ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರು ಸೇರಲು 410 ಕಿ.ಮೀ. ಕಾಲ್ನಡಿಗೆ ಆರಂಭಿಸಿದ ಕಾರ್ಮಿಕರು

Last Updated 26 ಮಾರ್ಚ್ 2020, 12:55 IST
ಅಕ್ಷರ ಗಾತ್ರ

ತುಮಕೂರು: ದೇಶದ ಲಾಕ್‌ಡೌನ್‌ನಿಂದ ಸಾರಿಗೆ ವ್ಯವಸ್ಥೆ ಇಲ್ಲ. ಹಾಗಾಗಿ ತಮಿಳುನಾಡಿನ ಹೊಸೂರಿನಲ್ಲಿ ನೆಲೆಸಿದ್ದ ಕೂಲಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ಸಾಗಿ ಹುಟ್ಟೂರಾದ ಕೊಪ್ಪಳ ಜಿಲ್ಲೆಯ ಹಳ್ಳಿಯನ್ನು ತಲುಪಲು 410 ಕಿ.ಮೀ. ಪ್ರಯಾಣ ಆರಂಭಿಸಿದ್ದಾರೆ.

ಈ ಕಾರ್ಮಿಕರು ತುಮಕೂರು ನಗರವನ್ನುಗುರುವಾರಮಧ್ಯಾಹ್ನದ ಸುಡುಬಿಸಿಲಿನಲ್ಲಿಯೇ ಹಾದುಹೋದರು.

ಕಾರ್ಮಿಕರು ಎದುರಿಸುರು ಬಿಡುತ್ತ ನಗರದ ಬಿ.ಎಚ್‌.ರಸ್ತೆಯಲ್ಲಿ ಮಧ್ಯಾಹ್ನ ಸಾಗುತ್ತ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

‘ಹೊಸೂರಿನ ಗಾಂಧಿನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದೆವು. ಈಗ ಕೆಲಸ ಇಲ್ಲ. ಅಲ್ಲಿದ್ದು ಏನು ಮಾಡೋಣಂತ ಊರು ದಾರಿ ಹಿಡಿದ್ದೇವೆ. ಯಾವ ಗಾಡಿಗಳೂ ಇಲ್ಲ. ಹಾಗಾಗಿ ನಡಕೊಂಡೆ ಊರು ಕಡಿ ನಡೆದಿದ್ದಿವಿ’ ಎಂದು ಕಾರ್ಮಿಕರಲ್ಲಿ ಒಬ್ಬರಾದ ಶಿವು ತಿಳಿಸಿದರು.

ಬುಧವಾರ ರಾತ್ರಿ 2 ಗಂಟೆಗೆ ಮನೆ ಬಿಟ್ಟಿದ್ದ ಈ ಕಾರ್ಮಿಕರು, ಗುರುವಾರ ಮಧ್ಯಾಹ್ನ 2ರ ಹೊತ್ತಿಗೆ ತುಮಕೂರು ತಲುಪಿದ್ದರು.

‘ನಡುಕೊಂಡು ಹೋಗಕಾಲಕ್ಕೆ ಸುಸ್ತಾದರೆ, ನೆರಳಿದ್ದಲ್ಲಿ ಸ್ವಲ್ಪ ಹೊತ್ತು ಕೂರುತ್ತಿದ್ದೇವೆ. ನೀರು ಸಿಕ್ಕಲ್ಲಿ ಕುಡಿಯುತ್ತಿದ್ದೇವೆ. ಅಂಗಡಿ, ಹೋಟೆಲ್‌ ಎಲ್ಲಾದರೂ ತೆರೆದಿದ್ದರೆ, ತಿನ್ನಲು ಏನಾದರೂ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಮತ್ತೊಬ್ಬ ಕಾರ್ಮಿಕ ತಿಳಿಸಿದರು.

‘ನಮ್ಮೂರು ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲ್ಲೂಕಿನ ಕೆ.ರಾಂಪುರ. ಊರಿಗೆ ಮುಟ್ಟಲು ಇನ್ನು ಎಷ್ಟು ದಿನ ಬೇಕೋ ಗೊತ್ತಿಲ್ಲ. ನಡಕೊಂಡು ಹೊಂಟಿವಿ. ನಾವು ಮೊದಲೆ ಬಿಸಿಲೂರಿನ ಮಂದಿ. ಈ ಬ್ಯಾಸಿಗಿ ಬಿಸಿಲೇನೂ ನಮಗ ಹೊಸದಲ್ಲ ಬಿಡ್ರಿ’ ಎನ್ನುತ್ತಲೇ ಕಾರ್ಮಿಕರು ಮುಂದೆ ಸಾಗಿದರು.

ನೀರು ವಿತರಿಸಿದ ಸಹೋದರರು

ಲಾಕ್‌ ಡೌನ್‌ನಿಂದ ಊರು–ಮನೆ ಸೇರಲಾದರೆ ಅತಂತ್ರ ಸ್ಥಿತಿಗೆ ಸಿಲುಕಿರುವ ಜನರಿಗೆ ಕ್ಯಾತ್ಸಂದ್ರದ ಫಿರೋಜ್‌ ಮತ್ತು ಮನ್ಸೂರ್‌ ಎಂಬ ಅಣ್ಣ–ತಮ್ಮ ಕುಡಿಯುವ ನೀರು ವಿತರಿಸುತ್ತಿದ್ದರು.

ಕೊಪ್ಪಳಕ್ಕೆ ಕಾಲ್ನಡಿಗೆಯಲ್ಲಿ ಸಾಗಿದ್ದ ಕಾರ್ಮಿಕರು ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ನಡೆಯುತ್ತಿದ್ದಾಗ, ಅವರನ್ನು ತಡೆದು ನೀರಿನ ಬಾಟಲ್‌ಗಳನ್ನು ವಿತರಿಸಿದರು.

‘ಸುಮಾರು 500 ಲೀಟರ್‌ ಬಾಟಲ್‌ ನೀರನ್ನು ಖರೀದಿಸಿದ್ದೇವೆ. ಸಾಧ್ಯವಾದಷ್ಟು ಬಾಟಲ್‌ಗಳನ್ನು ಕಾರಿನಲ್ಲಿ ಇಟ್ಟುಕೊಂಡು, ಅಗತ್ಯ ಇರುವವರಿಗೆ ವಿತರಣೆ ಮಾಡುತ್ತಿದ್ದೇವೆ’ ಎಂದು ಫಿರೋಜ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT