ಸೋಮವಾರ, ಏಪ್ರಿಲ್ 6, 2020
19 °C

ಪಾಕ್‌ ಪರ ಘೋಷಣೆ: ವಿದ್ಯಾರ್ಥಿಗಳ ಬಂಧನ, ದೇಶದ್ರೋಹ ಪ್ರಕರಣ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪಾಕಿಸ್ತಾನದ ಪರ ಘೋಷಣೆ ಕೂಗಿದ ನಗರದ ಗೋಕುಲ ರಸ್ತೆಯ ಕೆಎಲ್ಇ ಎಂಜಿನಿಯರ್‌ ಕಾಲೇಜಿನ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ, ದೇಶದ್ರೋಹ ಹಾಗೂ ಕೋಮು ಸೌಹಾರ್ದ ಕದಡುವ ಪ್ರಕರಣ ದಾಖಲಿಸಿದ್ದಾರೆ. 

ಸಿವಿಲ್‌ ವಿಭಾಗದಲ್ಲಿ 4ನೇ ಸೆಮಿಸ್ಟರ್‌ ಓದುತ್ತಿರುವ ಅಮೀರ್‌, ಬಾಸಿತ್‌ ಹಾಗೂ ಎರಡನೇ ಸೆಮಿಸ್ಟರ್‌ ಓದುತ್ತಿರುವ ತಾಲೀಬ್‌ ಈ ಕೃತ್ಯದಲ್ಲಿ ಪಾಲ್ಗೊಂಡವರು.

ಪುಲ್ವಾಮಾ ದಾಳಿ ನಡೆದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫೆ.14 ರಂದು ಕಾಲೇಜಿನಲ್ಲಿ ಹುತಾತ್ಮರನ್ನು ಸ್ಮರಿಸಲಾಗಿತ್ತು. ಆದರೆ, ಈ ಮೂವರೂ ಕೊಟಗುಣಸಿಯಲ್ಲಿರುವ ಕಾಲೇಜಿನ ವಸತಿ ಗೃಹದಲ್ಲಿ ಪಾಕ್‌ ಸೇನೆಯ ಹಾಡಿಗೆ ದನಿಗೂಡಿಸಿ ‘ಪಾಕಿಸ್ತಾನ ಜಿಂದಾಬಾದ್’, ‘ಪಾಕಿಸ್ತಾನ ಆಜಾದಿ’ ಎಂದು ಘೋಷಣೆ ಕೂಗಿದ್ದರು. ಅದನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಕಳುಹಿಸಿದ್ದರು.

ವಿಡಿಯೊ ವೈರಲ್‌ ಆಗುತ್ತಿದ್ದಂತೆಯೇ ಕಾಲೇಜಿನ ಪ್ರಾಚಾರ್ಯ ಬಸವರಾಜ ಅಣಾಮಿ ಅವರು, ಶನಿವಾರ ವಿದ್ಯಾರ್ಥಿಗಳ ವಿಚಾರಣೆ ನಡೆಸಿದರು. ಬಜರಂಗ ದಳದ ಕಾರ್ಯಕರ್ತರು ಪ್ರಾಚಾರ್ಯರ ಕೊಠಡಿಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು.

ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಗಮನಿಸಿದ ಪ್ರಾಚಾರ್ಯರು, ಗೋಕುಲ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದರು.

 ‘ವಿಡಿಯೊವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಹಿಸಲಾಗುವುದು’ ಎಂದು ಪೊಲೀಸ್‌ ಕಮಿಷನರ್‌ ಆರ್‌. ದಿಲೀಪ್‌ ತಿಳಿಸಿದರು.

ಈ ಮೂವರೂ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ಆಯ್ಕೆಯಾಗಿದ್ದು, ಅವರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ಪ್ರಾಚಾರ್ಯ ಬಸವರಾಜ ಅಣಾಮಿ ಹೇಳಿದರು.

ವಾದ ಮಂಡಿಸದಿರಲು ನಿರ್ಣಯ: ಪಾಕ್‌ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ಪರ ಯಾರೂ ವಾದ ಮಂಡಿಸಬಾರದು ಎಂದು ಹುಬ್ಬಳ್ಳಿ ವಕೀಲರ ಸಂಘ ನಿರ್ಣಯಿಸಿದೆ.

ಸಂಘದ ಸಭೆಯಲ್ಲಿ ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದೆ. ಸೋಮವಾರ ಸಂಘದ ಸರ್ವ ಸದಸ್ಯರ ಸಭೆ ಕರೆದು ವಿಷಯ ತಿಳಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಗುರು ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ಯುವ ವಕೀಲರ ಸಂಘವೂ ವಾದ ಮಂಡಿಸದಿರುವ ನಿರ್ಣಯ ಕೈಗೊಂಡಿದೆ ಎಂದು ಸಂಘದ ಅಧ್ಯಕ್ಷ ಅಶೋಕ ಅಣ್ವೇಕರ್‌ ತಿಳಿಸಿದ್ದಾರೆ.

*
ಸರ್ಕಾರಿ ಕೋಟಾದಡಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ವಿಡಿಯೊ ಗಮನಿಸಿ ಪೊಲೀಸರಿಗೆ ದೂರು ನೀಡಿದ್ದೇವೆ. ಕಾಲೇಜಿನಿಂದ ಅಮಾನತು ಮಾಡಲಾಗಿದೆ.
-ಬಸವರಾಜ ಅಣಾಮಿ, ಕಾಲೇಜಿನ ಪ್ರಾಚಾರ್ಯರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು