ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಹಳ್ಳಿ ಸೇರಿದವರ ಚಿತ್ತ ಕೃಷಿಯತ್ತ

ಉಡುಪಿ: ಕೃಷಿಯತ್ತ ಯುವಕರ ಒಲವು, ಮೇ ಆರಂಭದಲ್ಲೇ 1,200 ಕ್ವಿಂಟಲ್‌ ಭತ್ತದ ಬಿತ್ತನೆ ಬೀಜ ಮಾರಾಟ
Last Updated 14 ಮೇ 2020, 19:30 IST
ಅಕ್ಷರ ಗಾತ್ರ

ಉಡುಪಿ: ಮಹಾನಗರಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದ ಕರಾವಳಿಗರು ಸ್ವಂತ ಊರುಗಳಿಗೆ ಈಗ ಮರಳಿದ್ದು, ಇಲ್ಲಿಯೇ ಬದುಕು ಕಟ್ಟಿಕೊಳ್ಳುವ ಮನಸ್ಸು ಮಾಡಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಅನುಭವಿಸಿದ ಕಷ್ಟ, ಭವಿಷ್ಯದ ಆತಂಕಗಳು, ಕೃಷಿಯೆಡೆಗಿನ ಸೆಳೆತ, ತವರಿನ ಮೇಲೆ ಮೋಹ ಹೆಚ್ಚಾಗಲು ಕಾರಣ.

ಜಿಲ್ಲೆಯ 20,000ಕ್ಕೂ ಹೆಚ್ಚು ಮಂದಿ ಬೆಂಗಳೂರು, ಮುಂಬೈ, ಗೋವಾ, ಹೈದರಾಬಾದ್ ಸೇರಿ ದೊಡ್ಡ ನಗರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹುತೇಕರು ಹೋಟೆಲ್‌, ಗಾರ್ಮೆಂಟ್ಸ್‌ ಹಾಗೂ ಸಣ್ಣ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದು, ಲಾಕ್‌ಡೌನ್‌ನಿಂದಾಗಿ ಸದ್ಯ ಉದ್ಯೋಗ ಹಾಗೂ ವೇತನವಿಲ್ಲದಂತಾಗಿದೆ. ಕೆಲವರನ್ನು ಕೆಲಸದಿಂದ ತೆಗೆಯಲಾಗಿದೆ.

ಇವರೆಲ್ಲರೂ ಲಾಕ್‌ಡೌನ್ ಬಳಿಕ ಸ್ವಗ್ರಾಮಗಳಿಗೆ ಬಂದಿದ್ದು, ಹೆಚ್ಚಿನವರು ಮರಳಿ ನಗರಗಳತ್ತ ಮುಖಮಾಡದೆ ಇಲ್ಲಿಯೇ ಕೃಷಿ ಮಾಡಲು ನಿರ್ಧರಿಸಿದ್ದಾರೆ. ಮಳೆಗಾಲದ ಬೆಳೆಗೆ ಹಡಿಲು ಬಿದ್ದ ಗದ್ದೆಗಳನ್ನು ಉಳುಮೆಗೆ ಸಿದ್ಧಗೊಳಿಸುತ್ತಿದ್ದಾರೆ.

ಬಿತ್ತನೆ ಬೀಜಕ್ಕೆ ಹೆಚ್ಚಿದ ಬೇಡಿಕೆ: ಯುವಕರು ಕೃಷಿಯತ್ತ ಹೊರಳುತ್ತಿರುವುದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಭತ್ತದ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಾಗಿದೆ. ಸಾಮಾನ್ಯವಾಗಿ ಮೇ ಮೊದಲ ವಾರದಲ್ಲಿ ಬೇಡಿಕೆ ಕಡಿಮೆ ಇರುತ್ತಿತ್ತು. ಈ ವರ್ಷ ಮಾರಾಟ ಶುರುವಾದ ದಿನವೇ ಖರೀದಿಗೆ ನೂಕುನುಗ್ಗಲು ಉಂಟಾಗಿದೆ ಎನ್ನುತ್ತಾರೆಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ.

ಉಡುಪಿಯಲ್ಲಿ 585 ಕ್ವಿಂಟಲ್‌,ಕುಂದಾಪುರದಲ್ಲಿ 540 ಕ್ವಿಂಟಲ್‌ ಮತ್ತುಕಾರ್ಕಳದಲ್ಲಿ 75 ಕ್ವಿಂಟಲ್‌ ಬಿತ್ತನೆ ಬೀಜ ಮಾರಾಟವಾಗಿದೆ. ಕಳೆದ ವರ್ಷ ಈ ವೇಳೆಗೆ ಅರ್ಧದಷ್ಟು ಮಾತ್ರ ಮಾರಾಟವಾಗಿತ್ತು. ಮಳೆ ಶುರುವಾದ ಬಳಿಕ ಬೇಡಿಕೆ ಮತ್ತಷ್ಟು ಹೆಚ್ಚಲಿದೆ. ಒಟ್ಟಾರೆ, ಈ ವರ್ಷ ಗುರಿಗಿಂತ ಹೆಚ್ಚಿನ ಪ್ರಮಾಣದ ಕೃಷಿ ನಡೆಯಲಿದೆ ಎಂದರು.

ಕೃಷಿ ಇಲಾಖೆಗೆ ಕರೆ:ಯಾವ ಭತ್ತದ ತಳಿ ಬೆಳೆದರೆ ಸೂಕ್ತ, ಎಕರೆಗೆ ಎಷ್ಟು ಬಿತ್ತನೆ ಬೀಜ ಬೇಕು, ಇಳುವರಿ ಎಷ್ಟು ಸಿಗಲಿದೆ ಹೀಗೆ, ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ಯುವಕರು ರೈತ ಸಂಪರ್ಕ ಕೇಂದ್ರಗಳಿಗೆ ಕರೆ ಮಾಡುತ್ತಿದ್ದಾರೆ. ಕೆಲವರು ಖುದ್ದು ಬಂದು ವಿಚಾರಿಸುತ್ತಿದ್ದಾರೆ. ಈ ವರ್ಷ ಹಡಿಲು ಬಿದ್ದ ಭೂಮಿಯೂ ನಳನಳಿಸುವ ನಿರೀಕ್ಷೆ ಇದೆ ಎಂದರು.

ಬಂಡವಾಳ ಕಡಿಮೆ; ಲಾಭ ಹೆಚ್ಚು: ಎಕರೆ ಭತ್ತ ಕೃಷಿಗೆ ₹ 15,000 ಖರ್ಚಾಗುತ್ತಿತ್ತು. ಈ ಬಾರಿ ಮನೆಮಂದಿಯೆಲ್ಲ ಕೃಷಿಯಲ್ಲಿ ತೊಡಗಿದ್ದು, ಕೂಲಿಯಾಳುಗಳ ಮೇಲಿನ ಅವಲಂಬನೆ ತಗ್ಗಿದೆ. ಬಂಡವಾಳ ಹೂಡಿಕೆ ಕಡಿಮೆಯಾಗಿ, ಹೆಚ್ಚು ಲಾಭ ಕೈಸೇರಲಿದೆ ಎಂದು ರೈತ ಮಂಜುನಾಥ್‌ ತಿಳಿಸಿದರು.

‘ಅಪ್ಪ– ಅಮ್ಮನಿಗೆ ಆಸರೆ’

‘ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ತಿಂಗಳಿಗೆ ₹ 15 ಸಾವಿರ ಸಿಗುತ್ತಿತ್ತು. ಮನೆ ಬಾಡಿಗೆ, ಖರ್ಚು ಕಳೆದು ₹ 5 ಸಾವಿರ ಉಳಿಯುತ್ತಿತ್ತು. 2 ತಿಂಗಳಿನಿಂದ ಕೆಲಸವಿಲ್ಲ, ಸಂಬಳವಿಲ್ಲ. ಹೋಟೆಲ್‌ ಉದ್ಯಮ ಸಹಜ ಸ್ಥಿತಿಗೆ ಬರುವ ಲಕ್ಷಣಗಳಿಲ್ಲ. ಊರಿನಲ್ಲಿದ್ದುಕೊಂಡು ಕೃಷಿ ಮಾಡಲು ನಿರ್ಧರಿಸಿದ್ದೇನೆ. ಅಪ್ಪ –ಅಮ್ಮನಿಗೂ ಆಸರೆಯಾದಂತಾಗುತ್ತದೆ’ ಎಂದರು ಯುವಕ ರಂಜಿತ್‌.

***

ಕೃಷಿಯ ಜತೆಗೆ ಹೈನುಗಾರಿಕೆ, ಮಲ್ಲಿಗೆ ಕೃಷಿ, ತರಕಾರಿ ಬೆಳೆಯುವ ಬಗ್ಗೆಯೂ ಯುವಕರಲ್ಲಿ ಉತ್ಸಾಹ ಇದೆ. ಇದೆಲ್ಲ ಲಾಕ್‌ಡೌನ್‌ ಪರಿಣಾಮ.
– ಕೆಂಪೇಗೌಡ, ಕೃಷಿ ಇಲಾಕೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT