ಭಾನುವಾರ, ಸೆಪ್ಟೆಂಬರ್ 20, 2020
21 °C
90ರ ದಶಕದ ಭೀಕರ ಘಟನೆ ನೆನಪಿಸಿಕೊಂಡ ಸಂತ್ರಸ್ತರು

ತವರಿಗೆ ಮರಳಲು ಪಂಡಿತರ ತವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): 1990ರ ದಶಕದಲ್ಲಿ ಕಣಿವೆಯನ್ನು ತೊರೆದಿದ್ದ ಕಾಶ್ಮೀರಿ ಪಂಡಿತರು ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇನ್ನು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಸಾಕಷ್ಟು ಘನತೆಯಿಂದ ತಾವು ತಮ್ಮ ತಾಯ್ನೆಲಕ್ಕೆ ವಾಪಸಾಗಲು ದಾರಿ ಮಾಡಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಈ ನಿರ್ಧಾರವು ದೇಶದ ಪ್ರಾದೇಶಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಏಕತೆಯನ್ನು ಗಟ್ಟಿಗೊಳಿಸಿದೆ ಎಂದು ಜಾಗತಿಕ ಕಾಶ್ಮೀರಿ ಪಂಡಿತರ ವೇದಿಕೆ (ಜಿಕೆಪಿಡಿ) ಹೇಳಿದೆ.

‘ಆಗಸ್ಟ್ 5, 2019 ಇತಿಹಾಸದಲ್ಲಿ ದಾಖಲಾಗಲಿದೆ. ಶ್ಯಾಮ್‌ಪ್ರಸಾದ್ ಮುಖರ್ಜಿ, ದೀನ ದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ ಮೊದಲಾದ ನಾಯಕರು ಇಡೀ ದೇಶದ ಏಕತೆಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ್ದು ಕೇಂದ್ರ ಮಂಡಿಸಿದ ಮಸೂದೆಯಲ್ಲಿ ಪ್ರತಿಫಲಿತವಾಗಿದೆ’ ಎಂದು ಪ್ರಕಟಣೆ ತಿಳಿಸಿದೆ. 

ಗಡಿಪಾರಿಗೆ ಒಳಗಾಗಿದ್ದ ಸಮುದಾಯವೊಂದು ಇದೇ ಮೊದಲ ಬಾರಿಗೆ ನಿರಾಳ ಭಾವ ವ್ಯಕ್ತಪಡಿಸಿದೆ. ತನ್ನ ಪರಂಪರೆಯ ಅಸ್ಮಿತೆ, ಸಂಸ್ಕೃತಿ ಮೊದಲಾದ ವಿಚಾರದಲ್ಲಿ ಹೊಸ ಕೇಂದ್ರಾಡಳಿತ ಪ್ರದೇಶದಲ್ಲಿ ರಕ್ಷಣೆ ದೊರೆಯಲಿದೆ ಎಂಬ ವಿಶ್ವಾಸದಲ್ಲಿದೆ. 

‘370ನೇ ವಿಧಿ ಅಸಿಂಧುಗೊಳಿಸುವ ಮೂಲಕ ಭಾರತದ ಇತರೆ ಪ್ರದೇಶಗಳ ಜೊತೆ ಜಮ್ಮು ಮತ್ತು ಕಾಶ್ಮೀರವನ್ನು ಹತ್ತಿರ ತರಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಲಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ವಿಚಾರ ವೇದಿಕೆ ಅಧ್ಯಕ್ಷ ಮನೋನ್ ಭಾನ್ ಹೇಳಿದ್ದಾರೆ. 

ಕಣಿವೆಗೆ ತಾವು ಮರಳಲು ಇರುವ ಮಾರ್ಗಗಳನ್ನು ಕೇಂದ್ರ ಸರ್ಕಾರ ಸದ್ಯದಲ್ಲೇ ರೂಪಿಸಲಿದೆ ಎಂದು ಸಮುದಾಯ ವಿಶ್ವಾಸ ವ್ಯಕ್ತಪಡಿಸಿದೆ. ಬಲವಂತದ ಭೀತಿ ಹುಟ್ಟಿಸಿ ನಿರ್ಗಮಿಸಿದ್ದ ಪಂಡಿತರು ಕಣಿವೆಗೆ ಹಿಂತಿರುಗಿದ ಬಳಿಕ ಎಲ್ಲರೂ ಒಟ್ಟಾಗಿ ಬದುಕು ಸಾಗಿಸಲು ಪ್ರತ್ಯೇಕ ವಸತಿ ನಿರ್ಮಾಣ ಅಗತ್ಯವಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

‘ಕಣಿವೆ ರಾಜ್ಯದಲ್ಲಿ ಭಾರತೀಯ ಸಂವಿಧಾನದ ಕಾನೂನುಗಳು ಮುಕ್ತವಾಗಿ ಚಲಾವಣೆಯಲ್ಲಿ ಇಲ್ಲದಿರುವುದೇ ಕಾಶ್ಮೀರದ ಸಮಸ್ಯೆಯ ಮೂಲವಾಗಿತ್ತು. ಈಗ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಸಿಕ್ಕಿದ್ದು, ಆ ಸಮಸ್ಯೆ ಬಗೆಹರಿಯಲಿದೆ. ಲಡಾಕ್‌ನ ಅಭಿವೃದ್ಧಿಯೂ ಆರಂಭವಾಗಲಿದೆ’ ಎಂದು ರೂಟ್ಸ್ ಆಫ್ ಕಾಶ್ಮೀರ್‌ನ ಅಮಿತ್ ರೈನಾ ಹೇಳಿದ್ದಾರೆ. 

‘90ರ ದಶಕದಲ್ಲಿ ನೆಲೆ ಕಳೆದುಕೊಂಡು ಗಡಿಪಾರು ಮಾಡಲಾದ ಕುಟುಂಬಗಳಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಕೇಂದ್ರ ಮುಂದಾಗಬೇಕು. ಗುಜರಾತ್‌ನಲ್ಲಿ ಕೇವಲ 4 ವರ್ಷಗಳಲ್ಲಿ ಸಾಧ್ಯವಾಗಿರುವುದು ಕಾಶ್ಮೀರದಲ್ಲಿ ಏಕೆ ಸಾಧ್ಯವಾಗುವುದಿಲ್ಲ. ನ್ಯಾಯ ಎಂಬುದು ಶ್ರೇಷ್ಠವಾದುದು. ಹೀಗಾಗಿ ತಕ್ಷಣವೇ ಪ್ರಕ್ರಿಯೆ ಶುರು ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಕಣಿವೆ ತೊರೆಯುವಂತೆ ಧ್ವನಿವರ್ಧಕಗಳಲ್ಲಿ ಎಚ್ಚರಿಕೆ ಮೊಳಗಿದ ತಕ್ಷಣ ತಮ್ಮವರನ್ನು ಬಿಟ್ಟು ಪಂಡಿತರು ಓಡಬೇಕಾಯಿತು. ಆ ಭೀಕರ ಘಟನೆ ಹಾಗೂ ಭೀಕರ ರಾತ್ರಿಗಳನ್ನು ಮರೆಯಲು ಸಾಧ್ಯವೇ ಇಲ್ಲ. ಇದೀಗ ನಾವು ನಮ್ಮ ನಾಡಿಗೆ ಹೊರಡಲು ಸಾಧ್ಯವಾಗುತ್ತಿದೆ. ಎಂದು ದೆಹಲಿಯ ಕಾಶ್ಮೀರಿ ಸಮಿತಿಯ ಸಮೀರ್ ಚಾಂಗರೂ ಹೇಳಿದ್ದಾರೆ. 

***

ಭಾರತ ಒಕ್ಕೂಟದೊಂದಿಗೆ ಕಾಶ್ಮೀರ ಸಂಪೂರ್ಣವಾಗಿ ವಿಲೀನವಾಗುವ ಬಗ್ಗೆ ಇದ್ದ ಅನುಮಾನಗಳು ದೂರವಾಗಿವೆ

ಅಮಿತ್ ರೈನಾ, ರೂಟ್ಸ್ ಆಫ್ ಕಾಶ್ಮೀರ್

***

ಆಗಸ್ಟ್ 5 ಕಾಶ್ಮೀರದ ಸ್ವಾತಂತ್ರ್ಯ ದಿನ. ವಂಶಾಡಳಿತ, ಅನ್ಯಾಯದಿಂದ ವೈವಿಧ್ಯಮಯ ರಾಜ್ಯದ ಎಲ್ಲರಿಗೂ ಸ್ವಾತಂತ್ರ್ಯ ಸಿಕ್ಕಿದೆ

ಕೆ.ಎನ್. ಪಂಡಿತ, ಪಂಡಿತ ಸಮುದಾಯದ ಮುಖಂಡ

***

ಮುಖ್ಯಾಂಶಗಳು

ಗಡಿಪಾರಿಗೆ ಒಳಗಾಗಿದ್ದ ಸಮುದಾಯದಲ್ಲಿ ನಿರಾಳ ಭಾವ

ನ್ಯಾಯ ಕೊಡಿಸಲು ಕೇಂದ್ರ ಮುಂದಾಗುವಂತೆ ಆಗ್ರಹ

ಪಂಡಿತರಿಗೆ ಪ್ರತ್ಯೇಕ ವಸತಿ ಪ್ರದೇಶ ನಿರ್ಮಾಣಕ್ಕೆ ಒತ್ತಾಯ

***

7.5 ಲಕ್ಷ: 1990ರಲ್ಲಿ ಕಣಿವೆಯಿಂದ ಒತ್ತಾಯಪೂರ್ವಕವಾಗಿ ಗಡಿಪಾರು ಮಾಡಲಾದ ಕಾಶ್ಮೀರಿ ಪಂಡಿತರ ಸಂಖ್ಯೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು