ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ನಿಂತಿದೆ, ಉಸಿರು ಎಳೆಯುತ್ತಿದೆ: ತಂದೆಗೆ ವಿಡಿಯೊ ಕಳುಹಿಸಿ ಪ್ರಾಣಬಿಟ್ಟ ಯುವಕ

'ಆಸ್ಪತ್ರೆಯವರು ವೆಂಟಿಲೇಟರ್ ವ್ಯವಸ್ಥೆಯನ್ನು ತೆಗೆದು ಹಾಕಿದ್ದಾರೆ,’ ಎಂದು ಯುವಕ ವಿಡಿಯೊದಲ್ಲಿ ಹೇಳಿದ್ದಾನೆ
Last Updated 29 ಜೂನ್ 2020, 5:18 IST
ಅಕ್ಷರ ಗಾತ್ರ

ಹೈದರಾಬಾದ್‌: 26 ವರ್ಷದ ಕೋವಿಡ್ -19 ಪೀಡಿತ ಯುವಕನೊಬ್ಬ ಸಾವಿಗೂ ಮುನ್ನ ತನ್ನ ತಂದೆಗೆ ಕಳುಹಿಸಿರುವ ವಿಡಿಯೊ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದೆ. ‘ ಆಸ್ಪತ್ರೆಯವರು ವೆಂಟಿಲೇಟರ್ ವ್ಯವಸ್ಥೆಯನ್ನು ತೆಗೆದು ಹಾಕಿದ್ದಾರೆ,’ ಎಂದು ಯುವಕ ವಿಡಿಯೊದಲ್ಲಿ ಹೇಳಿದ್ದಾನೆ.

ಶುಕ್ರವಾರ ರಾತ್ರಿ ಹೈದರಾಬಾದ್‌ನಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಭಾನುವಾರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

‘ಆಸ್ಪತ್ರೆಯವರು ವೆಂಟಿಲೇಟರ್ ಅನ್ನು ತೆಗೆದುಹಾಕಿದ್ದಾರೆ. ಆಮ್ಲಜನಕ ಒದಗಿಸಿ ಎಂದು ಮೂರು ಗಂಟೆಯಿಂದ ಕೇಳಿದರೂ ಅವರು ನೀಡುತ್ತಿಲ್ಲ. ನಿನಗೆ ಕೊಟ್ಟಿರುವುದು ಸಾಕು ಎಂದು ಹೇಳುತ್ತಿದ್ದಾರೆ. ನನ್ನ ಹೃದಯ ಈಗ ನಿಂತುಹೋದಂತೆ ಅನಿಸುತ್ತಿದೆ. ಉಸಿರು ಮಾತ್ರ ಎಳೆಯುತ್ತಿದೆ. ಆದರೆ ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಡ್ಯಾಡಿ. ಬೈ ಡ್ಯಾಡಿ. ಬೈ ಬೈ ಡ್ಯಾಡಿ,’ ಎಂದು ಯುವಕ ತಾನಿರುವ ಆಸ್ಪತ್ರೆಯ ಹಾಸಿಗೆಯಿಂದಲೇ ವಿಡಿಯೊ ಮಾಡಿ ತನ್ನ ತಂದೆಗೆ ಕಳುಹಿಸಿದ್ದಾನೆ. ಕೊನೆಗೆ ಆತ ಪ್ರಾಣ ಬಿಟ್ಟಿದ್ದಾನೆ.

ಹೈದರಾಬಾದ್‌ ಸಮೀಪದ ಯರ್ರಗಡ್ಡ ಎದೆರೋಗ ಆಸ್ಪತ್ರೆಯ ಕೋವಿಡ್‌ ಘಟಕದಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಯುವಕನ ತಂದೆ ತಿಳಿಸಿದ್ದಾರೆ.

ವೆಂಟಿಲೇಟರ್ ವ್ಯವಸ್ಥೆಯನ್ನು ತೆಗೆದು ಹಾಕಲಾಗಿತ್ತು ಎಂಬ ಆರೋಪವನ್ನು ಯರ್ರಗಡ್ಡ ಎದೆರೋಗ ಆಸ್ಪತ್ರೆಯ ಅಧೀಕ್ಷಕ ಮಹಬೂಬ್ ಖಾನ್ ನಿರಾಕರಿಸಿದ್ದಾರೆ. ‘ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಕಠಿಣ ಹಂತ ತಲುಪಿರುವ ರೋಗಿಗಳಿಗೆ ಆಕ್ಸಿಜನ್‌ ನೀಡುತ್ತಿದ್ದರೂ ಅದು ಅವರಿಗೆ ಗೊತ್ತಾಗುವುದಿಲ್ಲ,’ ಎಂದು ಹೇಳಿದ್ದಾರೆ. ಈ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಡಿಯೊ ಕಳುಹಿಸಿದ ಕೆಲವೇ ನಿಮಿಷಗಳಲ್ಲಿ ನನ್ನ ಮಗ ಮೃತಪಟ್ಟಿದ್ದಾನೆ. ಶನಿವಾರ ಆತನ ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು. ಜೂನ್ 24 ರಂದು ತೀವ್ರ ಜ್ವರದಿಂದ ಆತ ಬಳಲುತ್ತಿದ್ದ. ಕೆಲವು ಆಸ್ಪತ್ರೆಗಳಲ್ಲಿ ದಾಖಲಾತಿಗಾಗಿ ಪ್ರಯತ್ನಿಸಿದೆವು. ನಂತರ, ಆತನನ್ನು ಜೂನ್ 24 ರಂದು ಹೈದರಾಬಾದ್‌ನ ಯರ್ರಗಡ್ಡ ಎದೆರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು,’ ಎಂದು ಯುವಕನ ತಂದೆ ಹೇಳಿದ್ದಾರೆ.

ಹೃದಯಸ್ತಂಭನದಿಂದ ಯುವಕ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆ ಅಧೀಕ್ಷಕ ಖಾನ್ ಹೇಳಿದ್ದಾರೆ. "ನಾವು ಕಳೆದ ಕೆಲವು ದಿನಗಳಲ್ಲಿ ಇಂತಹ ಪ್ರಕರಣಗಳನ್ನು ನೋಡುತ್ತಿದ್ದೇವೆ. ಸಾಮಾನ್ಯವಾಗಿ, ವಯಸ್ಸಾದ ಕೋವಿಡ್ -19 ಪೀಡಿತರು ಶ್ವಾಸಕೋಶ ಕಾರ್ಯನಿರ್ವಹಿಸದೇ ಸಾವಿಗೀಡಾಗುತ್ತಾರೆ. ಆದರೆ, ಸೋಂಕು ಪೀಡಿತ 25–40 ವರ್ಷ ವಯಸ್ಸಿನ ಯುಕವರು ಹೃದಯಸ್ತಂಭನದಿಂದ ಸಾಯುತ್ತಿರುವ ಪ್ರಸಂಗಗಳು ಕೆಲದಿನಗಳಿಂದ ಹೆಚ್ಚಾಗುತ್ತಿದೆ. ಅಂಥವರಿಗೆ ನಾವು ಸಾಕಷ್ಟು ಆಮ್ಲಜನಕ ಪೂರೈಸುತ್ತೇವೆ. ಆದರೂ, ಅದು ಅವರಿಗೆ ಸಾಲುತ್ತಿಲ್ಲ ಎಂದೆನಿಸುತ್ತದೆ,’ ಎಂದು ಅವರು ಹೇಳಿದ್ದಾರೆ.

‘ಯುವಕನನ್ನು ಉಳಿಸಲು ವೈದ್ಯರು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಿಸಿಕೊಳ್ಳುವುದಕ್ಕೂ ಮೊದಲೇ ಯುವಕನ ಸ್ಥಿತಿ ಗಂಭೀರವಾಗಿತ್ತು. ವೈದ್ಯರ ಕಡೆಯಿಂದ ಯಾವುದೇ ತಪ್ಪು ಸಂಭವಿಸಿಲ್ಲ,’ ಎಂದು ಖಾನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT