ಶನಿವಾರ, ಜೂನ್ 6, 2020
27 °C

ಕೋವಿಡ್‌–19: ಇಲ್ಲಿಯವರೆಗಿನ ಯುದ್ಧದಲ್ಲಿ ಗೆದ್ದ ರಾಜ್ಯ, ಮುಂದಿದೆ ಅಗ್ನಿ ಪರೀಕ್ಷೆ

ಎಸ್.ರವಿಪ್ರಕಾಶ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್–19‌ ಲಾಕ್‌ಡೌನ್‌ ಆರಂಭಗೊಂಡು ಎರಡು ತಿಂಗಳು (ಮಾರ್ಚ್‌22 ರಿಂದ ಮೇ 22) ತುಂಬಿದ್ದು, ರಾಜ್ಯದಲ್ಲಿ ಅತ್ಯಂತ ಕಡಿಮೆ ಇದ್ದ ಸೋಂಕಿತರ ಸಂಖ್ಯೆ ಹೊರ ರಾಜ್ಯಗಳಿಂದ ಬಂದವರಿಂದಾಗಿ ಈಗ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 

ಒಟ್ಟು ಪ್ರಕರಣಗಳ ಸಂಖ್ಯೆ 1,710 ಕ್ಕೆ ಮತ್ತು ಇದರಿಂದ ಮೃತಪಟ್ಟವರ ಸಂಖ್ಯೆ 41 ಕ್ಕೆ ಏರಿದೆ. ದೇಶದಲ್ಲಿ ಕೋವಿಡ್‌ಗೆ ಬಲಿಯಾದ ಮೊದಲ ವ್ಯಕ್ತಿ ಕರ್ನಾಟಕದವರೇ ಆಗಿದ್ದರು. ಲಾಕ್‌ಡೌನ್ 3 ನೇ ಹಂತ ಮುಗಿಯುವವರೆಗೆ ಕೋವಿಡ್‌ ಪಾಸಿಟಿವ್‌ ಪ್ರತಿದಿನ ಸರಾಸರಿ 15 ರಿಂದ 20 ಇದ್ದ ಪ್ರಕರಣ ಸಂಖ್ಯೆ ಈಗ 100 ಆಸುಪಾಸು ತಲುಪಿದೆ.

‘ಇಲ್ಲಿಯವರೆಗೆ ಕಟ್ಟುನಿಟ್ಟಾಗಿ ನಿಯಂತ್ರಣ ಮಾಡಿದ್ದ ಸರ್ಕಾರಕ್ಕೆ ಇನ್ನು ಮುಂದೆ ದೊಡ್ಡ ಅಗ್ನಿಪರೀಕ್ಷೆಯೇ ಕಾದಿದೆ. ಕೇರಳದಂತಹ ಕಡಿಮೆ ಜನಸಂಖ್ಯೆಯ(3.44 ಕೋಟಿ) ಸಣ್ಣ ರಾಜ್ಯಗಳಲ್ಲಿ ನಿಭಾಯಿಸುವುದು ಸುಲಭ. ಆದರೆ, ಕರ್ನಾಟಕದಂತದ ವೈವಿಧ್ಯತೆಯಿಂದ ಕೂಡಿದ ದೊಡ್ಡ ರಾಜ್ಯವೊಂದನ್ನು (ಜನಸಂಖ್ಯೆ 6.7 ಕೋಟಿ) ನಿಭಾಯಿಸುವುದು ಸುಲಭದ ಮಾತಲ್ಲ. ಅದರಲ್ಲೂ ಬೆಂಗಳೂರು ನಗರದಲ್ಲಿ (ಜನಸಂಖ್ಯೆ 1.25 ಕೋಟಿ) ಈಗಲೂ ಕೋವಿಡ್‌ ನಿಯಂತ್ರಣದಲ್ಲೇ ಇದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಆರಂಭದಿಂದಲೂ ರಾಜ್ಯ ಸರ್ಕಾರ ಕೋವಿಡ್‌ ಹರಡದಂತೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಿತ್ತು. ಬಡವರಿಗೆ ಆಹಾರ ಧಾನ್ಯ ವಿತರಿಸುವ ಕೆಲಸವನ್ನು ಮಾಡಿತು. ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಕೊಂಡಿರುವ ಶ್ರಮಿಕರು ಮತ್ತು ರೈತರಿಗೆ ಸರ್ಕಾರ ಮೂರು ಹಂತದ ಪ್ಯಾಕೇಜ್‌ ಪ್ರಕಟಿಸಿತು. ಇದರಿಂದ ಆದಾಯ ಇಲ್ಲದೆ, ಕಂಗೆಟ್ಟಿದ್ದ ಶ್ರಮಿಕ ವರ್ಗ ಕೊಂಚ ನೆಮ್ಮದಿಯಿಂದ ಉಸಿರಾಡು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮೂರೂ ಹಂತಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್‌ ಜತೆಗೆ ಸೋಂಕಿತರ ಪರೀಕ್ಷೆ ಮತ್ತು ಚಿಕಿತ್ಸೆ ವ್ಯವಸ್ಥೆಯನ್ನು ಸರ್ಕಾರ ಮಾಡಿತ್ತು. ಇದಕ್ಕಾಗಿ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಹೆಚ್ಚಿಸಲಾಯಿತು.

‘ಕೋವಿಡ್‌–19 ಹಿನ್ನೆಲೆಯಲ್ಲಿ ಕರ್ನಾಟಕದ ಎಲ್ಲ ಆಸ್ಪತ್ರೆಗಳಲ್ಲೂ ಉಳಿದ ರಾಜ್ಯಗಳಿಗೆ ಮಾದರಿಯಾಗುವಂತೆ ಆರೋಗ್ಯ ಆರೈಕೆ ವ್ಯವಸ್ಥೆಯನ್ನು ಮಾಡಿದೆ. ಐಸೋಲೇಷನ್‌ ವಾರ್ಡ್‌, ಐಸಿಯು ಮತ್ತು ವೆಂಟಿಲೇಟರ್‌ಗಳು ಹೈಟೆಕ್‌ ಆಸ್ಪತ್ರೆಗಳಿಗೆ ಸಮಾನವಾಗಿವೆ’ ಎಂದು ಫೌಂಡೇಷನ್‌ ಫಾರ್‌ ಈಕ್ವಾಲಿಟಿಯ ನಿರ್ದೇಶಕ ಡಾ.ಥುಪ್ಪಿಲ್ ವೆಂಕಟೇಶ್‌ ಹೇಳಿದ್ದರು.

ಬಡವರು, ಶ್ರಮಿಕರು, ಕಾರ್ಮಿಕರಿಗೆ ಆಹಾರ ಧಾನ್ಯಗಳನ್ನು ತಲುಪಿಸುವಲ್ಲಿ ಸರ್ಕಾರ, ಖಾಸಗಿ ಸಂಘಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿವೆ. ಹೀಗಾಗಿ ಯಾರೂ ಹಸಿವಿನಿಂದ ಬಳಲುವ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಲಿಲ್ಲ. ಸರ್ಕಾರದ ಆಹಾರ ಪದಾರ್ಥಗಳನ್ನು ವಿತರಿಸುವಾಗ ಬಿಜೆಪಿ ಶಾಸಕರು ತಮ್ಮ ಮತ್ತು ಮುಖ್ಯಮಂತ್ರಿ ಚಿತ್ರಗಳನ್ನು ಹಾಕಿಕೊಂಡು ವಿತರಿಸುತ್ತಿದ್ದಾರೆ. ಇದರಲ್ಲಿ ಗೋಲ್‌ಮಾಲ್‌ ಆಗಿದೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದರು. ಕಾಂಗ್ರೆಸ್ ಶಾಸಕರೂ ತಮ್ಮ ತಮ್ಮ ಕ್ಷೇತ್ರಗಳಲ್ಲೂ ಸರ್ಕಾರದ ಆಹಾರ ಧಾನ್ಯಗಳ ಕಿಟ್‌ನಲ್ಲಿ ತಮ್ಮ ಚಿತ್ರಗಳನ್ನು ಹಾಕಿಕೊಂಡು ವಿತರಿಸಿದ್ದಾರೆ ಎಂಬ ಪ್ರತಿ ಆರೋಪವೂ ಕೇಳಿ ಬಂತು.

ಸರ್ಕಾರದಲ್ಲಿ ಇಬ್ಬರು ಸಚಿವರ ಮಧ್ಯೆಯೇ ಪ್ರಚಾರ ಗಿಟ್ಟಿಸಲು ಪೈಪೋಟಿ ನಡೆಯಿತು. ಈ ಹಿನ್ನೆಲೆಯಲ್ಲಿ ಕೋವಿಡ್‌ ಮಾಹಿತಿಯನ್ನು ಸರ್ಕಾರದ ಪರವಾಗಿ ನೀಡಲು ಶಿಕ್ಷಣ ಸಚಿವರನ್ನು ನಿಯೋಜಿಸಲಾಯಿತು. ಅಕ್ರಮದ ಆರೋಪಗಳೂ ಕೇಳಿ ಬಂದಿದೆ. ಆದರೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಿಂಚಿತ್ತು ವಿಚಲಿತರಾಗದೇ ಕೋವಿಡ್‌ ನಿಭಾಯಿಸುವ ನಾಯತ್ವವನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದರು.

ಆದಾಯವೇ ಇಲ್ಲದಾಗಲೂ ಪೂರ್ಣ ಸಂಬಳ

ಕೇರಳ ಮತ್ತು ಇನ್ನು ಕೆಲವು ರಾಜ್ಯಗಳಲ್ಲಿ ಸರ್ಕಾರಿ ನೌಕರರ ವೇತನವನ್ನು ಕಡಿತ ಮಾಡಲಾಯಿತು. ಆದರೆ, ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಪೂರ್ಣ ವೇತನ ನೀಡಲಾಯಿತು. ನಷ್ಟದಲ್ಲಿ ಇರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೂ ಪೂರ್ಣ ವೇತನ ನೀಡಲು ವ್ಯವಸ್ಥೆ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಇಚ್ಛಾಶಕ್ತಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಸಂಪೂರ್ಣ ನೆಲಕಚ್ಚಿರುವ ಹಿನ್ನೆಲೆಯಲ್ಲಿ, ಮೂರನೇ ಹಂತದ ಲಾಕ್‌ ಡೌನ್‌ ಮುಗಿಯುತ್ತಿರುವಂತೆ ಎಲ್ಲ ಬಗೆಯ ಚಟುವಟಿಕೆಗಳಿಗೂ ಅವಕಾಶ ನೀಡಲಾಗಿದೆ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂಬುದು ಸರ್ಕಾರದ ಆಶಯ.

ಮುಂದಿರುವ ಸವಾಲುಗಳು

* ಹೆಚ್ಚುತ್ತಿರುವ ಕೋವಿಡ್‌ ಸೋಂಕಿತ ಪ್ರಕರಣವನ್ನು ಕಡಿಮೆ ಮಾಡುವುದು. ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳುವುದು.

*ಚಿಕಿತ್ಸೆ ಪಡೆಯುತ್ತಿರುವವರು ಸುರಕ್ಷಿತವಾಗಿ ಮನೆಗೆ ಮರಳುವಂತೆ ನೋಡಿಕೊಳ್ಳಬೇಕು.

* ಆರ್ಥಿಕ ಸ್ಥಿತಿಯನ್ನು ಸುಧಾರಿಸಬೇಕು ಮತ್ತು ಸರ್ಕಾರದ ಆದಾಯ ಸಂಗ್ರಹವನ್ನು ಹೆಚ್ಚಿಸಬೇಕು

*ವಲಸೆ ಕಾರ್ಮಿಕರು ಮರಳಿ ರಾಜ್ಯಕ್ಕೆ ಬಂದು ಎಲ್ಲ ಚಟುವಟಿಕೆಗಳು ಸುಗಮವಾಗುವಂತೆ ನೋಡಿಕೊಳ್ಳಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು