ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸಾವಿರದ ಗಡಿ ದಾಟಿದ ಕೋವಿಡ್-19 ಪ್ರಕರಣ

ನಗರದಲ್ಲಿ ಒಂದೇ ದಿನ 94 ಮಂದಿಗೆ ಸೋಂಕು l ಮೃತರ ಸಂಖ್ಯೆ 61ಕ್ಕೆ ಏರಿಕೆ l ಐಸಿಯುನಲ್ಲಿ 36 ರೋಗಿಗಳು
Last Updated 20 ಜೂನ್ 2020, 19:39 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶನಿವಾರ ಒಂದೇ ದಿನ 94 ಕೋವಿಡ್ ಪ್ರಕರಣಗಳು ವರದಿಯಾಗಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ ಸಾವಿರದ ಗಡಿ (1083) ದಾಟಿದೆ.

ಮತ್ತೆ ಮೂವರು ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದು ಅವರ ಗಂಟಲ ದ್ರವದ ಪರೀಕ್ಷೆಯಿಂದ ದೃಢಪಟ್ಟಿದ್ದು, ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.

36 ರೋಗಿಗಳು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ 21 ಮಂದಿ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲುತ್ತಿದ್ದಾರೆ. ದಮಾಮ್‌ನಿಂದ ವಾಪಸ್‌ ಆಗಿದ್ದ 18 ಅಂತರರಾಷ್ಟ್ರೀಯ ಪ್ರಯಾಣಿಕರಲ್ಲೂ ಸೋಂಕು ಕಾಣಿಸಿಕೊಂಡಿರುವುದು ದೃಢಪಟ್ಟಿದೆ. 17 ಮಂದಿ ತೀವ್ರ ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೆಲವರಿಗೆ ಹೇಗೆ ಸೋಂಕು ತಗುಲಿತು ಎನ್ನುವುದೇ ಪತ್ತೆಯಾಗಿಲ್ಲ.

ವಿದೇಶದಿಂದ ಬಂದವರು ಅನ್ಯ ಜಿಲ್ಲೆಯವರಾಗಿದ್ದು, ನಗರದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಟ್ಟಿದ್ದರು. ಮನೆಗೆ ಕಳುಹಿಸುವ ಮೊದಲು ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಕಂಟೈನ್‌ಮೆಂಟ್ ವಲಯದಲ್ಲಿ ಸಂಚರಿಸಿದ ನಾಲ್ವರು ಸೋಂಕಿತರಾಗಿದ್ದಾರೆ. ಎಚ್‌ಎಸ್ಆರ್ ಬಡಾವಣೆಯಲ್ಲಿ ರೋಗಿಯೊಬ್ಬರ ಸಂಪರ್ಕದಿಂದ 45 ವರ್ಷದ ಮಹಿಳೆ, 21 ವರ್ಷದ ಯುವಕ, 49 ವರ್ಷದ ಪುರುಷ, 65 ವರ್ಷದ ಮಹಿಳೆ ಹಾಗೂ 42 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಮೂರು ಕಡೆ ಕೋವಿಡ್ ಕೇರ್ ಸೆಂಟರ್

ಕೊರೊನಾ ಸೋಂಕು ಲಕ್ಷಣ ಬಹಿರಂಗವಾಗಿ ಗೋಚರಿಸದ ರೋಗಿಗಳಿಗೆ ಚಿಕಿತ್ಸೆ ನೀಡಲು ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಆಶ್ರಮ, ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಿಸಲಾಗುತ್ತಿದೆ. ಈ ಸಂಬಂಧ ಆರೋಗ್ಯ ಇಲಾಖೆಯ ನಿರ್ದೇಶಕರು ಅಧಿಸೂಚನೆ ಹೊರಡಿಸಿದ್ದಾರೆ. ಸೋಂಕು ಲಕ್ಷಣ ಇಲ್ಲದ ರೋಗಿಗಳಿಗೆ ಕೇಂದ್ರಗಳಲ್ಲಿ ಆರೈಕೆ ಮಾಡಿ, ಸಾಮಾನ್ಯ ಚಿಕಿತ್ಸೆ ನೀಡಲಾಗುತ್ತದೆ.

ಐವರು ವಿದ್ಯಾರ್ಥಿಗಳಿಗೆ ಸೋಂಕು

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿನ ಐವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ.ಕೋವಿಡ್ ಚಿಕಿತ್ಸೆಗೆ ಮೀಸಲಾಗಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ವೈಯಕ್ತಿಕ ಸುರಕ್ಷಾ ಸಾಧನಗಳನ್ನು (ಪಿಪಿಇ) ಧರಿಸಿದ್ದರೂ ಅವರಿಗೆ ಸೋಂಕು ತಗುಲಿದೆ. ಕೆಲ ದಿನಗಳ ಹಿಂದಷ್ಟೇ ಅಲ್ಲಿನ ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT