ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ, ಅನರ್ಹತೆ ತೀರ್ಪು ಇಂದು; ಅತೃಪ್ತ ಶಾಸಕರು, ಸರ್ಕಾರದ ಭವಿಷ್ಯ ನಿರ್ಧಾರ

ಸುದೀರ್ಘ ವಿಚಾರಣೆ ಪೂರ್ಣಗೊಳಿಸಿದ ‘ಸುಪ್ರೀಂ’
Last Updated 16 ಜುಲೈ 2019, 19:33 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದ ಮೈತ್ರಿ ಸರ್ಕಾರದ ಅಳಿವು–ಉಳಿವಿನ ಪ್ರಶ್ನೆಯನ್ನು ಹುಟ್ಟು ಹಾಕಿರುವ ಅತೃಪ್ತ ಶಾಸಕರ ರಾಜೀನಾಮೆ ಮತ್ತು ಅನರ್ಹತೆಗೆ ಸಂಬಂಧಿಸಿದ ಮಹತ್ವದ ಪ್ರಕರಣದ ವಿಚಾರಣೆಯನ್ನು ಮಂಗಳವಾರ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್, ತೀರ್ಪನ್ನು ಕಾದಿರಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠವು ಬುಧವಾರ ಬೆಳಿಗ್ಗೆ 10.30ಕ್ಕೆ ಪ್ರಕಟಿಸಲಿರುವ ತೀರ್ಪು ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ.

ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಸದಸ್ಯತ್ವ ಕಳೆದುಕೊಳ್ಳುವ ಆತಂಕದಲ್ಲಿರುವ ಅತೃಪ್ತರ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್‌ಗೆ ಸೂಚನೆ ದೊರೆಯಲಿದೆಯೇ ಅಥವಾ ಅಲ್ಪ ಮತದತ್ತ ವಾಲಿರುವ ಸಮ್ಮಿಶ್ರ ಸರ್ಕಾರದ ಅಸ್ತಿತ್ವವನ್ನೇ ಬುಡಮೇಲು ಮಾಡಲಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ಈ ಮೂಲಕ ದೇಶದಾದ್ಯಂತ ರಾಜಕೀಯವಾಗಿ ಮೂಡಿರುವ ತೀವ್ರ ಕುತೂಹಲಕ್ಕೂ ತೆರೆ ಬೀಳಲಿದೆ.

15 ಅತೃಪ್ತರಿಂದ ಅರ್ಜಿ: ಜುಲೈ 10ರಂದು ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಬಂದಿರುವ ಈ ಪ್ರಹಸನಕ್ಕೆ ಹಲವಾರು ತಿರುವುಗಳೂ ದೊರೆತಿವೆ. ಸ್ಪೀಕರ್‌ ಕಾರ್ಯವ್ಯಾಪ್ತಿಯ ಕುರಿತ ಪ್ರಶ್ನೆಗಳು ಉದ್ಭವವಾಗಿವೆ.

ತಮ್ಮ ರಾಜೀನಾಮೆ ಅಂಗೀಕರಿಸುವಂತೆ ಸ್ಪೀಕರ್‌ಗೆ ನಿರ್ದೇಶನ ನೀಡಬೇಕು ಎಂದು ಕೋರಿ ನ್ಯಾಯಾಲಯದ ಮೊರೆ ಹೋದ 10 ಬಂಡಾಯ ಶಾಸಕರೊಂದಿಗೆ ಮತ್ತೆ ಐದು ಶಾಸಕರು ಕೈಜೋಡಿಸಿರುವುದು ಸಮ್ಮಿಶ್ರ ಸರ್ಕಾರದ ಆತಂಕವನ್ನು ಹೆಚ್ಚಿಸಿದೆ.

ಅತೃಪ್ತ ಶಾಸಕರ ವಿಚಾರಣೆ ನಡೆಸಿ ನಿರ್ಧಾರ ಪ್ರಕಟಿಸುವಂತೆ ಸ್ಪೀಕರ್‌ಗೆ ಗಡುವು ವಿಧಿಸಿ ಮೊದಲು ಆದೇಶಿಸಿದ್ದ ನ್ಯಾಯಪೀಠ, ‘ಪ್ರಕರಣದಲ್ಲಿ ಸಾಂವಿಧಾನಿಕ ಅಂಶಗಳು ಅಡಕವಾಗಿರುವುದರಿಂದ ಸುದೀರ್ಘ ವಿಚಾರಣೆ ಅಗತ್ಯ’ ಎಂಬ ಅಭಿಪ್ರಾಯದೊಂದಿಗೆ ‘ಯಥಾಸ್ಥಿತಿ ಕಾಪಾಡಿಕೊಳ್ಳಬೇಕು’ ಎಂದು ಶುಕ್ರವಾರ ಆದೇಶ ಪ್ರಕಟಿಸಿತ್ತು.

ಸಂದಿಗ್ಧದತ್ತ ಸ್ಪೀಕರ್‌ ನಡೆ: ಅತೃಪ್ತರ ರಾಜೀನಾಮೆ ಕುರಿತು ನಿರ್ಧಾರ ಕೈಗೊಳ್ಳುವಂತೆ ಸೂಚಿಸಿ ನೀಡಲಾದ ಆದೇಶ ಪಾಲಿಸದಿರುವ ನಡೆಯನ್ನು ವಿಚಾರಣೆಯ ವೇಳೆ ನ್ಯಾಯಪೀಠ ಪ್ರಶ್ನಿಸಿದ್ದರಿಂದ ಸ್ಪೀಕರ್‌ ಅವರನ್ನು ಸಂದಿಗ್ಧ ಸ್ಥಿತಿಗೆ ಸಿಲುಕಿಸಿದಂತಾಗಿದೆ.

ಆದೇಶ ಪಾಲಿಸದೆ ನ್ಯಾಯಾಲಯದ ವ್ಯಾಪ್ತಿಯನ್ನು ಸ್ಪೀಕರ್‌ ಪ್ರಶ್ನಿಸಿರುವಂಥ ಬೆಳವಣಿಗೆಯು ಅಸಹ್ಯಕರ ಎಂದು ನ್ಯಾಯಪೀಠ ಹೇಳಿತು.

‘ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸುವ ಅಧಿಕಾರ ನ್ಯಾಯಪೀಠಕ್ಕೆ ಇದೆ ಎಂದಾದಲ್ಲಿ, ರಾಜೀನಾಮೆ ಸ್ವೀಕರಿಸಿ ಎಂದು ನಿರ್ದೇಶನ ನೀಡುವ ಅಧಿಕಾರ ಇಲ್ಲವೇ’ ಎಂದು ಸ್ಪೀಕರ್‌ ಪರ ವಕೀಲ ಸಿಂಘ್ವಿ ಅವರನ್ನು ಪೀಠ ಪ್ರಶ್ನಿಸಿತು.

ಯಥಾಸ್ಥಿತಿಯ ಆದೇಶವನ್ನು ನ್ಯಾಯಾಲಯ ಮಾರ್ಪಾಡು ಮಾಡಿದಲ್ಲಿ, ಬುಧವಾರದೊಳಗೆ ಅತೃಪ್ತ ಶಾಸಕರ ಅನರ್ಹತೆ ಮತ್ತು ರಾಜೀನಾಮೆ ಕುರಿತ ಪ್ರಕರಣವನ್ನು ಇತ್ಯರ್ಥಪಡಿಸಲಾಗುವುದು ಎಂಬ ಸ್ಪೀಕರ್‌ ಪರ ವಕೀಲರ ಬೇಡಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದ ಪೀಠ ತೀರ್ಪನ್ನು ಕಾದಿರಿಸಿತು.

ಸುದೀರ್ಘ ವಿಚಾರಣೆ: ಮಂಗಳವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 3.20ರವರೆಗೆ ನಡೆದ ವಿಚಾರಣೆಯ ವೇಳೆ ಶಾಸಕರ ಪರ ಮುಕುಲ್‌ ರೋಹಟ್ಗಿ, ಸ್ಪೀಕರ್‌ ಪರ ಅಭಿಷೇಕ್‌ ಮನು ಸಿಂಘ್ವಿ ಮತ್ತು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪರ ರಾಜೀವ್‌ ಧವನ್‌ ವಾದ ಮಂಡಿಸಿದರು.

ಅನರ್ಹತೆಯ ತೂಗುಗತ್ತಿಯ ಭಯದಿಂದಲಾದರೂ ಶಾಸಕರು ವಿಧಾನಸಭೆಗೆ ಹಾಜರಾಗಿ ಸರ್ಕಾರಕ್ಕೆ ಬೆಂಬಲ ಸೂಚಿಸಲಿ ಎಂಬ ದುರುದ್ದೇಶದಿಂದಲೇ ಸ್ಪೀಕರ್‌ ರಾಜೀನಾಮೆ ಸ್ವೀಕರಿಸಿಲ್ಲ ಎಂದು ಅರ್ಜಿದಾರರ ಪರ ವಕೀಲ ರೋಹಟ್ಗಿ ಬಲವಾಗಿ ಪ್ರತಿಪಾದಿಸಿದರು.

ಸ್ಪೀಕರ್ ಅಧಿಕಾರ ವ್ಯಾಪ್ತಿಯು ಸುಪ್ರೀಂ ಕೋರ್ಟ್ ಕಾರ್ಯವ್ಯಾಪ್ತಿಗೆ ಒಳಪಡುತ್ತದೆ. ಅರ್ಜಿದಾರರ ಪೈಕಿ ಇಬ್ಬರ ವಿರುದ್ಧ ಮಾತ್ರ ಅನರ್ಹತೆಯ ದೂರು ಬಾಕಿ ಇದ್ದರೂ ಎಲ್ಲರ ಅರ್ಜಿ ಇತ್ಯರ್ಥಪಡಿಸದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ವಿವರಿಸಿದರು.

ಅರ್ಜಿದಾರರ ಪೈಕಿ ಮಹೇಶ್ ಕುಮಠಳ್ಳಿ, ರಮೇಶ್ ಜಾರಕಿಹೊಳಿ ವಿರುದ್ಧ ಫೆಬ್ರುವರಿಯಲ್ಲೇ ಅನರ್ಹತೆಯ ದೂರು ದಾಖಲಾಗಿದೆ. ಇವರೊಂದಿಗೆ ಉಮೇಶ್ ಜಾಧವ್ ವಿರುದ್ಧವೂ ಅನರ್ಹತೆ ದೂರು ನೀಡಲಾಗಿತ್ತು. ಆದರೆ, ಅವರ ರಾಜೀನಾಮೆ ಸ್ವೀಕೃತಗೊಂಡಿದೆ ಎಂದು ತಿಳಿಸಿದರು.

ರಾಜೀನಾಮೆಗೆ ಮೊದಲೇ ಅನರ್ಹತೆಯ ಅರ್ಜಿ ಸಲ್ಲಿಕೆ ಆಗಿದ್ದು, ರೋಹಟ್ಗಿ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಪೀಕರ್‌ ಪರ ವಕೀಲ ಸಿಂಘ್ವಿ ವಾದ ಮಂಡಿಸಿದರು.

ಅನರ್ಹತೆಯ ಅಪಾಯದಿಂದ ಪಾರಾಗುವ ನಿಟ್ಟಿನಲ್ಲಿ ರಾಜೀನಾಮೆ ಸಲ್ಲಿಸಲಾಗಿದೆ. ಸ್ಪೀಕರ್ ನಿರ್ಧಾರ ಕೈಗೊಳ್ಳುವ ಮೊದಲು ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸುವಂತಿಲ್ಲ ಎಂದು ಸಿಂಘ್ವಿ ವಿವರಿಸಿದರು.

ಇದು ಕೇವಲ ರಾಜೀನಾಮೆ ಪ್ರಸಂಗವಲ್ಲ. ರಾಜೀನಾಮೆ ನೀಡಿದವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿದೆ. ಇಲ್ಲಿ ರಾಜಕಾರಣ ಅಡಕವಾಗಿರುವುದು ಸ್ಪಷ್ಟವಾಗಿದೆ ಎಂದು ರಾಜೀವ್‌ ಧವನ್‌ ಹೇಳಿದರು. ಇದು ಸ್ಪಷ್ಟವಾಗಿ ಈಗಿನ ಮುಖ್ಯಮಂತ್ರಿ ಹಾಗೂ ಮುಂದೆ ಮುಖ್ಯಮಂತ್ರಿ ಆಗಲು ಬಯಸುತ್ತಿರುವವರ ನಡುವಿನ ರಾಜಕೀಯ ಅಖಾಡ ಆಗಿದೆ ಎಂದು ತಿಳಿಸಿದರು.

**

ಮುಂದಿನ ನಡೆ: ಇಂದು ನಿರ್ಧಾರ

ಬೆಂಗಳೂರು: ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಆಧರಿಸಿ ಮುಂದಿನ ಹೆಜ್ಜೆ ಇಡಲು ಆಡಳಿತಾರೂಢ ಮೈತ್ರಿಕೂಟ ಹಾಗೂ ವಿರೋಧ ಪಕ್ಷ ಬಿಜೆಪಿಯ ನಾಯಕರು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೇ 18ರಂದು ವಿಶ್ವಾಸಮತ ಯಾಚಿಸಲಿದ್ದಾರೆ. ಶಾಸಕರ ರಾಜೀನಾಮೆ ಅಂಗೀಕಾರದ ವಿಷಯ ವಿಧಾನಸಭಾಧ್ಯಕ್ಷರ ಅಂಗಳದಲ್ಲಿದೆ. ರಾಜೀನಾಮೆ ಹಣೆಬರಹವನ್ನು ಸುಪ್ರೀಂಕೋರ್ಟ್‌ ಬರೆಯಲಿದೆಯೇ ಅಥವಾ ಸಭಾಧ್ಯಕ್ಷರ ವಿವೇಚನೆಗೆ ಬಿಡಲಿದೆಯೇ ಎಂಬ ಜಿಜ್ಞಾಸೆ ಮೂರೂ ರಾಜಕೀಯ ಪಕ್ಷಗಳ ನಾಯಕರಲ್ಲಿ ಮೂಡಿದೆ.

‘ರಾಜೀನಾಮೆ ಅಂಗೀಕರಿಸಿ ಅಥವಾ ವಿಶ್ವಾಸ ಮತಯಾಚನೆಗೆ ಮುನ್ನವೇ ರಾಜೀನಾಮೆ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಿ ಎಂದು ಸುಪ್ರೀಂಕೋರ್ಟ್‌ ಸಭಾಧ್ಯಕ್ಷರಿಗೆ ಸೂಚಿಸಲಿದ್ದು, ಇದು ತಮಗೆ ವರವಾಗಲಿದೆ. ಅಂಗೀಕರಿಸಿದರೂ ಅಥವಾ ಅನರ್ಹಗೊಳಿಸಿದರೂ ಸರ್ಕಾರ ಪತನ ನಿಶ್ಚಿತ. ತಮ್ಮ ಸರ್ಕಾರ ರಚನೆಗೆ ಇದು ದಾರಿ ಮಾಡಿಕೊಡಲಿದೆ’ ಎಂಬ ನಿರೀಕ್ಷೆ ಬಿಜೆಪಿ ನಾಯಕರಲ್ಲಿದೆ. ‘ರಾಜೀನಾಮೆ ಅಂಗೀಕಾರ–ತಿರಸ್ಕಾರದ ತೀರ್ಮಾನವನ್ನು ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟು, ರಾಜೀನಾಮೆ ನೀಡಿದವರಿಗೂ ವಿಪ್‌ ಅನ್ವಯವಾಗಲಿದೆ ಎಂದು ಕೋರ್ಟ್ ಹೇಳಿದರೆ, ತಮಗೆ ಅನುಕೂಲ. ಅನರ್ಹತೆ ಅಸ್ತ್ರ ಬಳಸಿ ಅತೃಪ್ತರನ್ನು ಸೆಳೆಯಲು ಇದು ನೆರವಾಗಲಿದೆ’ ಎಂಬ ವಿಶ್ವಾಸ ಕಾಂಗ್ರೆಸ್‌–ಜೆಡಿಎಸ್ ಪ್ರಮುಖರಲ್ಲಿದೆ.

‘ವಿಶ್ವಾಸ–ಅವಿಶ್ವಾಸ’ಕ್ಕೆ ವಿಪ್‌

ಆಡಳಿತಾರೂಢ ಕಾಂಗ್ರೆಸ್‌–ಜೆಡಿಎಸ್‌ ಹಾಗೂ ಬಿಜೆಪಿ ಸಚೇತಕರು ತಮ್ಮ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.

‘ಸದನಕ್ಕೆ ಹಾಜರಾಗಿ ಸರ್ಕಾರ ಪರ ಕಡ್ಡಾಯವಾಗಿ ಮತ ಚಲಾಯಿಸದೇ ಇದ್ದರೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸಲು ಕ್ರಮ ಜರುಗಿಸಲಾಗುವುದು’ ಎಂದು ಆಡಳಿತಾರೂಢ ಮೈತ್ರಿ ಪಕ್ಷ ವಿಪ್‌ನಲ್ಲಿ ಎಚ್ಚರಿಸಿದೆ.

‘ವಿಶ್ವಾಸದ ಮತ ವಿರುದ್ಧವಾಗಿ ಮತ ಚಲಾಯಿಸಲು ಸದನದಲ್ಲಿ ಕಡ್ಡಾಯವಾಗಿ ಹಾಜರಿರದೇ ಇದ್ದರೆ ಕ್ರಮ ಜರುಗಿಸಲಾಗುವುದು’ ಎಂದು ಬಿಜೆಪಿ ತಾಕೀತು ಮಾಡಿದೆ.

‘ಸುಪ್ರೀಂಗಿಂತ ದೊಡ್ಡವನಲ್ಲ’

ಕೋಲಾರ: ‘ಅತೃಪ್ತ ಶಾಸಕರ ಅರ್ಜಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ಅಭಿಪ್ರಾಯವನ್ನು ವ್ಯಾಖ್ಯಾನಿಸುವುದಿಲ್ಲ. ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ತೀರ್ಪು ಬಂದ ನಂತರ ಪ್ರತಿಕ್ರಿಯಿಸುತ್ತೇನೆ’ ಎಂದು ವಿಧಾನ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಯಾರಿಗೂ ಸವಾಲು ಹಾಕಿಲ್ಲ. ಸುಪ್ರೀಂ ಕೋರ್ಟ್‌ಗಿಂತ ನಾನು ದೊಡ್ಡವನಲ್ಲ’ ಎಂದರು.

**

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT