ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಸಾವಿರ ಗೃಹರಕ್ಷಕ ಸಿಬ್ಬಂದಿಗೆ ಕೊಕ್‌!

ಕೊರೊನಾ ಹರಡುತ್ತಿರುವ ಮಧ್ಯೆಯೇ ಪೊಲೀಸ್‌ ಇಲಾಖೆಯಿಂದ ದಿಢೀರ್ ಕ್ರಮ
Last Updated 1 ಜೂನ್ 2020, 1:40 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ರಾಜ್ಯದಾದ್ಯಂತ ಪೊಲೀಸ್‌ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ಗಳಿಗೆ ಪರ್ಯಾಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ 9,000ಕ್ಕೂ ಹೆಚ್ಚು ಗೃಹರಕ್ಷಕ ಸಿಬ್ಬಂದಿಯನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

‌ಕಾನ್‌ಸ್ಟೆಬಲ್‌ ಹುದ್ದೆಗಳ ರಿಕ್ತ ಸ್ಥಾನಕ್ಕೆ ಅನುಗುಣವಾಗಿ ಸೋಮವಾರದಿಂದ (ಜೂನ್‌ 1) ಅನ್ವಯವಾಗುವಂತೆ ಗೃಹರಕ್ಷಕ ಸಿಬ್ಬಂದಿಯನ್ನು ಮರು ಹಂಚಿಕೆ ಮಾಡಿ ಎಡಿಜಿಪಿ (ಆಡಳಿತ) ಎಂ.ಎ. ಸಲೀಂ ಎಲ್ಲ ಘಟಕಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.

ಈ ಸುತ್ತೋಲೆ ಅನ್ವಯ ಎಡಿಜಿಪಿ ಕಚೇರಿಗಳು, ಕಮಿಷನರೇಟ್‌ಗಳು ಮತ್ತು ಎಲ್ಲ ವಲಯಗಳಿಗೆ ಸೇರಿ ಒಟ್ಟು 3,695 ಗೃಹರಕ್ಷಕ ಸಿಬ್ಬಂದಿಯನ್ನು ಮಾತ್ರ ನೇಮಿಸಿಕೊಳ್ಳಲು ಅವಕಾಶವಿದೆ. ರಾಜ್ಯದಲ್ಲಿ ಸದ್ಯ ಸುಮಾರು 25 ಸಾವಿರ ಗೃಹರಕ್ಷಕರಿದ್ದು ಈ ಪೈಕಿ, ಪೊಲೀಸ್‌ ಇಲಾಖೆಯೊಂದರಲ್ಲೇ 12 ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ. ಕೊರೊನಾ ಸೋಂಕು ತಡೆಯುವ ವಾರಿಯರ್ಸ್‌ಗಳಾಗಿ ಕಾನ್‌ಸ್ಟೆಬಲ್‌ಗಳಂತೆ ಈ ಗೃಹರಕ್ಷಕರೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮುಳುವಾಯಿತೇ ಭತ್ಯೆ ಹೆಚ್ಚಳ?: ‘ಗೃಹರಕ್ಷಕ ಸಿಬ್ಬಂದಿಗೆ ಸರ್ಕಾರ ಕರ್ತವ್ಯ ದಿನ ಭತ್ಯೆಯಾಗಿ ₹380 (ಬೆಂಗಳೂರಿನಲ್ಲಿ
₹455) ನಿಗದಿಪಡಿಸಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುವ ಗೃಹರಕ್ಷಕ ಸಿಬ್ಬಂದಿಗೆ ಮಾತ್ರ ರಾಜ್ಯ ಸರ್ಕಾರ 2019ರ ಸೆ. 7ರಂದು ಭತ್ಯೆಯನ್ನು ₹750ಕ್ಕೆ ಏರಿಸಿ ಆದೇಶ ಹೊರಡಿಸಿತ್ತು. ಆದರೆ, ಈ ಏರಿಕೆಯೇ ಈ ಸಿಬ್ಬಂದಿ ಪಾಲಿಗೆ ಮುಳುವಾಗಿರಬೇಕು’ ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಭತ್ಯೆ ಮೊತ್ತ ಎರಡು ಪಟ್ಟು ಹೆಚ್ಚಳಗೊಂಡಿದ್ದರಿಂದ ಇಲಾಖೆಗೆ ಆರ್ಥಿಕವಾಗಿ ಹೊರೆಯಾಗಿದೆ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಕರ್ತವ್ಯ ನಿರ್ವಹಿಸಿರುವವರಿಗೆ ಭತ್ಯೆ ನೀಡಿ, ಹೊಸ ಸುತ್ತೋಲೆಯಂತೆ ಅನೇಕರನ್ನು ಏಕಾಏಕಿ ಕೈಬಿಟ್ಟು, ಮರುಹಂಚಿಕೆಯಂತೆ ನೇಮಿಸಿಕೊಳ್ಳಬೇಕಿದೆ’ ಎಂದೂ ಅವರು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳು, ಗೃಹರಕ್ಷಕ ದಳ ಇಲಾಖೆಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸುನೀಲ್‌ ಅಗರವಾಲ್‌, ‘ಗೃಹರಕ್ಷಕ ಸಿಬ್ಬಂದಿ ಸಂಖ್ಯೆ ಕಡಿಮೆಗೊಳಿಸುತ್ತಿರುವ ಬಗ್ಗೆ ನಮಗೂ ಮಾಹಿತಿ ಇದೆ. ಆಯಾ ಘಟಕಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಖಾಲಿ ಇರುವ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ವಿರುದ್ಧವಾಗಿ ಗೃಹರಕ್ಷಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಅನೇಕ ಮಂದಿ ಬಹಳಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ನೇಮಕಾತಿ ಆಗಿದೆ. ಹೀಗಾಗಿ, ಪೊಲೀಸ್‌ ಮಹಾನಿರ್ದೇಶಕರ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT