ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯ ಅಧಿಕಾರಿಗೂ ಕೊರೊನಾ ವೈರಸ್ ಸೋಂಕು

Last Updated 1 ಜೂನ್ 2020, 7:36 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರಿಗೆ ಕೋವಿಡ್- 19 ದೃಢಪಟ್ಟಿದೆ.

ಈ ಹಿನ್ನಲೆಯಲ್ಲಿ ಆ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯ ಆವರಣ ಹಾಗೂ ಅವರ ಕಚೇರಿ ಇದ್ದ ಕಟ್ಟಡದ ನೆಲಮಹಡಿ ಮತ್ತು ಮೊದಲನೆ ಮಹಡಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿ ಸ್ವಚ್ಛಗೊಳಿಸಲಾಗುತ್ತಿದೆ. ಈ ಸಂಬಂಧ ಕಚೇರಿ ಸುತ್ತ ಮುತ್ತ ಸಾರ್ವಜನಿಕರ ಭೇಟಿಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಸಹಾಯಕ ಆಯುಕ್ತ ದರ್ಜೆಯ ಈ ಅಧಿಕಾರಿ ಶುಕ್ರವಾರದ ಬಳಿಕ ಕಚೇರಿಗೆ ಬಂದಿರಲಿಲ್ಲ. 'ಆ ಅಧಿಕಾರಿಯ ಸಂಪರ್ಕಕ್ಕೆ ಬಂದಿರುವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಿದ್ದೇವೆ. ಬಿಬಿಎಂಪಿಯ ಇಡೀ ಕೇಂದ್ರ ಕಚೇರಿಯನ್ನು ಸೀಲ್ ಡೌನ್ ಮಾಡುವ ಅಗತ್ಯವಿಲ್ಲ. ಆದರೆ ಇಡೀ ಕಚೇರಿ ಪ್ರಾಂಗಣವನ್ನು ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ ಪ್ರಜಾವಾಣಿಗೆ ತಿಳಿಸಿದರು.

ಸಿಬ್ಬಂದಿಯಲ್ಲಿ ಆತಂಕ: ನಗರದಲ್ಲಿ ಕೊರೊನಾ ಸೋಂಕು ಹಬ್ಬದಂತೆ ತಡೆಯುವ ಹೋರಾಟದಲ್ಲಿ ಮುಂಚೂಣಿಯಲ್ಲಿರುವುದು ಬಿಬಿಎಂಪಿ ಸಿಬ್ಬಂದಿ. ಈಗ ಪಾಲಿಕೆಯ ಸಿಬ್ಬಂದಿಗೇ ಸೋಂಕು ಬಂದಿರುವುದು ತಳಮಟ್ಟದ ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದೆ. 'ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರುಯಲ್ಲಿದ್ದಾಗ ನಾವು ನಿರಾತಂಕವಾಗಿ ಕೆಲಸ ಮಾಡಿದ್ದೆವು. ಸರ್ಕಾರ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಿದ ಬಳಿಕ ನಾವು ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಮುದಾಯಕ್ಕೆ ಸೋಂಕು ಹಬ್ಬಿರುವ ಮುಂಬೈನಂತಹ ಪ್ರದೇಶಗಳಿಂದ ನಗರಕ್ಕೆ ಬಂದವರನ್ನು ಪತ್ತೆಹಚ್ಚಿ ಕ್ವಾರಂಟೈನ್ಗೆ ಒಳಪಡಿಸುವುದು ಸವಾಲಿನ ಕೆಲಸ' ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.

ಸೋಂಕು ತಗಲಿದ್ದು ಹೇಗೆ: ಆರೋಗ್ಯ ವಿಭಾಗದವರಲ್ಲದ ಅನೇಕ ಅಧಿಕಾರಿಗಳನ್ನು ಕೊರೊನಾ ನಿಯಂತ್ರಣ ತಂಡದ ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿತ್ತು. ಇವರು ಕೋವಿಡ್-19 ಕಾಣಿಸಿಕೊಂಡ ಪ್ರದೇಶದಲ್ಲಿ ಓಡಾಡಿದಾಗ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಸೋಂಕಿತ ವ್ಯಕ್ತಿ ಶಿಕ್ಷಣ ಇಲಾಖೆಯ ಅಧಿಕಾರಿಯಾಗಿದ್ದರಿಂದ ಬಿಬಿಎಂಪಿ ಶಾಲಾ ಕಾಲೇಜುಗಳ ಶಿಕ್ಷಕರು ಉಪನ್ಯಾಸಕರು ಅವರನ್ನು ಭೇಟಿಯಾಗಿರುವ ಸಾಧ್ಯತೆಗಳಿವೆ. ಇತ್ತೀಚಿನ‌ ದಿನಗಳಲ್ಲಿ ಅವರ ಸಂಪರ್ಕಕ್ಕೆ ಬಂದವರು ಬಿಬಿಎಂಪಿ ಯನ್ನು ಸಂಪರ್ಕಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು. ಅವರ ಕಚೇರಿಯಲ್ಲಿ ಏಳೆಂಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನೂ ಆರೋಗ್ಯ ಪರೀಕ್ಷಗೆ ಒಳಪಡಿಸಿ, ಪ್ರತ್ಯೇಕ ವಾಸಕ್ಕೆ( ಕ್ವಾರಂಟೈನ್) ಕ್ರಮಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ನಗರದಲ್ಲಿ ಮಳೆಗಾಲದ ಅನಾಹುತಗಳನ್ನು ತಡೆಯುವ ಸಲುವಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಚರ್ಚಿಸಲು ಕಂದಾಯ ಸಚಿವ ಆರ್.ಅಶೋಕ ನೇತೃತ್ವದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಿಗದಿಯಾಗಿದ್ದ ಸಭೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT