ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ 3ನೇ ಪ್ಯಾಕೇಜ್‌: ಕೋವಿಡ್‌ ಸಂಕಷ್ಟಕ್ಕೆ ಪರಿಹಾರ

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ
Last Updated 15 ಮೇ 2020, 19:42 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಇನ್ನೂ ಕೆಲವು ಸಮುದಾಯದವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ₹512.50 ಕೋಟಿ ಮೊತ್ತದ ಮೂರನೇ ಪ್ಯಾಕೇಜ್‌ ಪ್ರಕಟಿಸಿದ್ದಾರೆ. ಇದರಿಂದಾಗಿ ಈವರೆಗೆ ಒಟ್ಟು ₹2,272 ಕೋಟಿ ಪರಿಹಾರ ಘೋಷಿಸಿದಂತಾಗಿದೆ.

ಸೂಕ್ತ ಬೆಲೆ ಸಿಗದೇ ಕಂಗಾಲಾಗಿರುವ ಮೆಕ್ಕೆಜೋಳ ಬೆಳೆಗಾರರು, ಆಶಾ ಕಾರ್ಯಕರ್ತೆಯರು, ಕುರಿ ಸಾಕಣೆದಾರರು ಮತ್ತು ರೇಷ್ಮೆ ರೀಲರ್‌ಗಳಿಗೆ ಮೂರನೇ ಪ್ಯಾಕೇಜ್‌ನಿಂದ ಪ್ರಯೋಜನ ಸಿಗಲಿದೆ.

ಮೆಕ್ಕೆಜೋಳಕ್ಕೆ ಕ್ವಿಂಟಲ್‌ಗೆ ₹1,760 ಬೆಂಬಲ ಬೆಲೆ ಪ್ರಕಟಿಸಿದ್ದರೂ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ 10 ಲಕ್ಷ ರೈತರು ಮೆಕ್ಕೆಜೋಳ ಬೆಳೆಯುತ್ತಾರೆ. ಪ್ರತಿಯೊಬ್ಬರಿಗೂ ಒಂದು ಬಾರಿಯ ಪರಿಹಾರ ಎಂದು ₹5,000 ನೀಡಲಾಗುವುದು. ಇದಕ್ಕೆ ₹500 ಕೋಟಿ ವೆಚ್ಚವಾಗುತ್ತದೆ ಎಂದು ಯಡಿಯೂರಪ್ಪ ಅವರು ವಿವರಿಸಿದರು.

ಆಶಾ ಕಾರ್ಯಕರ್ತೆಯರು ಕೋವಿಡ್‌ ವಿರುದ್ಧ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದ್ದಾರೆ. 40,250 ಆಶಾ ಕಾರ್ಯಕರ್ತೆಯರಿಗೆ ಸಹಕಾರ ಇಲಾಖೆ ವತಿಯಿಂದ ತಲಾ ₹3,000 ಪ್ರೋತ್ಸಾಹ ಧನ ನೀಡಲಾಗುವುದು. ಇದಕ್ಕೆ ₹12.50 ಕೋಟಿ ಬೇಕಾಗುತ್ತದೆ. ಸಹಕಾರ ಸಂಘಗಳಿಂದ ಸಂಗ್ರಹಿಸಿ ಸಹಕಾರ ಇಲಾಖೆ ವತಿಯಿಂದ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.

ನೈಸರ್ಗಿಕ ವಿಕೋಪದಿಂದ ಕುರಿ ಮತ್ತು ಮೇಕೆಗಳು ಸತ್ತರೆ ₹5,000 ಪರಿಹಾರ ನೀಡುವ ಹಳೇ ಯೋಜನೆಯನ್ನು ಮುಂದುವ
ರಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರ ಈ ಯೋಜನೆ ಜಾರಿಗೆ ತಂದಿತ್ತು. ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ಯೋಜನೆಗೆ ತಡೆ ನೀಡಲಾಗಿತ್ತು. ಈ ಯೋಜನೆಯನ್ನು ಪುನಾರಂಭಿ ಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದರು.

ಅಲ್ಲದೆ, ರೇಷ್ಮೆ ನೂಲು ಖರೀದಿಗಾಗಿ ₹10 ಕೋಟಿಯನ್ನು ಬಿಡುಗಡೆ ಮಾಡ ಲಾಗಿದೆ. ಪ್ರತಿಯೊಬ್ಬ ರೀಲರ್‌ನಿಂದ 20 ಕೆ.ಜಿ ನೂಲು ಖರೀದಿಸಲಾಗುವುದು. ರೇಷ್ಮೆ ಅಡಮಾನ ಸಾಲ ಪಡೆ ಯುವ ಮಿತಿಯನ್ನು ₹1 ಲಕ್ಷದಿಂದ ₹2 ಲಕ್ಷಕ್ಕೆ ಏರಿಸಲಾಗಿದೆ ಎಂದು ರೇಷ್ಮೆ ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

ಮೊದಲ ಹಂತದ ಲಾಕ್‌ಡೌನ್‌ ಮುಗಿದ ಬಳಿಕ ಶ್ರಮಿಕ ವರ್ಗಕ್ಕೆ ಯಡಿಯೂರಪ್ಪ ಅವರು ₹1,610 ಕೋಟಿ ಪ್ಯಾಕೇಜ್‌ ಪ್ರಕಟಿಸಿದ್ದರು. ಎರಡನೇ ಹಂತದ ಪ್ಯಾಕೇಜ್‌ನಲ್ಲಿ ಹಣ್ಣು ಮತ್ತು ತರಕಾರಿ ಬೆಳೆದು ನಷ್ಟಕ್ಕೆ ಒಳಗಾದವರು ಮತ್ತು ವಿದ್ಯುತ್‌ ಮಗ್ಗ ದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗಾಗಿ ಗುರುವಾರ ₹162 ಕೋಟಿ ಪ್ರಕಟಿಸಿದ್ದರು.

***

ಸರ್ಕಾರದ ಆರ್ಥಿಕ ಇತಿಮಿತಿಯಲ್ಲಿ ಪರಿಹಾರ ಕೊಟ್ಟಿದ್ದೇವೆ. ಎಲ್ಲರಿಗೂ ಕೊಡುವುದು ಕಷ್ಟವಾಗುತ್ತದೆ, ಮುಂದೆ ಅನುಕೂಲ ಆದಾಗ ನೋಡೋಣ

– ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT