ಗುರುವಾರ , ಏಪ್ರಿಲ್ 9, 2020
19 °C

ಕೋವಿಡ್-19: ಹಂಪಿಯಲ್ಲಿ ಇಂದಿನಿಂದ ಪ್ರವಾಸಿ ಚಟುವಟಿಕೆ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬಳ್ಳಾರಿ: ಕೋವಿಡ್ 19 ಸೋಂಕು ನಿಯಂತ್ರಣದ ಸಲುವಾಗಿ ಹಂಪಿಯಲ್ಲಿ ಮಾರ್ಚ್ 15ರಿಂದ ಒಂದು ವಾರ ಕಾಲ ಪ್ರವಾಸಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಟಿಕೆಟ್ ವಿತರಣೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್‌ ತಿಳಿಸಿದರು.

ವಿದೇಶಗಳಿಂದ ಬರುವವರಿಂದಲೇ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚಿರುವುದರಿಂದ ಹಂಪಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಗೆ ಬಂದಿರುವ ಫ್ರಾನ್ಸ್ನ ಏಳು ಮಂದಿ, ಜರ್ಮನಿಯ ಒಂಬತ್ತು ಮಂದಿಯನ್ನು ಪ್ರತ್ಯೇಕ ವಾರ್ಡ್‌ನಲ್ಲಿರಿಸಲಾಗಿತ್ತು. ಅವರು‌ ತಮ್ಮ ದೇಶಕ್ಕೆ ತೆರಳುವುದಾಗಿ ಮನವಿ ಮಾಡಿದ್ದರಿಂದ ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳು ಅನುಮತಿ ನೀಡಿದ್ದಾರೆ. ಮತ್ತೊಮ್ಮೆ ಪರಿಶೀಲಿಸಿ ಬಿಡುಗಡೆ ಮಾಡಲಾಗುವುದು ಎಂದರು.

ಶಂಕಿತರ ಗಂಟಲ ದ್ರವ ಮತ್ತು‌ ರಕ್ತದ ‌ಮಾದರಿ ಸಂಗ್ರಹಿಸುವ ವ್ಯವಸ್ಥೆಯಷ್ಟೇ ಜಿಲ್ಲೆಯಲ್ಲಿದ್ದು, ತಪಾಸಣೆ ಮಾಡುವ ‌ಪ್ರಯೋಗಾಲಯ ಸ್ಥಾಪನೆಗೆ ಅವಕಾಶ ನೀಡಬೇಕೆಂದು ಕೋರಲಾಗಿದೆ. ಸದ್ಯ ದ್ರವ ಮತ್ತು ರಕ್ತದ ಮಾದರಿಗಳನ್ನು ಬೆಂಗಳೂರಿಗೆ ಕಳಿಸಲಾಗುತ್ತಿದೆ. ಈಗಾಗಲೇ ಕಳಿಸಿದ್ದ 10 ಮಾದರಿಗಳ ಪೈಕಿ ಮೂರು ಮಾದರಿಗಳಲ್ಲಿ ಸೋಂಕು ಇಲ್ಲವೆಂಬ ವರದಿ ಬಂದಿದೆ. ಉಳಿದವುಗಳ ವರದಿ ನಾಳೆ‌ ದೊರಕಲಿದ್ದು, ಅದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

'ಶಂಕಿತರಿಗಾಗಿ ಜಿಲ್ಲಾಸ್ಪತ್ರೆಯಲ್ಲಿ ಹತ್ತು ಹಾಸಿಗೆಗಳ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದೆ. ವಿಮ್ಸ್ ಆಸ್ಪತ್ರೆಯಲ್ಲಿ 
8 ಹಾಸಿಗೆಗಳ‌ ವಾರ್ಡ್ ಮತ್ತು ಹೊಸಪೇಟೆ ಆಸ್ಪತ್ರೆಯಲ್ಲಿ 3 ಹಾಸಿಗೆಗಳ‌ ವಾರ್ಡ್ ಸ್ಥಾಪಿಸಲಾಗಿದೆ. ಏಳು ದಿನಕ್ಕೆ ಬೇಕಾಗುವ ‌ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

'ಸಿನಿಮಾ ಮಂದಿರಗಳನ್ನು ಬಂದ್ ಮಾಡಲಾಗಿದೆ. ಪ್ರತಿಭನಟೆಗಳಿಗೆ ಅವಕಾಶವಿರುವುದಿಲ್ಲ. ದೇವಾಲಯಗಳಲ್ಲಿ ಪೂಜೆ, ಜಾತ್ರೆ ನಡೆಸುವಂತಿಲ್ಲ. ಸರ್ಕಾರಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಮದುವೆ‌ಮೊದಲಾದ ಕಾರ್ಯಕ್ರಮಗಳಿಗೆ ಆದಷ್ಟು ಕಡಿಮೆ ಜನರನ್ನು ಆಹ್ವಾನಿಸುವುದು ಒಳಿತು' ಎಂದರು.

ಜಿಲ್ಲೆಯಲ್ಲಿರುವ ಎಲ್ಲ ಮಲ್ಟಿ‌ಜಿಮ್, ಈಜುಕೊಳಗಳನ್ನು ಬಂದ್ ಮಾಡಲಾಗಿದೆ. ಸೋಂಕಿನ ಲಕ್ಷಣವುಳ್ಳವರು ಬಳಸಬೇಕಾದ ಮೂರು‌ ಪದರದ ವಿಶೇಷ ಮುಖಗವಸಿನ‌ ಬಗ್ಗೆ  ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರು ರಾಜ್ಯಮಟ್ಟದ  ಸಹಾಯವಾಣಿ 104ಕ್ಕೆ ಅಥವಾ‌ ಜಿಲ್ಲಾಡಳಿತದ ಇ ಸ್ಪಂದನ 08392 277100 ಸಹಾಯವಾಣಿಗೆ ಕರೆ ಮಾಡಿ ಮಾತನಾಡಬಹುದು. ಮಾಹಿತಿ ನೀಡಬಹುದು ಎಂದರು.

ಬಿಸಿಲು ಹೆಚ್ಚಾದಷ್ಟು ಸೋಂಕು ಉಳಿಯುವ ಅವಧಿ‌ ಕಡಿಮೆ. ಆದರೆ ಸೋಂಕು ಹರಡುವುದಕ್ಕೂ ಬಿಸಿಲಿಗೂ ಸಂಬಂಧವಿಲ್ಲ‌'. ಮುಖಗವಸನ್ನು ಎಲ್ಲರೂ ಬಳಸಬೇಕಾಗಿಲ್ಲ. ವೈದ್ಯಕೀಯ ಸಿಬ್ಬಂದಿ ಬಳಸಬಹುದು. ಎಂಟು ಗಂಟೆ ಮಾತ್ರ ಒಂದು ಗವಸು ಬಳಸಬಹುದು ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಎಲ್.ನಟರಾಜ್, ಜಿಲ್ಲಾ ‌ಸರ್ಜನ್ ಎನ್.ಬಸರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು