ಶುಕ್ರವಾರ, ಜೂನ್ 5, 2020
27 °C
ಚಿಕ್ಕಬಾಣಾವರ ರೈಲು ನಿಲ್ದಾಣಕ್ಕೆ ಪ್ರವೀಣ್ ಸೂದ್ ಭೇಟಿ

ಬಡವರ ಸೇವೆ ಮಾಡಿದ ಪುಣ್ಯ ನಿಮ್ಮದಾಗಲಿದೆ: ಸಿಬ್ಬಂದಿ ಕೆಲಸಕ್ಕೆ ಡಿಜಿಪಿ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಲಸೆ ಕಾರ್ಮಿಕರೆಲ್ಲರೂ ಬಡವರು. ಅವರನ್ನು ಸುರಕ್ಷಿತವಾಗಿ ಊರುಗಳಿಗೆ ರೈಲಿನಲ್ಲಿ ಕಳುಹಿಸಲು ಪೊಲೀಸ್, ಬಿಬಿಎಂಪಿ, ಆರೋಗ್ಯ ಇಲಾಖೆ ಹಾಗೂ ರೈಲು ಸಿಬ್ಬಂದಿ ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ. ಬಡವರ ಸೇವೆ ಮಾಡಿದ ಪುಣ್ಯ ನಿಮಗೆ ಸಿಗುತ್ತದೆ...’

ಊರು ಸೇರಲು ವಲಸೆ ಕಾರ್ಮಿಕರಿಗೆ ನೆರವಾದ ಸಿಬ್ಬಂದಿಯ ಕಾರ್ಯಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಕೃತಜ್ಞತೆ ಸಲ್ಲಿಸಿದ್ದು ಹೀಗೆ.

ನಗರದ ಹೊರವಲಯದಲ್ಲಿರುವ ಚಿಕ್ಕಬಾಣಾವರ ರೈಲು ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ ಅವರು, ಹೊರ ರಾಜ್ಯಗಳ ಕಾರ್ಮಿಕರನ್ನು ಊರಿಗೆ ಕಳುಹಿಸುವ ಪ್ರಕ್ರಿಯೆಯನ್ನು ಪರಿಶೀಲಿಸಿದರು. 100ನೇ ರೈಲಿನ ಕಾರ್ಯಾಚರಣೆಗೆ ಚಾಲನೆ ನೀಡಿದರು. ನಿಲ್ದಾಣದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

‘ರೈಲಿನಲ್ಲಿ ಹೊರಟಿರುವ ಎಲ್ಲರೂ ತೀರಾ ಬಡವರು. ಕಾರು, ವೈಯಕ್ತಿಕ ವಾಹನಗಳಲ್ಲಿ ಹೋಗುವವರಿಗೆ ಪಾಸ್ ಕೊಡುತ್ತಿದ್ದೇವೆ. ಅವರು ಹೇಗೋ ಮನೆಗಳಿಗೆ ಹೋಗುತ್ತಾರೆ. ಆದರೆ, ಈ ವಲಸೆ ಕಾರ್ಮಿಕರಿಗೆ ಪಾಸ್‌ ಕೊಟ್ಟರಷ್ಟೇ ಸಾಲದು. ಊರಿಗೆ ಹೋಗಲು ರೈಲು ವ್ಯವಸ್ಥೆಯನ್ನೂ ಕಲ್ಪಿಸುವ ಅನಿವಾರ್ಯವೂ ಇದೆ’ ಎಂದರು.

‘ವಲಸೆ ಕಾರ್ಮಿಕರು ನಮ್ಮೆಲ್ಲರ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಆಕಸ್ಮಾತ್ ನಾವು ಅವರ ಕೂಗಿಗೆ ಸ್ಪಂದಿಸದಿದ್ದರೆ ಮಾತ್ರ ತಾಳ್ಮೆ ಕಳೆದುಕೊಳ್ಳುತ್ತಿದ್ದರು. ರಸ್ತೆಗೆ ಇಳಿದು ಬಸ್‌ಗಳಿಗೆ ಕಲ್ಲು ಹೊಡೆಯುತ್ತಿದ್ದರು. ಗಲಾಟೆ ಮಾಡುತ್ತಿದ್ದರು’ ಎಂದರು.

‘ಬಡವರ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ನಾವೆಲ್ಲರೂ ಅವರನ್ನು ಊರಿಗೆ ಕಳುಹಿಸಲು ನೆರವಾಗುವ ಮೂಲಕ ಅವರ ಸಂಕಷ್ಟಕ್ಕೆ ಮಿಡಿಯಬೇಕು. ಈಗಾಗಲೇ ಹಲವರು ಊರಿಗೆ ಮರಳಿದ್ದಾರೆ. ಇನ್ನು ಮೂರ್ನಾಲ್ಕು ದಿವಸ ಕಷ್ಟಪಟ್ಟು ಕೆಲಸ ಮಾಡಿ’ ಎಂದು ಹುರಿದುಂಬಿಸಿದರು. 

ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಜೊತೆಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು