಭಯದ ವಾತಾವರಣ ಹೋಗಲಾಡಿಸಿ
-ಡಾ.ಶರಣ್‌ ಪಾಟೀಲ, ಸ್ಪರ್ಶ ಆಸ್ಪತ್ರೆ

*
ಬಳ್ಳಾರಿಯಲ್ಲಿ ಶವಗಳಿಗೆ ಅವಮಾನ ಮಾಡಿದಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಆರು ಮಂದಿಯನ್ನು ಅಮಾನತು ಮಾಡಲಾಗಿದೆ
-ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ

*
ಇನ್ನು ಮುಂದೆ ರಾತ್ರಿ ಕರ್ಫ್ಯೂ ಕಠಿಣವಾಗಿ ಜಾರಿಯಾಗಲಿದೆ. ಓಡಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಇದರ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT