ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಲ್ಲಿ ಭಿನ್ನಮತ: ಸಿದ್ದರಾಮಯ್ಯ ವಿರುದ್ಧ ಹಿರಿಯರ ಅಸಮಾಧಾನ

Last Updated 22 ಜನವರಿ 2020, 15:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ಮುಂದುವರಿದಿದ್ದು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಪಕ್ಷದ ಹಿರೀಕರು ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.

‘ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷ (ಸಿಎಲ್‌ಪಿ) ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪ್ರತ್ಯೇಕಿಸಬಾರದು’ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಶಾಸಕ ಜಿ.ಪರಮೇಶ್ವರ ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಹಿರಿಯ ನಾಯಕರಾದ ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ ಅವರು ‘ಸಿಎಲ್‌ಪಿ, ವಿರೋಧ ಪಕ್ಷದ ನಾಯಕನ ಸ್ಥಾನವನ್ನು ವಿಭಜಿಸಿ, ಇಬ್ಬರಿಗೆ ಏಕೆ ನೀಡಬಾರದು’ ಎಂದು ಪ್ರಶ್ನಿಸಿದ್ದಾರೆ.

ಈ ಇಬ್ಬರೂ ನಾಯಕರು ಮಂಗಳವಾರ ಸುದ್ದಿಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ, ‘ಪಕ್ಷದಲ್ಲಿ ಹಲವರು ಹಿರಿಯ ನಾಯಕರಿದ್ದಾರೆ. ಅಧಿಕಾರ ಹಂಚಿಕೆಯಿಂದ ಹೆಚ್ಚಿನವರಿಗೆ ಅವಕಾಶಗಳು ಸಿಗುತ್ತವೆ. ಮಹಾರಾಷ್ಟ್ರದಲ್ಲೂ ಇಂತಹ ಪ್ರಯತ್ನ ಮಾಡಲಾಗಿತ್ತು. ಯುಪಿಎನಲ್ಲೂ ಇದೇ ಮಾದರಿ ಅನುಸರಿಸಲಾಗಿತ್ತು’ ಎಂದರು.

‘ಕಾರ್ಯಾಧ್ಯಕ್ಷರ ಹುದ್ದೆಯನ್ನು ಹಿಂದೆಯೂ ಸೃಷ್ಟಿಸಲಾಗಿತ್ತು. ಮುಂದೆ ಎಷ್ಟೇ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದರೂ ಸಮಸ್ಯೆ ಆಗುವುದಿಲ್ಲ. ಎಲ್ಲದಕ್ಕೂ ಅಧ್ಯಕ್ಷರೇ ಮುಖ್ಯವಾಗುತ್ತಾರೆ. ಸಮನ್ವಯ ಸಮಿತಿ ರಚಿಸುವುದರಿಂದ ಪಕ್ಷಕ್ಕೆ ಸಹಕಾರಿಯಾಗಲಿದ್ದು, ಎಲ್ಲರ ನಡುವೆ ಹೊಂದಾಣಿಕೆ ತಂದು ಸಮನ್ವಯ ಸಾಧಿಸಲು ನೆರವಾಗಲಿದೆ’ ಎಂದು ಮುನಿಯಪ್ಪ ತಿಳಿಸಿದರು.

ಕಾರ್ಯಾಧ್ಯಕ್ಷರು ಬೇಡ: ‘ಕೆಪಿಸಿಸಿಗೆ ನಾಲ್ವರು ಕಾರ್ಯಾಧ್ಯಕ್ಷರು ಏಕೆ ಬೇಕು ಎಂಬುದು ಗೊತ್ತಿಲ್ಲ. ಈಗಿರುವ ಕಾರ್ಯಾಧ್ಯಕ್ಷ ಹಾಗೂ ಅಧ್ಯಕ್ಷ ಸ್ಥಾನವನ್ನೇ ಮುಂದುವರಿಸಿದರೆ ಸಾಕು’ ಎಂದು ಎಚ್.ಕೆ.ಪಾಟೀಲ ಪ್ರತಿಪಾದಿಸಿದರು.

‘ಕೆಪಿಸಿಸಿಗೆ ಕಾರ್ಯಾಧ್ಯಕ್ಷರು ಇಲ್ಲವೇ?’

ಮಂಡ್ಯ: ‘ಈ ಹಿಂದೆ ಆರ್‌.ವಿ. ದೇಶಪಾಂಡೆ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಿರಲಿಲ್ಲವೇ? ಡಿ.ಕೆ.ಶಿವಕುಮಾರ್‌ ಕಾರ್ಯಾಧ್ಯಕ್ಷ ಆಗಿರಲಿಲ್ಲವೇ? ಈಗಲೂ ಇಲ್ಲವೇ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ಪ್ರಶ್ನಿಸಿದರು.

‘ಕಾರ್ಯಾಧ್ಯಕ್ಷರ ನೇಮಕಾತಿಗೆ ನಾನೇ ಒತ್ತಡ ಹಾಕುತ್ತಿದ್ದೇನೆ ಎಂಬಂತೆ ಬಿಂಬಿಸಲಾಗುತ್ತಿದೆ. ನೇಮಕಾತಿ ಬೇಡ ಎಂದು ಜಿ. ಪರಮೇಶ್ವರ್‌ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT