ಬುಧವಾರ, ಮೇ 12, 2021
26 °C

ಕುಮಾರಸ್ವಾಮಿ ಜೆಡಿಎಸ್‌ಗಷ್ಟೆ ಸಿ.ಎಂ ಅಲ್ಲ: ಜಿ ಪರಮೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಎಚ್.ಡಿ.ಕುಮಾರಸ್ವಾಮಿ ಕೇವಲ ಜೆಡಿಎಸ್‌ ಮುಖ್ಯಮಂತ್ರಿ ಅಲ್ಲ; ಅವರು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ. ಅವರು ಮಾಡುವ ಒಳ್ಳೆಯ ಕೆಲಸಗಳ ಶ್ರೇಯ ಸಮ್ಮಿಶ್ರ ಸರ್ಕಾರಕ್ಕೂ ಸಿಗುತ್ತದೆ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.

ಸುತ್ತೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಗ್ರಾಮ ವಾಸ್ತವ್ಯವನ್ನು ಅವರು ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಇದರಿಂದ ಗ್ರಾಮದ ಸಮಗ್ರ ಪ್ರಗತಿಯಾಗುತ್ತದೆ. ಇದನ್ನು ಟೀಕಿಸುವ ವಿರೋಧ ಪಕ್ಷಗಳು ರಾಜಕೀಯಕ್ಕೂ ಇತಿಮಿತಿ ಇದೆ ಎಂಬುದನ್ನು ಅರಿಯಬೇಕು’ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗಬೇಕಿದೆ. ಇದಕ್ಕಾಗಿ ಗ್ರಾಮಗಳ ಸರ್ಕಾರಿ ಶಾಲೆಯಲ್ಲಿ ಮುಖ್ಯಮಂತ್ರಿ ವಾಸ್ತವ್ಯ ಮಾಡುತ್ತಾರೆ. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.

‘ನಾನೂ ಇದೇ ಬಗೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದೇನೆ. ಸದ್ಯದಲ್ಲೇ ದಿನಾಂಕ ಹಾಗೂ ಸ್ಥಳ ನಿಗದಿಪಡಿಸುತ್ತೇನೆ’ ಎಂದರು.

‘ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದಿಲ್ಲ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಕೆಲ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೆ’ ಎಂದು ನುಡಿದರು.

‘ಬಾಯಿಗೆ ಪ್ಲಾಸ್ಟರ್‌ ಹಾಕಿಕೊಂಡಿರುವೆ’

ಮದ್ದೂರು: ‘ಬಿಜೆಪಿ ಶಾಸಕ ಶ್ರೀರಾಮುಲು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಪ್ರತಿಕ್ರಿಯೆ ನೀಡದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ, ಬಾಯಿಗೆ ಪ್ಲಾಸ್ಟರ್‌ ಹಾಕಿಕೊಂಡಿದ್ದೇನೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸೋಮವಾರ ವ್ಯಂಗ್ಯವಾಡಿದರು.

‘ಶ್ರೀರಾಮುಲು ಅಣ್ಣನವರ ಟ್ವೀಟ್‌ ವಿಚಾರದ ಬಗ್ಗೆ ಮುಂದೊಂದು ದಿನ ಉತ್ತರ ಕೊಡುತ್ತೇನೆ. ಐಎಂಎ ಮುಖ್ಯಸ್ಥ ಮೊಹಮ್ಮದ್‌ ಮನ್ಸೂರ್‌ ಖಾನ್‌ ನನಗೆ ಗೊತ್ತಿಲ್ಲ. ಆತನ ಮಗ ನನ್ನ ಸ್ನೇಹಿತ. ಇನ್ನುಳಿದ ವಿಚಾರಗಳ ಬಗ್ಗೆ ಮಾಹಿತಿ ಇಲ್ಲ’ ಎಂದರು.

ಸಮ್ಮಿಶ್ರ ಸರ್ಕಾರದ ಶಕ್ತಿ ಕುಂದಿಸುವ ಪ್ರಯತ್ನ ಬೇಡ

ಕಲಬುರ್ಗಿ: ‘ಮಧ್ಯಂತರ ಚುನಾವಣೆ ಬರುತ್ತದೆ ಎಂದು ಊಹಾಪೋಹದ ಹೇಳಿಕೆ ನೀಡಿ ಸಮ್ಮಿಶ್ರ ಸರ್ಕಾರದ ಶಕ್ತಿ ಕುಂದಿಸುವ ಪ್ರಯತ್ನವನ್ನು ಯಾರೂ ಮಾಡಬಾರದು’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಮೇರೆಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದೇವೆ. ಹೀಗಾಗಿ ಮೈತ್ರಿ ಮುರಿದುಕೊಳ್ಳುವ ನಿರ್ಧಾರ ಕೈಗೊಳ್ಳಬೇಕಾಗಿರುವುದು ನಮ್ಮ ಪಕ್ಷದ ಹೈಕಮಾಂಡ್‌ ಹೊರತು, ನಾವಲ್ಲ’ ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಎಲ್ಲ ನಾಯಕರೂ ಒಟ್ಟಾಗಿ ತೀರ್ಮಾನ ಮಾಡಿ ಮೈತ್ರಿ ಮಾಡಿಕೊಂಡಿರುವುದರಿಂದ ನಾವು ಅದಕ್ಕೆ ಬದ್ಧರಾಗಿ ಸಹಕಾರ ನೀಡಬೇಕು. ಒಂದು ವೇಳೆ ಇಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಬೇಸರವಿದ್ದರೆ ಪಕ್ಷದ ಹೈಕಮಾಂಡ್‌ಗೆ ತಿಳಿಸಲಿ’ ಎಂದರು.

ಪಕ್ಷ ಸಂಘಟನೆಗೆ ಹೊಸ ಮುಖಗಳು

ಮೈಸೂರು: ‘ಕೆಪಿಸಿಸಿ ಪದಾಧಿಕಾರಿಗಳ ಸಮಿತಿ ವಿಸರ್ಜಿಸಲಾಗಿದೆ. ನೂತನ ಪದಾಧಿಕಾರಿಗಳ ನೇಮಕಾತಿಯಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನವಾಗಿದೆ’ ಎಂದು ಸಮ್ಮಿಶ್ರ ಸರ್ಕಾರದ ಸಮ
ನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಹಳಬರು–ಹೊಸಬರ ಸಮ್ಮಿಶ್ರಣ ಕೆಪಿಸಿಸಿಯಲ್ಲಿ ಇರಲಿದೆ. ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಕಾಣುವ ಕನಸುಗಳಿಗೆ ಯಾರಿಂದಲೂ ಉತ್ತರ ಕೊಡಲು ಆಗಲ್ಲ. ಅವರು ಈ ಹಿಂದೆ ಹೇಳಿದ್ದ ಯಾವೊಂದೂ ಮಾತು ನಿಜವಾಗಿಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಮಧ್ಯಂತರ ಚುನಾವಣೆಯ ಮಾತಿಲ್ಲ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು