ಸೋಮವಾರ, ಮಾರ್ಚ್ 1, 2021
31 °C

ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ: ಭ್ರಷ್ಟಾಚಾರ ಸಾಬೀತಾದರೆ ಕಡ್ಡಾಯ ನಿವೃತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ನೌಕರರಲ್ಲಿ ಇನ್ನಷ್ಟು ಶಿಸ್ತು ತರುವ ಸಲುವಾಗಿ ‘ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ- 1957’ಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದ್ದು, ಭ್ರಷ್ಟಾಚಾರ ಪ್ರಕರಣದಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಸೂಚನೆ ನೀಡಿದೆ.

ಈ ತಿದ್ದುಪಡಿ ನಿಯಮಗಳ ಕರಡನ್ನು ಇದೇ 2ರಂದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.

ತಿದ್ದುಪಡಿ ನಿಯಮದ ಕರಡು ಪ್ರಕಾರ, ಭ್ರಷ್ಟಾಚಾರ ಸಾಬೀತಾದ ಪ್ರಕರಣಗಳಲ್ಲಿ ಕಡ್ಡಾಯ ನಿವೃತ್ತಿ, ಕೆಲಸದಿಂದ ತೆಗೆದುಹಾಕುವುದು ಅಥವಾ ವಜಾಗೊಳಿಸುವ ಶಿಕ್ಷೆ ವಿಧಿಸಲು ಅವಕಾಶವಿದೆ. ಈ ಮೂರರ ಹೊರತು ಇದಕ್ಕಿಂತ ಯಾವುದೇ ಕಡಿಮೆ ಶಿಕ್ಷೆ ವಿಧಿಸುವಂತಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.

ಕಡ್ಡಾಯ ನಿವೃತ್ತಿಗೊಳಿಸಿದರೆ ನಿವೃತ್ತಿ ಸೌಲಭ್ಯಗಳು ಸಿಗಲಿವೆ. ಕರ್ತವ್ಯದಿಂದ ತೆಗೆದು ಹಾಕಿದ ನೌಕರನಿಗೆ ಪಿಂಚಣಿ ಸೌಲಭ್ಯ ಸಿಗುವುದಿಲ್ಲ. ಆದರೆ, ಭವಿಷ್ಯದಲ್ಲಿ ನಾಗರಿಕ ಸೇವೆಗೆ ಸೇರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ವಜಾಗೊಂಡ ನೌಕರನಿಗೆ ಪಿಂಚಣಿ ಸೌಲಭ್ಯ ಇರುವುದಿಲ್ಲ. ಅಲ್ಲದೆ, ಮತ್ತೊಮ್ಮೆ ಕರ್ತವ್ಯಕ್ಕೆ ಸೇರಲು ಅವಕಾಶವೂ ಇರುವುದಿಲ್ಲ ಎಂದು ನಿಯಮದಲ್ಲಿದೆ.

ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದರೆ ಹಿಂಬಡ್ತಿ ನೀಡಲಾಗುವುದು. ರಾಜಕೀಯದಲ್ಲಿ ಗುರುತಿಸಿಕೊಂಡರೆ, ಚುನಾವಣೆಯಲ್ಲಿ ಸ್ಪರ್ಧಿಸಿದರೆ ಕಡ್ಡಾಯ ನಿವೃತ್ತಿ, ವರದಕ್ಷಿಣೆ ತೆಗೆದುಕೊಂಡರೆ ಸೇವೆಯಿಂದ ತೆಗೆದು ಹಾಕುವುದು, ಎರಡನೇ ಮದುವೆ ಮಾಡಿಕೊಂಡರೆ ಕಡ್ಡಾಯ ನಿವೃತ್ತಿ, ಸಿನಿಮಾ, ನಾಟಕದಲ್ಲಿ ತೊಡಗಿದರೆ ಎರಡು ಬಾರಿ ವಾರ್ಷಿಕ ವೇತನ ಬಡ್ತಿ ತಡೆ ಇತ್ಯಾದಿ ನಿಯಮಗಳನ್ನು ಕರಡಿನಲ್ಲಿ ಸೇರಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು