ಸೋಮವಾರ, ಫೆಬ್ರವರಿ 24, 2020
19 °C
ಪ್ರತ್ಯೇಕ ಸಭೆ ನಡೆಸಿದ 10 ಶಾಸಕರು: ಸಂಪುಟಕ್ಕೆ ಯೋಗೇಶ್ವರ್‌ ಸೇರ್ಪಡೆಗೆ ವಿರೋಧ

ಸಚಿವ ಸಂಪುಟ ವಿಸ್ತರಣೆ: ಬೀದಿಗೆ ಬಂದ ಬಿಜೆಪಿ ಬೇಗುದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

BJP

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಇನ್ನು ಎರಡೇ ದಿನ ಬಾಕಿ ಉಳಿದಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳ ಬೇಗುದಿ ಸೋಮವಾರ ಬೀದಿಗೆ ಬಂದಿದೆ. ಸೋತವರಿಗೆ ಸಚಿವ ಸ್ಥಾನ ನೀಡಬಾರದು ಎಂದು ಶಾಸಕರು ಧ್ವನಿ ಎತ್ತಿರುವುದು ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಶಾಸಕರ ಭವನದಲ್ಲಿ ಸಭೆ ನಡೆಸಿದ ಬಿಜೆಪಿಯ 10 ಶಾಸಕರು, ಸಂಪುಟದಲ್ಲಿ ಈಗಾಗಲೇ ಪ್ರಾದೇಶಿಕ ಅಸಮತೋಲನವಿದೆ. ಆದ್ದರಿಂದ ಮುಂಬರುವ ಸಂಪುಟ ವಿಸ್ತರಣೆಯಲ್ಲಿ ‘ಕಲ್ಯಾಣ ಕರ್ನಾಟಕ’ ಪ್ರದೇಶ ಸೇರಿ ಎಲ್ಲ ಭಾಗಗಳಿಗೂ ಸಮಾನ ಪ್ರಾತಿನಿಧ್ಯ ನೀಡಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸುವ ನಿರ್ಣಯ ಕೈಗೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಶಾಸಕರ ಸಭೆ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ’ ಎಂದು ತುಸು ಕಟುವಾಗಿಯೇ ಹೇಳಿದ್ದಾರೆ.

ಅತೃಪ್ತರ ಸಭೆ: ಸಚಿವ ಸ್ಥಾನಕ್ಕಾಗಿ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿರುವ ಶಾಸಕರು ಸಭೆ ನಡೆಸಿದರು. ಸಭೆಯಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಸುರಪುರ ಶಾಸಕ ರಾಜುಗೌಡ, ಬೀಳಗಿಯ ಮುರುಗೇಶ ನಿರಾಣಿ, ಸೇಡಂನ ರಾಜಕುಮಾರ ಪಾಟೀಲ ತೆಲ್ಕೂರ, ಯಲಬುರ್ಗಾದ ಹಾಲಪ್ಪ ಆಚಾರ್‌, ರಾಯಚೂರಿನ ಡಾ.ಶಿವರಾಜ್‌ ಪಾಟೀಲ, ಗಂಗಾವತಿಯ ಪರಣ್ಣ ಮುನವಳ್ಳಿ, ಕಲಬುರ್ಗಿ ದಕ್ಷಿಣದ ದತ್ತಾತ್ರೇಯ ಪಾಟೀಲ ರೇವೂರ, ಕಲಬುರ್ಗಿ ಗ್ರಾಮಾಂತರದ ಬಸವರಾಜ ಮತ್ತಿಮೂಡ, ಸವದತ್ತಿಯ ಆನಂದ ಮಾಮನಿ ಭಾಗಿಯಾಗಿದ್ದರು. ಇವರ ಪೈಕಿ ಬಹುತೇಕ ಶಾಸಕರು ಮುಖ್ಯಮಂತ್ರಿ
ಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರೇ ಆಗಿರುವುದು ವಿಶೇಷ.

ಈ ಸಭೆ ಬಳಿಕ ಮಾತನಾಡಿದ ರಾಜುಗೌಡ, ‘ಕಲ್ಯಾಣ ಕರ್ನಾಟಕ ಪ್ರದೇಶ ಹಿಂದುಳಿದಿದೆ. ಸಂಪುಟ ವಿಸ್ತರಣೆಯಲ್ಲಿ ಈ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಹಿಂದೆ ಕಾಂಗ್ರೆಸ್‌ ಸರ್ಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿತ್ತು. ರಾಜ್ಯದ ಎಲ್ಲ ಭಾಗಗಳಿಗೂ ಸಮಾನ ಪ್ರಾತಿನಿಧ್ಯ ನೀಡಬೇಕಾಗುತ್ತದೆ. ಇಲ್ಲವಾದರೆ ಅಸಮತೋಲನಕ್ಕೆ ಕಾರಣವಾಗುತ್ತದೆ’ ಎಂದು ಹೇಳಿದರು.

‘ಲಕ್ಷ್ಮಣ ಸವದಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಬಗ್ಗೆ ಮಾತನಾಡುವುದಿಲ್ಲ. ಈಗ ಮತ್ತೆ ಸೋತವರಿಗೆ (ಯೋಗೇಶ್ವರ್‌) ಕೊಟ್ಟರೆ ಸಹಿಸಲು ಸಾಧ್ಯವಿಲ್ಲ. ನಾವು ಕಷ್ಟಪಟ್ಟು ಗೆದ್ದಿರುವುದಕ್ಕೆ ಬೆಲೆ ಇಲ್ಲವೇ’ ಎಂದು ಪ್ರಶ್ನಿಸಿದರು.

‘ನಮ್ಮ ಭಾವನೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಸಭೆಯಲ್ಲಿ ಶಾಸಕರು ತಮ್ಮ  ಭಾವನೆ ವ್ಯಕ್ತಪಡಿಸಿದ್ದಾರೆ. ಇದು ಬಂಡಾಯವಲ್ಲ. ದಾವಣಗೆರೆ ಜಿಲ್ಲೆಗೂ ಆದ್ಯತೆ ನೀಡಬೇಕು. ನನಗೇ ಕೊಡಬೇಕು ಅಂತಲ್ಲ ಗೆದ್ದವರಿಗೆ ಮಾತ್ರ ನೀಡಬೇಕು’ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಬಿಎಸ್‌ವೈ ಭರವಸೆ: ಮೆತ್ತಗಾದ ಸೋತವರು

‘ಮುಂದಿನ ಜೂನ್‌ನಲ್ಲಿ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ ಸಂಪುಟಕ್ಕೆ ಸೇರಿಸಿಕೊಳ್ಳುತ್ತೇನೆ’ ಎಂಬುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದು, ಇದರಿಂದ ಎಂ.ಟಿ.ಬಿ.ನಾಗರಾಜ್ ಮತ್ತು ಎಚ್‌.ವಿಶ್ವನಾಥ್‌ ಅವರ ಕೋಪ ತಣಿದಿದೆ. 

ಸೋಮವಾರ ಬೆಳಿಗ್ಗೆ ‘ಧವಳಗಿರಿ’ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ ಇಬ್ಬರೂ ಮಾತುಕತೆ ನಡೆಸಿದರು. ಈ ಬಗ್ಗೆ ಹೊಸಕೋಟೆಯಲ್ಲಿ ಮಾತನಾಡಿದ ಎಂ.ಟಿ.ಬಿ.ನಾಗರಾಜ್‌, ‘ಜೂನ್ ತಿಂಗಳಿನಲ್ಲಿ ವಿಧಾನ ಪರಿಷತ್‌ನ ಏಳು ಸ್ಥಾನಗಳು ತೆರವಾಗಲಿವೆ. ಆಗ ಸಚಿವ ಸಂಪುಟಕ್ಕೆ ಸೇರಿಸಿ
ಕೊಳ್ಳುವ ವಾಗ್ದಾನವನ್ನು ಯಡಿಯೂರಪ್ಪ ನೀಡಿದ್ದಾರೆ’ ಎಂದರು. 

‘ಯಡಿಯೂರಪ್ಪ ಕೊಟ್ಟ ಮಾತಿಗೆ ಎಂದೂ ತಪ್ಪಿಲ್ಲ. ಅವರ ಮೇಲೆ ನಂಬಿಕೆ ಇದೆ. ಈಗಾಗಲೇ ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಮಂಜೂರು ಮಾಡಿದ್ದಾರೆ’ ಎಂದು ಹೇಳಿದರು.

ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಅವರು ಎಚ್‌.ವಿಶ್ವನಾಥ್‌ ಜತೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರು. ‘ಈ ಹಿಂದೆ ಮಾತುಕೊಟ್ಟಂತೆ ಸಚಿವ ಸ್ಥಾನ ನೀಡಬೇಕು’ ಎಂದು ನಾರಾಯಣಗೌಡ ಮನವಿ ಮಾಡಿದರು.

ಶಾಸಕ ಕೆ.ಗೋಪಾಲಯ್ಯ ಹಾಗೂ ಮಾಜಿ ಶಾಸಕ ಆರ್. ಶಂಕರ್ ಅವರೂ ಯಡಿಯೂರಪ್ಪ ಅವರನ್ನು ಭೇಟಿ
ಮಾಡಿ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಕಳಪೆ ಸಾಧಕರ ತೆಗೆದು ಹಾಕಿ: ‘ಸಚಿವ ಸಂಪುಟದಲ್ಲಿ ಕಳಪೆ ಸಾಧನೆ ಮಾಡಿರುವ ಸಚಿವರನ್ನು ತೆಗೆದು ಹಾಕಿ ಹೊಸಬರಿಗೆ ಅವಕಾಶ ನೀಡಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.

***

ಕಲ್ಯಾಣ ಕರ್ನಾಟಕದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ಪ್ರದೇಶ ಶಾಸಕರಿಗೂ ನ್ಯಾಯ ನೀಡಬೇಕು ಎಂಬುದು ನಮ್ಮ ಒತ್ತಾಯ. ಆದ್ದರಿಂದ ಸಭೆ ನಡೆಸಿದ್ದೇವೆ

– ಎಂ.ಪಿ.ರೇಣುಕಾಚಾರ್ಯ, ಶಾಸಕ

ಸೋತವರಿಗೆ ಸಚಿವ ಸ್ಥಾನ ನೀಡುವುದಾದರೆ, ನಾವು ಏಕೆ ಶಾಸಕರಾಗಿರಬೇಕು? ಸಂಪುಟ ವಿಸ್ತರಣೆ ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗಬಾರದು

– ರಾಜುಗೌಡ, ಶಾಸಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು