ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ ಚುನಾವಣೆ: ಕಾಂಗ್ರೆಸ್‌ ನಾಯಕರ ಕಸರತ್ತು

ಎರಡು ಸ್ಥಾನಗಳಿಗೆ ಹಲವು ಆಕಾಂಕ್ಷಿಗಳು l ತಲೆನೋವಾದ ಆಯ್ಕೆ
Last Updated 16 ಜೂನ್ 2020, 22:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಲಭಿಸಲಿರುವ ಎರಡು ಸ್ಥಾನಗಳನ್ನು ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದವರಿಗೇ ನೀಡುವಂತೆ ಹೈಕಮಾಂಡ್‌ಗೆ ಶಿಫಾರಸು ಮಾಡಲು ಕಾಂಗ್ರೆಸ್‌ ರಾಜ್ಯ ನಾಯಕರು ಕಸರತ್ತು ಆರಂಭಿಸಿದ್ದಾರೆ.

ಈ ಮಧ್ಯೆ, ಈಗಾಗಲೇ ಸೂಚಿಸಿದ್ದ ಎರಡು ಹೆಸರುಗಳಿಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಹೆಸರುಗಳನ್ನು ಕೈ ಬಿಟ್ಟು ಬೇರೆಯವರನ್ನು ಆಯ್ಕೆ ಮಾಡಲು ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಎರಡು ಹೆಸರುಗಳನ್ನಷ್ಟೇ ಆಯ್ಕೆ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಟಿಕೆಟ್‌ ವಂಚಿತ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡುವ ಬಗ್ಗೆಯೂ ಹೈಕಮಾಂಡ್‌ ಮಟ್ಟದಲ್ಲಿ ಚಿಂತನೆ ಇದೆ.

ಎಂ.ಸಿ.ವೇಣುಗೋಪಾಲ್‌ (ಹಿಂದುಳಿದ) ಮತ್ತು ಐವಾನ್‌ ಡಿಸೋಜಾ (ಅಲ್ಪಸಂಖ್ಯಾತ) ನಿವೃತ್ತಿಯಾಗಿದ್ದು, ಮತ್ತೊಂದು ಅವಧಿಗೆ ಅವಕಾಶ ನೀಡುವಂತೆ ಇಬ್ಬರೂ ತಮ್ಮ ಬೆಂಬಲಿಗರ ಮೂಲಕ ಲಾಬಿ ನಡೆಸಿದ್ದಾರೆ. ಆದರೆ, ಹಿಂದುಳಿದ ವರ್ಗದ ಕೋಟಾದಿಂದ ತನಗೆ ಟಿಕೆಟ್‌ ನೀಡಬೇಕೆಂದು ಮಾಜಿ ಸಚಿವ ಎಂ.ಆರ್‌. ಸೀತಾರಾಂ ಪಟ್ಟು ಹಿಡಿದಿದ್ದಾರೆ. ಆದರೆ, ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.

ಅಲ್ಪಸಂಖ್ಯಾತ ಕೋಟಾದ ಟಿಕೆಟ್‌ಗೆ ನಿವೇದಿತ್‌ ಆಳ್ವಾ, ಐವಾನ್‌ ಡಿಸೋಜಾ ಮತ್ತು ನಜೀರ್‌ ಅಹ್ಮದ್‌ ಮಧ್ಯೆ ಪೈಪೋಟಿ ನಡೆದಿದೆ. ಮಗನಿಗೆ ಟಿಕೆಟ್‌ ಕೊಡಿಸಲು ಹಿರಿಯ ನಾಯಕಿ ಮಾರ್ಗರೆಟ್‌ ಆಳ್ವಾ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಐವಾನ್‌ ಡಿಸೋಜಾ ಮತ್ತು ನಜೀರ್‌ ಅಹ್ಮದ್‌ ಮತ್ತೆ ಟಿಕೆಟ್‌ ನೀಡುವಂತೆ ಆಗ್ರಹಿಸಿದ್ದಾರೆ. ಆದರೆ, ನಜೀರ್‌ ಅವರಿಗೆ ಮತ್ತೆ ಅವಕಾಶ ನೀಡದಂತೆ ಒಂದು ವರ್ಗ ಒತ್ತಡ ಹೇರುತ್ತಿದೆ ಎಂದೂ ಹೇಳಲಾಗಿದೆ.

ಈ ಮಧ್ಯೆ, ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT