ಭಾನುವಾರ, ಆಗಸ್ಟ್ 1, 2021
20 °C
ಉಪ ಚುನಾವಣೆಗೆ ಸ್ಪರ್ಧಿಸಿದ್ದವರಿಗೆ ಪರಿಷತ್‌ ಟಿಕೆಟ್‌ ನೀಡುವ ಭರವಸೆ ನೀಡಿರಲಿಲ್ಲ

ಸಹಾಯ ಮಾಡಿದವರಿಗೆ ಪರಿಷತ್‌ ಟಿಕೆಟ್‌: ಅಶ್ವತ್ಥ ನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ರಾಜ್ಯಸಭೆ ಚುನಾವಣೆಯಂತೆಯೇ ವಿಧಾನ ಪರಿಷತ್‌ ಚುನಾವಣೆಯಲ್ಲೂ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು, ಪಕ್ಷಕ್ಕೆ ಸಹಾಯ ಮಾಡಿದ ಮುಖಂಡರುಗಳಿಗೆ ಟಿಕೆಟ್‌ ನೀಡಲು ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಶುಕ್ರವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕಳೆದ ವಿಧಾನಸಭಾ ಉಪ ಚುನಾವಣೆ ವೇಳೆ ಆರ್‌.ಶಂಕರ್‌ ಸ್ಪರ್ಧೆ ಮಾಡಿರಲಿಲ್ಲ. ಆಗ ಅವರಿಗೆ ಪರಿಷತ್‌ ಚುನಾವಣಾ ಟಿಕೆಟ್‌ ನೀಡುವ ಭರವಸೆ ನೀಡಲಾಗಿತ್ತು. ಅದರಂತೆ ಅವರಿಗೆ ಈಗ ಟಿಕೆಟ್‌ ದೊರೆಯಲಿದೆ. ಆದರೆ ಎಚ್‌.ವಿಶ್ವನಾಥ್‌, ಎಂಟಿಬಿ ನಾಗರಾಜ್‌, ಸಿ.ಪಿ. ಯೋಗೇಶ್‌ ಅವರಿಗೆ ಟಿಕೆಟ್‌ ಕೊಡುವ ಯಾವುದೇ ಭರವಸೆ ನೀಡಿರಲಿಲ್ಲ’ ಎಂದು ಹೇಳಿದರು.

‘ಉಪ ಚುನಾವಣೆಯಲ್ಲಿ ಸೋತವರೆಲ್ಲರೂ ಟಿಕೆಟ್‌ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಅವರ ಒತ್ತಾಯವನ್ನು ಪಕ್ಷದ ವರಿಷ್ಠರು ಯಾವ ರೀತಿ ಪರಿಗಣಿಸುತ್ತಾರೆ ಎಂಬದನ್ನು ನೋಡಬೇಕಿದೆ. ಸಿ.ಪಿ.ಯೋಗೇಶ್ವರ್‌ ಅವರಿಗೆ ಪಕ್ಷದ ಮೇಲೆ ಯಾವುದೇ ಅಸಮಾಧಾನ ಇಲ್ಲ. ಟಿಕೆಟ್‌ ಕೋರಿಕೆಯ ಬಗ್ಗೆ ಶೀಘ್ರ ತೀರ್ಮಾನ ಮಾಡಲಾಗುವುದು’ ಎಂದರು.

‘ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿರುವ ಎಚ್‌.ಡಿ.ದೇವೇಗೌಡ ಅವರಿಗೆ ಬಿಜೆಪಿ ಬೆಂಬಲ ನೀಡುವ ಪ್ರಶ್ನೆಯೇ ಬರುವುದಿಲ್ಲ. ನಮ್ಮ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳಿದ್ದಾರೆ. ದೇವೇಗೌಡರು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿದ್ದು ಅವರಿಗೆ ನಮ್ಮ ಪಕ್ಷದ ಮತಗಳ ಅವಶ್ಯಕತೆ ಇಲ್ಲ’ ಎಂದರು.

ಶೀಘ್ರ ಕುಲಪತಿ: ‘ಸರ್ಕಾರಿ ಸ್ವಾಯತ್ತ ಮಹಾವಿದ್ಯಾಲಕ್ಕೆ ಮಂಡ್ಯ ವಿಶ್ವವಿದ್ಯಾಲಯ ಮಾನ್ಯತೆ ನೀಡಲಾಗಿದೆ. ಆದರೆ ಕುಲಪತಿ ನೇಮಕಾತಿಗೆ ಇದ್ದ ಅಡ್ಡಿ ನಿವಾರಣೆಗಾಗಿ ಕಾಯ್ದೆಗೆ ತಿದ್ದುಪಡಿ ತರಲು ಸಂಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸುಗ್ರೀವಾಜ್ಞೆ ಹೊರಬೀಳಲಿದ್ದು ಶೀಘ್ರ ಕುಲಪತಿ ನೇಮಕ ಪ್ರಕ್ರಿಯೆ ಆರಂಭಗೊಳ್ಳಲಿದೆ’ ಎಂದರು.

‘ಜೂನ್‌ 30ರಂದು ಲಾಕ್‌ಡೌನ್‌ ತೆರವಾಗಲಿದ್ದು ನಂತರ ಪದವಿ ತರಗತಿಗಳ ಪರೀಕ್ಷೆ ನಡೆಸಲಾಗುವುದು. ಶೀಘ್ರ ಪರೀಕ್ಷೆಯ ದಿನಾಂಕ ಪ್ರಕಟಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು