ಶನಿವಾರ, ಮಾರ್ಚ್ 28, 2020
19 °C
ಬೀದರ್‌ ಜಿಲ್ಲೆಯಿಂದ ಭಾನುವಾರ ರಾತ್ರಿ ಕಲಬುರ್ಗಿಗೆ ಬಂದಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ

ಸಿದ್ದರಾಮಯ್ಯಗೆ ಸರ್ಕಾರಿ ಕಾರು ನೀಡದ ಜಿಲ್ಲಾಡಳಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಬೀದರ್‌ ಜಿಲ್ಲೆಯಿಂದ ಭಾನುವಾರ ತಡರಾತ್ರಿ ಇಲ್ಲಿಗೆ ಬಂದು ವಾಸ್ತವ್ಯ ಮಾಡಿ, ಸೋಮವಾರ ವಿಜಯಪುರಕ್ಕೆ ತೆರಳಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜಿಲ್ಲಾ ಆಡಳಿತ ಸರ್ಕಾರಿ ಕಾರು ಒದಗಿಸದಿರುವುದು ವಿವಾದವಾಗಿ ಮಾರ್ಪಟ್ಟಿದೆ.

ಸರ್ಕಾರಿ ಕಾರು ನೀಡದ ಕಾರಣ ಖಾಸಗಿ ಕಾರಿನಲ್ಲಿ ಅವರು ವಿಜಯಪುರಕ್ಕೆ ತೆರಳಿದರು. ಆದರೆ, ಪೊಲೀಸ್‌ ಬೆಂಗಾವಲು ವಾಹನ ನೀಡಲಾಗಿತ್ತು.

‘ಸಿದ್ದರಾಮಯ್ಯ ಅವರಿಗೆ ನಗರದ ಐವಾನ್– ಇ– ಶಾಹಿ ಅತಿಥಿ ಗೃಹದಲ್ಲಿ ಕೊಠಡಿ ಕಾಯ್ದಿರಿಸಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಬುಕ್ಕಿಂಗ್ ರದ್ದುಗೊಳಿಸಲಾಗಿದೆ. ಓಡಾಟಕ್ಕೆ ಸರ್ಕಾರಿ ಕಾರನ್ನೂ ಕೊಟ್ಟಿಲ್ಲ’ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

‘ಸಿದ್ದರಾಮಯ್ಯ ಸಿಎಎ ವಿರೋಧಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ಹೀಗಾಗಿ ಅವರಿಗೆ ಸರ್ಕಾರಿ ಅತಿಥಿಗೃಹ, ಸರ್ಕಾರಿ ಕಾರು ಕೊಡಬೇಡಿ ಎಂದು ಮುಖ್ಯಮಂತ್ರಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಸಂದೇಶ ರವಾನೆಯಾಗಿತ್ತು. ಹೀಗಾಗಿ, ಕಾರು, ಕೊಠಡಿ ಕೊಡದೇ ಅಪಮಾನಿಸಲಾಗಿದೆ. ಇದನ್ನು ಅಧಿವೇಶನದಲ್ಲಿ ಪ್ರಶ್ನಿಸುತ್ತೇವೆ’ ಎಂದು ಅವರು ಹೇಳಿದರು.

‘ಜಿಲ್ಲಾಡಳಿತ ಕೊಠಡಿ ಒದಗಿಸಲು ಅಸಹಕಾರ ನೀಡಿದ್ದರಿಂದ ಸಿದ್ದರಾಮಯ್ಯ ಅವರಿಗೆ ಖಾಸಗಿ ಹೋಟೆಲ್‌ನಲ್ಲಿ ಕೊಠಡಿ ವ್ಯವಸ್ಥೆ ಮಾಡಬೇಕಾಯಿತು. ಇದು ವಿರೋಧ ಪಕ್ಷದ ನಾಯಕರಿಗೆ ಸರ್ಕಾರ ಮಾಡಿದ ಅವಮಾನ’ ಎಂದು ಅವರು ದೂರಿದರು.

ಶಿಷ್ಟಾಚಾರ ಪಾಲನೆ: ‘ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ ಮತ್ತು ಸಿದ್ದರಾಮಯ್ಯ ಇಬ್ಬರಿಗೂ ಅತಿಥಿಗೃಹದಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಶಿಷ್ಟಾಚಾರದ ಪ್ರಕಾರ ಉಪ ಮುಖ್ಯಮಂತ್ರಿ ಅವರಿಗೆ ಮೊದಲ ಆದ್ಯತೆ ನೀಡಬೇಕಿದ್ದುದರಿಂದ ಅವರಿಗೆ ಮೊದಲನೇ ಸೂಟ್‌ ಕೊಠಡಿಯನ್ನು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಎರಡನೇ ಸಂಖ್ಯೆಯ ಕೊಠಡಿ ನೀಡಿದ್ದೆವು. ಕೊಠಡಿ ಬುಕಿಂಗ್‌ ರದ್ದುಗೊಳಿಸಿಲ್ಲ. ಬೇಕಿದ್ದರೆ ದಾಖಲೆ
ಗಳನ್ನು ಪರಿಶೀಲಿಸಬಹುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರಪ್ಪ ವಣಿಕ್ಯಾಳ ಪ್ರತಿಕ್ರಿಯಿಸಿದರು.

‘ಜಿಲ್ಲೆಯಲ್ಲಿ ಸರ್ಕಾರದ ಕಾರ್ಯಕ್ರಮಗಳಿದ್ದರೆ ಮಾತ್ರ ಸರ್ಕಾರಿ ಕಾರನ್ನು ಒದಗಿಸಬೇಕು ಎಂಬುದು ಶಿಷ್ಟಾಚಾರದಲ್ಲಿದೆ. ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಹೀಗಾಗಿ ಅವರಿಗೆ ಜಿಲ್ಲಾ ಆಡಳಿತದಿಂದ ಕಾರು ನೀಡಿಲ್ಲ’ ಎಂದು ಅವರು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು