ಮಂಗಳವಾರ, ಜನವರಿ 21, 2020
27 °C
ಹೊಸಕೋಟೆ ಶೇ 90.44ರಷ್ಟು ಅತಿ ಹೆಚ್ಚು: ಅತಿ ಕಡಿಮೆ ಕೆ.ಆರ್‌.ಪುರ ಶೇ 43.25

ಉಪಚುನಾವಣೆ| ಮುಗಿದ ಮತ, ಇನ್ನಿದೆ ‘ಗಣಿತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರಿ ಜಿದ್ದಾಜಿದ್ದಿನ ಸೆಣಸಾಟದ ಮೂಲಕ ರಾಜ್ಯದ ಗಮನ ಸೆಳೆದಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸರಾಸರಿ ಶೇ 66.49ರಷ್ಟು ಮತದಾನವಾಗಿದ್ದು, ಈ ಪ್ರಮಾಣದ ಮತದಾನದಿಂದ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವೋ, ಅಭದ್ರವೋ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಆರಂಭವಾಗಿದೆ.

ಬೆಂಗಳೂರು ವ್ಯಾಪ್ತಿಯ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಭಾರಿ ಪ್ರಮಾಣದ ಮತದಾನ ಆಗಿದೆ. ಇದು ಅನರ್ಹ ಶಾಸಕರ ಪರವೋ ಅಥವಾ ವಿರುದ್ಧದ ಜನಾದೇಶವೋ ಎಂಬುದು ಮತ ಎಣಿಕೆಯ ದಿನವಾದ ಡಿ.9 ರಂದು ಗೊತ್ತಾಗಲಿದೆ.

ಮತದಾನ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ತಾವೆಷ್ಟು ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ, ಮುಂದಿನ ನಡೆ ಏನು ಎಂಬ ಲೆಕ್ಕಚಾರ ಆಡಳಿತರೂಢ ಬಿಜೆಪಿ, ವಿರೋಧ ಪಕ್ಷಗಳಾದ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಲ್ಲಿ ಆರಂಭವಾಗಿದೆ. ಸಿ ವೋಟರ್‌ ಮತ್ತು ಇತರ ಟಿ.ವಿ ವಾಹಿನಿಗಳು ನಡೆಸಿದ ಮತಗಟ್ಟೆ ಸಮಿ ಕ್ಷೆಯ ಪ್ರಕಾರ, ಬಹುತೇಕ ಅನರ್ಹ ಶಾಸ ಕರು ಮತ್ತೆ ಆಯ್ಕೆಯಾಗುವ ಸಾಧ್ಯತೆ ಇದ್ದು, ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಸಿಗ ಲಿವೆ ಎಂಬುದಾಗಿ ಭವಿಷ್ಯ ನುಡಿದಿವೆ.  

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಪ್ರತ್ಯೇಕವಾಗಿ ನಡೆಸಿರುವ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಮ್ಯಾಜಿಕ್‌ ಸಂಖ್ಯೆ ಸಿಗುವುದು ಕಷ್ಟ. ‌ಎದುರಾಳಿ ರಾಜಕೀಯ ಪಕ್ಷಗಳ ಸಮೀಕ್ಷೆಗಳು ನಿಜವಾದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮತ್ತೊಮ್ಮೆ ‘ಸಮ್ಮಿಶ್ರ’ ಸರ್ಕಾರದ ಪ್ರಯತ್ನ ಆರಂಭಿಸುವುದು ಖಚಿತ ಎಂದೂ ಹೇಳಲಾಗುತ್ತಿದೆ.

ಮತದಾನ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷ ನಡೆಸಿದ ಆಂತರಿಕ ಸಮೀಕ್ಷೆ ಮತ್ತು ಗುಪ್ತದಳದಿಂದ ಕ್ಷೇತ್ರವಾರು ಗೆಲುವು–ಸೋಲಿನ ಮಾಹಿತಿ ತರಿಸಿಕೊಂಡು ತಾಳೆ ಹಾಕುವ ಕಾರ್ಯದಲ್ಲಿ ಮಗ್ನರಾದರು. ಲಭ್ಯ ಮಾಹಿತಿಗಳ ಪ್ರಕಾರ ತಮ್ಮ ಕುರ್ಚಿಗೆ ಕಂಟಕ ಬರುವುದಿಲ್ಲ ಎಂಬುದು ಅವರಿಗೆ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಇತ್ತೀಚೆಗೆ ನಡೆದ ಮಹಾ ರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲೂ ಮತಗಟ್ಟೆ ಸಮೀಕ್ಷೆ ಗಳು ಬಿಜೆಪಿಗೆ ನಿಚ್ಚಳ ಬಹುಮತ ಸಿಗ ಲಿದೆ ಎಂದೇ ಬಿಂಬಿಸಿದ್ದವು. ಆದರೆ, ಫಲಿತಾಂಶ ಬಂದಾಗ ಬಿಜೆಪಿ ಬಹುಮತ ಪಡೆಯಲು ಸಾಧ್ಯವಾಗಿರಲಿಲ್ಲ. ಕರ್ನಾಟಕದಲ್ಲೂ ಅಂತಹುದೇ ಫಲಿತಾಂಶ ಪುನರಾವರ್ತನೆಯಾದರೆ ಬಿಜೆಪಿ ಸರ್ಕಾರ ಸಂಕಷ್ಟಕ್ಕೆ ಸಿಲುಕಬಹುದು. ಬಿಜೆಪಿ 6 ಅಥವಾ 7ಕ್ಕಿಂತಲೂ ಕಡಿಮೆ ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್‌– ಜೆಡಿಎಸ್‌ ಮಧ್ಯೆ ಪುನಃ ‘ದೋಸ್ತಿ’ ಚಿಗುರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ತುರುಸಿನ ಪೈಪೋಟಿ ನಡೆದಿರುವ ಕ್ಷೇತ್ರಗಳಲ್ಲಿ ಶೇ 60 ರಿಂದ ಶೇ 80ರಷ್ಟು ಮತದಾನ ಆಗಿದೆ. ಮತದಾರ ಉಪ ಚುನಾವಣೆ ಬಗ್ಗೆ ನಿರಾಸಕ್ತಿ ತಾಳಲಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸ್ಥಳೀಯ ಮಟ್ಟದ ಮಾಹಿತಿಯನ್ನು ಆಧರಿಸಿ ಯಾವ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿವೆ. 

ಸಣ್ಣ ಪುಟ್ಟ ಘರ್ಷಣೆ

ಕೆ.ಆರ್‌.ಪುರ ಕ್ಷೇತ್ರದ ದೇವಸಂದ್ರ ವಾರ್ಡ್‌ ಬೂತ್‌ ಬಳಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ ಘಟನೆ ನಡೆಯಿತು. 

ಎಚ್‌.ಡಿ.ಕೋಟೆ ಕಾಂಗ್ರೆಸ್ ಶಾಸಕ ಸಿ. ಅನಿಲ್‌ ಕುಮಾರ್ ಅವರು ತಮ್ಮ ಹುಟ್ಟೂರಾದ ಹುಣಸೂರು ಕ್ಷೇತ್ರ ರಾಮೇನಹಳ್ಳಿಗೆ ಮತದಾನಕ್ಕಾಗಿ ಬಂದಿದ್ದರು. ಈ ವೇಳೆ ಅವರ ಜತೆ ಅಧಿಕ ಸಂಖ್ಯೆಯಲ್ಲಿ ಬೆಂಬಲಿಗರು ಇದ್ದ ಕಾರಣ, ಪೊಲೀಸರು ನಿರ್ಬಂಧಿಸಿದರು. ಈ ವೇಳೆ ಮಾತಿನ ಚಕಮಕಿ, ಅನಿಲ್‌ ಜತೆಗಾರರಿಂದ ಧರಣಿ ನಡೆಯಿತು.

ಬಿಜೆಪಿ ಗೆಲುವು ಸಮೀಕ್ಷೆ ಸುಳಿವು

ಡಿ.9ರಂದು ಮತ ಎಣಿಕೆ

ರಾಜಕೀಯ ಲೆಕ್ಕಾಚಾರ ಶುರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು