ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್ ಕಲಾಪ ಆರಂಭಿಸಬೇಕೆಂದು ಆಗ್ರಹಿಸಿ ನೂರಾರು ವಕೀಲರ ಪ್ರತಿಭಟನೆ

Last Updated 4 ಜೂನ್ 2020, 8:36 IST
ಅಕ್ಷರ ಗಾತ್ರ

ಬೆಂಗಳೂರು: 'ಕೋವಿಡ್-19ರ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಕೂಡಲೇ ತಲಾ ₹1 ಲಕ್ಷ ಬಿಡುಗಡೆ ಮಾಡಲು ಸರ್ಕಾರ ಮುಂದಾಗಬೇಕು' ಎಂದು 'ಕೋ ಆರ್ಡಿನೇಟಂಗ್ ಕಮಿಟಿ ಫಾರ್ ಅಡ್ವೊಕೇಟ್ಸ್ ವೆಲಫೇರ್ ಕೋವಿಡ್-19' ಒತ್ತಾಯಿಸಿದೆ.

ಈ ಸಂಬಂಧ ಗುರುವಾರ ಬೆಳಗ್ಗೆ 12 ಗಂಟೆಗೆ ನೂರಾರು ವಕೀಲರು ಸಿಟಿ ಸಿವಿಲ್ ಕೋರ್ಟ್ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದರು. ಮೂರು ತಿಂಗಳಿನಿಂದ ಲಾಕ್‍‌ಡೌನ್ ಆಗಿದ್ದು ಹಣಕಾಸಿನ ತೊಂದರೆಗೆ ಸಿಲುಕಿದ ಹಿನ್ನೆಲೆಯಲ್ಲಿ ಇಬ್ಬರು ಈಗಾಗಲೇ ವಕೀಲರು ಪ್ರಾಣ ಬಿಟ್ಟಿದ್ದಾರೆ.

'ಜೂನ್ 1ರಿಂದ ಕಾರ್ಯಾಂಗ ಸಂಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ನ್ಯಾಯಾಂಗಕ್ಕೆ ಮಾತ್ರ ನಿರ್ಬಂಧ ವಿಧಿಸಲಾಗಿದೆ. ಆದ್ದರಿಂದ, ಕೂಡಲೇ ಕೋರ್ಟ್‌‌ಗಳಲ್ಲಿ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಕಲಾಪ ನಡೆಸುವುದನ್ನು ಬಿಟ್ಟು ಭೌತಿಕವಾದ ಪೂರ್ಣ ಪ್ರಮಾಣದ ಕಲಾಪ ಆರಂಭಿಸಲು ಮುಖ್ಯ ನ್ಯಾಯಮೂರ್ತಿ‌‌ಗಳು ಮುಂದಾಗಬೇಕು' ಎಂದು ಆಗ್ರಹಿಸಿದರು.

'ವಿಡಿಯೊ ಕಾನ್ಫರೆನ್ಸ್ ಮುಖಾಂತರ ಕಲಾಪ ನಡೆಸಲು ಎಲ್ಲೆಡೆ ಡಿಜಿಟಲ್ ಮೂಲ ಸೌಕರ್ಯ ಇಲ್ಲ. ಬ್ಯಾಟರಿ ಬ್ಯಾಕ್ ಅಪ್, ನೆಟ್ ವರ್ಕ್ ಕೊರತೆ ಇದೆ. ಹೀಗಾಗಿ ವಿಡಿಯೊ ಕಾನ್ಫರೆನ್ಸ್ ವಿಚಾರಣೆ ವೇಳೆ ವಕೀಲರು, ನ್ಯಾಯಾಧೀಶರು ತೊಂದರೆ ಅನುಭವಿಸುತ್ತಿದ್ದಾರೆ. ಅಂತೆಯೇ ಕಕ್ಷಿದಾರರೂ ಅತೀವ ತೊಂದರೆಗೆ ಸಿಲುಕಿದ್ದಾರೆ' ಎಂದು ದೂರಿದರು.

ಪ್ರತಭಟನೆಯಲ್ಲಿ ಬಾಲನ್, ಭಕ್ತವತ್ಸಲ, ಮುನಿಯಪ್ಪ, ದೊರೆರಾಜು, ಭರತ್, ರಘು, ಮನೋರಂಜನಿ, ಸುಮನಾ ಹೆಗಡೆ, ನಿರ್ಮಲಾ, ವೀಣಾ ಸೇರಿದಂತೆ ನೂರಾರು ವಕೀಲರು ಇದ್ದರು.

ನಿರಾಕರಣೆ: ಮುಖ್ಯ ನ್ಯಾಯಮೂರ್ತಿ ಗಳಿಗೆ ಮನವಿ ನೀಡಲು ಭಕ್ತವತ್ಸಲ ಹಾಗೂ ಬಾಲನ್ ಅವರು ಪೊಲೀಸರ ಜೀಪಿನಲ್ಲಿ ತೆರಳಿದ್ದರು. ಆದರೆ ನೀಡಲು ಆಸ್ಪದವಾಗಲಿಲ್ಲ.

'ಮುಂಚಿತವಾಗಿಯೇ ಭೇಟಿಗೆ ಅವಕಾಶ ಪಡೆದಿಲ್ಲ ಎಂಬ ಕಾರಣಕ್ಕೆ ಮನವಿ ಸ್ವೀಕರಿಸಲು ರಿಜಿಸ್ಟ್ರಾರ್ ಜನರಲ್ ಅವರು ಅನುಮತಿ ನೀಡಲಿಲ್ಲ' ಎಂದು ಭಕ್ತವತ್ಸಲ ದೂರಿದರು. 'ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನಿರಂಕುಶಮತಿಯಂತೆ ವರ್ತಿಸುತ್ತಿದ್ದಾರೆ. ಬಡ ವಕೀಲರು ತೀರಾ ಕಷ್ಟದಲ್ಲಿದ್ದು ಅವರಿಗೆ ಸ್ಪಂದಿಸಬೇಕಾದ ರಾಜ್ಯ ವಕೀಲರ ಪರಿಷತ್ ಮತ್ತು ವಕೀಲರ ಸಂಘವೂ ಮೌನ ತಾಳಿದೆ' ಎಂದು ಪ್ರತಿಭಟನಾಕಾರರು ದೂರಿದರು.

ಬೇಡಿಕೆಗಳೇನು?

* ರಾಜ್ಯದಾದ್ಯಂತ ಕೋರ್ಟ್ ಗಳನ್ನು ಕೂಡಲೇ ಪುನರಾಂಭಿಸಬೇಕು.
* ಮುಖ್ಯಮಂತ್ರಿಗಳು ಕೋವಿಡ್-19ರ ಪರಿಹಾರ ಘೋಷಿಸುವ ಮುಖಾಂತರ ₹100 ಕೋಟಿ ಪರಿಹಾರ ಬಿಡುಗಡೆ ಮಾಡಬೇಕು.
* ಇನ್ಮುಂದೆ ನ್ಯಾಯಮಿತ್ರ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕುಗಳ ಮುಖಾಂತರ ಹಣಕಾಸಿನ ನೆರವು ಒದಗಿಸಲು ರಾಜ್ಯ ವಕೀಲರ ಪರಿಷತ್ ಮತ್ತು ಬೆಂಗಳೂರು ವಕೀಲರ ಸಂಘ ತಕ್ಷಣವೇ ಮುಂದಾಗಬೇಕು.
* ರಾಜ್ಯದಲ್ಲಿರುವ 1,35,000 ವಕೀಲರಲ್ಲಿ ಶೇಕಡ 70ರಷ್ಟು ವಕೀಲರು ವೃತ್ತಿಯನ್ನೇ ಅವಲಂಬಿಸಿದ್ದು ಕಳೆದ ಮೂರು ತಿಂಗಳಿನಿಂದ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ.
* ಕೋರ್ಟ್ ಕಲಾಪ ಆರಂಭ ತಡೆಹಿಡಿಯುವ ಮೂಲಕ ಮುಖ್ಯ ನ್ಯಾಯಮೂರ್ತಿ ಗಳು ವಕೀಲರ ಹಿತಾಸಕ್ತಿ ಕಡೆಗಣಿಸಿದ್ದಾರೆ.
* ಇಂದಿನ ಪ್ರತಿಭಟನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು.
* ಇದಕ್ಕಾಗಿ ವಕೀಲರ ಪರಿಷತ್ ಮತ್ತು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಕೀಲರ ಸಂಘಗಳು ಪ್ರತಿಭಟನೆಗೆ ಸಜ್ಜಾಗಬೇಕು ಎಂದು ಕರೆಕೊಡಲಾಗಿದೆ.
* ನಾಳೆಯಿಂದ ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT