ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧಕಾಲದಲ್ಲಿ ಕೆಎಂಎಫ್‌ ಶಸ್ತ್ರಾಭ್ಯಾಸ: ಹೊರ ರಾಜ್ಯಗಳಿಗೆ ದುಂಬಾಲು

ಪುಡಿ ತಯಾರಿಕೆ ಸಾಮರ್ಥ್ಯ ಹೆಚ್ಚಿಸಲು ತರಾತುರಿ
Last Updated 1 ಏಪ್ರಿಲ್ 2020, 21:04 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಉಳಿಯುವ ಹಾಲನ್ನು ಬೀದಿಗೆ ಚೆಲ್ಲುವ ಸ್ಥಿತಿಗೆ ಹೈನುಗಾರರು ತಲುಪಿದ್ದಾರೆ. ಇಂತಹ ಹೊತ್ತಿನಲ್ಲಿ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಹಾಲಿನ ಬಳಕೆಯ ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ತೊಡಗಿದೆ.

ದಿನಕ್ಕೆ 16 ಲಕ್ಷ ಲೀಟರ್ ಹಾಲನ್ನು ಮಾತ್ರ ಪುಡಿಯಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಕೆಎಂಎಫ್‌ ಹೊಂದಿದ್ದು, ಹೀಗಾಗಿಯೇ ದಿನಕ್ಕೆ 8 ಲಕ್ಷ ಲೀಟರ್ ಉಳಿಯುತ್ತಿದೆ. ಇದನ್ನು ಏನು ಮಾಡುವುದು ಎಂಬ ದಾರಿಯನ್ನು ಕೆಎಂಎಫ್‌ ಈಗ ಹುಡುಕುತ್ತಿದೆ.

ರಾಜ್ಯದ 25 ಲಕ್ಷಕ್ಕೂ ಹೆಚ್ಚು ರೈತರಿಂದ 14 ಒಕ್ಕೂಟಗಳ ಮೂಲಕ 69 ಲಕ್ಷ ಲೀಟರ್ ಹಾಲನ್ನು ಕೆಎಂಎಫ್ ಪ್ರತಿದಿನಸಂಗ್ರಹಿಸುತ್ತಿದೆ. ಹಾಲು ಮತ್ತು ಮೊಸರಿನ ರೂಪದಲ್ಲಿ ಹೆಚ್ಚಿನ ಪ್ರಮಾಣವನ್ನು ಮಾರಾಟ ಮಾಡುತ್ತಿದ್ದು, ಉಳಿದ ಹಾಲನ್ನು ಚೀಸ್, ಐಸ್‌ಕ್ರೀಂ, ಫೇಡೆ ಸೇರಿದಂತೆ ಇತರೆ ಹಾಲಿನ ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ತಲುಪಿಸುತ್ತಿದೆ.

ಬೆಂಗಳೂರಿನಿಂದ ಲಕ್ಷಗಟ್ಟಲೆ ಜನ ಖಾಲಿಯಾಗಿರುವ ಮತ್ತು ಹೋಟೆಲ್‌, ಬೇಕರಿಗಳು ಬಂದ್ ಆಗಿರುವ ಕಾರಣ ಹಾಲಿನ ಮಾರಾಟ ಕಡಿಮೆಯಾಗಿದೆ. ಚೀಸ್‌ ಮಾರಾಟವಂತೂ ಸಂಪೂರ್ಣ ಸ್ಥಗಿತವಾಗಿದೆ. ಈಗ ಹಾಲಿನ ಪುಡಿ ತಯಾರಿಕೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಈಗ ಮೈ ಕೊಡವಿ ನಿಂತಿದೆ.

ರಾಮನಗರದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಹಾಲಿನ ಪುಡಿ ತಯಾರಿಕಾ ಘಟಕದ ನಿರ್ಮಾಣ ಕಾಮಗಾರಿ ಮೂರು ವರ್ಷದಿಂದ ನಡೆಯುತ್ತಲೇ ಇದೆ. ಪರಿಸ್ಥಿತಿ ಬಿಗಡಾಯಿಸಿದ ನಂತರ ಕಳೆದ ಎರಡು ದಿನಗಳಿಂದ ಪ್ರಾಯೋಗಿಕವಾಗಿ ಪುಡಿ ತಯಾರಿಕೆಯನ್ನು ಆರಂಭಿಸಲಾಗಿದೆ.

ಹೊರ ರಾಜ್ಯಗಳಲ್ಲಿ ಇರುವ ಖಾಸಗಿ ಘಟಕಗಳ ಕದವನ್ನು ಮಹಾಮಂಡಳತಟ್ಟುತ್ತಿದೆ. ಕೊರೊನಾ ಸೋಂಕಿನ ಭಯದಿಂದ ಕಾರ್ಮಿಕರು ರಜೆ ಪಡೆದಿರುವ ಕಾರಣ ಕೆಎಂಎಫ್‌ ಬೇಡಿಕೆಯನ್ನು ಒಪ್ಪಿಕೊಳ್ಳಲು ಆ ಘಟಕಗಳೂ ಹಿಂದೇಟು ಹಾಕುತ್ತಿವೆ. ಅದರೂ, ಅಧಿಕಾರಿಗಳು ಅವರ ಬೆಂಬಿಡದೆ ದುಂಬಾಲು ಬಿದ್ದಿದ್ದಾರೆ.

‘ಕೋವಿಡ್– 19 ಸಮಸ್ಯೆ ಎದುರಾಗದಿದ್ದರೆ ಇನ್ನು 15 ದಿನಗಳಲ್ಲಿ ರಾಮನಗರದಲ್ಲಿನ ಹಾಲಿನ ಪುಡಿ ತಯಾರಿಕಾ ಘಟಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಗೊಳ್ಳುತ್ತಿತ್ತು. ಹಾಲು ಉಳಿತಾಯವಾಗುವ ಸಾಧ್ಯತೆಯೇ ಇರುತ್ತಿರಲಿಲ್ಲ’ ಎನ್ನುತ್ತಾರೆ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಸಿ. ಸತೀಶ್.

ಬಡವರಿಗೆ ನಂದಿನಿ ಹಾಲು ಉಚಿತ
ಲಾಕ್‌ಡೌನ್‌ ಮುಕ್ತಾಯವಾಗುವವರೆಗೆ ರಾಜ್ಯದ ಕೊಳೆಗೇರಿ ನಿವಾಸಿಗಳು ಮತ್ತು ಕಾರ್ಮಿಕರ ಬಡಾವಣೆಗಳ ವಾಸಿಗಳಿಗೆ ಉಚಿತವಾಗಿ ನಂದಿನಿ ಹಾಲು ವಿತರಿಸಲು ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೆಎಂಎಫ್‌ ಪ್ರತಿ ದಿನ ಹಾಲು ಉತ್ಪಾದಕರಿಂದ 69 ಲಕ್ಷ ಲೀಟರ್‌ ಹಾಲು ಖರೀದಿಸುತ್ತಿದ್ದು, 42 ಲಕ್ಷ ಲೀಟರ್‌ ಮಾರಾಟವಾಗುತ್ತಿದೆ. ಸುಮಾರು 7.5 ಲಕ್ಷ ಲೀಟರ್ ಹಾಲು ಉಳಿಯುತ್ತಿದೆ. ಈ ರೀತಿ ಉಳಿಯುವ ಹಾಲನ್ನು ಸರ್ಕಾರವೇ ಖರೀದಿಸಿ, ಲಾಕ್‌ಡೌನ್‌ ಮುಗಿಯುವವರೆಗೆ ಅಧಿಸೂಚಿತ ಕೊಳೆಗೇರಿಗಳು ಮತ್ತು ಕಾರ್ಮಿಕರಿರುವ ಬಡಾವಣೆಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ವಿತರಿಸಲು ಯಡಿಯೂರಪ್ಪ ಸೂಚಿಸಿದ್ದಾರೆ.

ಇಂದಿನಿಂದಲೇ ಹಾಲು: ಎಲ್ಲ ಜಿಲ್ಲೆಗಳಲ್ಲಿನ ಬಡವರಿಗೆ ಗುರುವಾರದಿಂದಲೇ ಉಚಿತವಾಗಿ ವಿತರಿಸಲಾಗುವುದು. ಇದಕ್ಕಾಗಿ ₹32 ಕೋಟಿ ನೀಡುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ ಎಂದು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT