ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಧಾರಾಕಾರ ಮಳೆ: ಮತ್ತೆ ‘ರೆಡ್‌ ಅಲರ್ಟ್‌’ ಘೋಷಣೆ

Last Updated 5 ಆಗಸ್ಟ್ 2019, 11:14 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡಗಿನಲ್ಲಿ ಮತ್ತೆ ಭಾರಿ ಮಳೆ ಸುರಿಯಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು ಆ.7ರಿಂದ 9ರ ವರೆಗೆ ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ.

‘ರೆಡ್‌ ಅಲರ್ಟ್‌’ ವೇಳೆ 204 ಮಿ.ಮೀಗಿಂತ ಅಧಿಕ ಮಳೆ ಬೀಳುವ ಸಾಧ್ಯತೆಯಿದೆ. ಹಾಗೆಯೇ, ಮಂಗಳವಾರ (ಆ.6ರಂದು) 115 ಮಿ.ಮೀನಿಂದ 204 ಮಿ.ಮೀ ವರೆಗೆ ಮಳೆ ಸುರಿಯಲಿದ್ದು ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಮನವಿ ಮಾಡಿದೆ.

ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಭಾಗಮಂಡಲ ಜಲಾವೃತಗೊಂಡಿದೆ.

ಕೊಡಗು– ಕೇರಳ ಅಂತರ ರಾಜ್ಯ ಹೆದ್ದಾರಿ ಬಂದ್‌
ಮಡಿಕೇರಿ:
ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಪೆರುಂಬಾಡಿ – ಮಾಕುಟ್ಟ ಅಂತರ ರಾಜ್ಯ ಹೆದ್ದಾರಿಯ ವಾಟೆಕೊಲ್ಲಿ ಎಂಬಲ್ಲಿ ರಸ್ತೆ ಕುಸಿದು ವಾಹನ ಸಂಚಾರ ಬಂದ್‌ ಆಗಿದೆ.

ದಕ್ಷಿಣ ಕೊಡಗು ಭಾಗದಲ್ಲಿ ಭಾನುವಾರ ರಾತ್ರಿಯಿಡೀ ಭಾರಿ ಮಳೆ ಸುರಿದಿದೆ. ಅಂತರ ರಾಜ್ಯ ಹೆದ್ದಾರಿಯು ವಾಹನ ಸಂಚಾರಕ್ಕೆ ಅತ್ಯಂತ ಅಪಾಯಕಾರಿ ಆಗಿದ್ದು ಪೆರುಂಬಾಡಿ ಚೆಕ್‌ಪೋಸ್ಟ್‌ನಿಂದ ಮಾಕುಟ್ಟ ಚೆಕ್‌ಪೋಸ್ಟ್‌ ತನಕ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ. ಗೋಣಿಕೊಪ್ಪಲು, ಪೊನ್ನಂಪೇಟೆ, ಕುಟ್ಟ ಮೂಲಕ ಪರ್ಯಾಯ ಮಾರ್ಗದಲ್ಲಿ ಕೇರಳ ರಾಜ್ಯಕ್ಕೆ ವಾಹನಗಳು ಸಂಚರಿಸುತ್ತಿವೆ.

ಹೆದ್ದಾರಿ ಕುಸಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌ ಭೇಟಿ ನೀಡಿ ಪರಿಶೀಲಿಸಿದರು. ಶೀಘ್ರವೇ ಎಂ–ಸ್ಯಾಂಡ್‌ ಚೀಲ ಬಳಸಿ ತಾತ್ಕಾಲಿಕ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅನುವು ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಳಪೆ ಕಾಮಗಾರಿಯೇ ಕಾರಣ?:ಕಳೆದ ವರ್ಷ ಸಹ ಮಹಾಮಳೆಗೆ ಈ ಮಾರ್ಗದ ಹಲವು ಸ್ಥಳಗಳಲ್ಲಿ ಹೆದ್ದಾರಿ ಕುಸಿದಿತ್ತು. ಮೂರು ತಿಂಗಳ ಕಾಲ ವಾಹನ ಸಂಚಾರ ಬಂದ್‌ ಆಗಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಸ್ತೆ ಹಾಗೂ ತಡೆಗೋಡೆ ನಿರ್ಮಿಸಿ ಕೇರಳಕ್ಕೆ ಮರು ಸಂಪರ್ಕ ಕಲ್ಪಿಸಲಾಗಿತ್ತು. ಆದರೆ, ಈಗ ಎರಡು ದಿನ ಸುರಿದ ನಿರಂತರ ಮಳೆಗೆ ತಡೆಗೋಡೆ ಸಮೇತ ಹೆದ್ದಾರಿ ಕುಸಿದಿದ್ದು ಕಳಪೆ ಕಾಮಗಾರಿ ಕಾರಣ ಎಂದು ಸ್ಥಳೀಯರು ದೂರಿದರು.

ನಿರಂತರ ಮಳೆಗೆ ಭಾಗಮಂಡಲ ಜಲಾವೃತವಾಗಿದೆ. ತ್ರಿವೇಣಿ ಸಂಗಮದಲ್ಲಿ ಅಪಾರ ನೀರು ಸಂಗ್ರಹವಾಗಿದೆ. ಸೋಮವಾರ ಮಧ್ಯಾಹ್ನವರೆಗೂ ಭಾಗಮಂಡಲ– ನಾಪೋಕ್ಲು ರಸ್ತೆಯ ಮೇಲೆ ಕಾವೇರಿ ನೀರು ಹರಿಯುತ್ತಿತ್ತು. ಮಧ್ಯಾಹ್ನದ ಬಳಿಕ ಮಳೆಯ ಅಬ್ಬರ ಕೊಂಚ ತಗ್ಗಿದ್ದು ನೀರಿನಮಟ್ಟ ಇಳಿಕೆಯಾಗಿದೆ. ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳಲ್ಲಿ ನೀರಿನ ಮಟ್ಟ ಹಚ್ಚಳವಾಗಿದೆ. ಚೆನ್ನಂಗೊಲ್ಲಿ ಎಂಬಲ್ಲಿ ಬೃಹತ್‌ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಜಿಲ್ಲೆಯ ಅಲ್ಲಲ್ಲಿ ಗಾಳಿಗೆ ಮರಗಳು ಉರುಳಿವೆ.

ಮಳೆ ಪ್ರಮಾಣ: 24 ಗಂಟೆ ಅವಧಿಯಲ್ಲಿ ಭಾಗಮಂಡಲದಲ್ಲಿ 154 ಮಿ.ಮೀ, ಪೊನ್ನಂಪೇಟೆಯಲ್ಲಿ 100, ಶಾಂತಳ್ಳಿ 115, ವಿರಾಜಪೇಟೆ 69, ಮಡಿಕೇರಿ 62, ಸೋಮವಾರಪೇಟೆ 53 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT