ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌.ಪೇಟೆ ಅಖಾಡದಲ್ಲೊಂದು ಸುತ್ತ| ಜನ್ಮಭೂಮಿ ಮತ್ತು ಕರ್ಮಭೂಮಿ ನಡುವಿನ ಹೋರಾಟ

ಮುಖ್ಯಮಂತ್ರಿಗೆ ಕಮಲ ಅರಳಿಸುವ ತವಕ
Last Updated 1 ಡಿಸೆಂಬರ್ 2019, 10:00 IST
ಅಕ್ಷರ ಗಾತ್ರ

ಕೆ.ಆರ್‌.ಪೇಟೆ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ತವರು ಕ್ಷೇತ್ರ ಎಂಬ ಕಾರಣಕ್ಕಾಗಿ, ಕೆ.ಆರ್‌.ಪೇಟೆ ಉಪ ಚುನಾವಣಾ ಕಣ ರಾಜ್ಯದ ಗಮನ ಸೆಳೆದಿದೆ. ಹುಟ್ಟೂರಿನಲ್ಲಿ ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿರುವ ಯಡಿಯೂರಪ್ಪ, ‘ಜನ್ಮಭೂಮಿಯೇ ಕರ್ಮಭೂಮಿ’ ಎಂಬ ಘೋಷಣೆಯೊಂದಿಗೆ ಚುನಾವಣಾ ಕಾವು ಹೆಚ್ಚಿಸಿದ್ದಾರೆ.

ಕೆ.ಆರ್‌.ಪೇಟೆ ಕ್ಷೇತ್ರ ಎಸ್‌.ಎಂ. ಲಿಂಗಪ್ಪ, ಪುಟ್ಟಸ್ವಾಮಿಗೌಡ, ಬೊಮ್ಮೇಗೌಡ, ಕೆ.ಆರ್‌.ಪೇಟೆ ಕೃಷ್ಣರಂತಹ ರಾಜಕೀಯ ಮುತ್ಸದ್ದಿ ಗಳನ್ನು ಕಂಡಿದೆ. ಜೆಡಿಎಸ್‌ನಿಂದ ಗೆದ್ದಿದ್ದ ಕೆ.ಸಿ.ನಾರಾಯಣಗೌಡರ ಪಕ್ಷಾಂತರದಿಂದಾಗಿ, ಈಗ ಉಪ ಉಚನಾವಣೆ
ಯತ್ತ ಹೊರಳಿದೆ. ಏಳು ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್‌ನ ಕೆ.ಬಿ.ಚಂದ್ರಶೇಖರ್‌, ಜೆಡಿಎಸ್‌ನ ಬಿ.ಎಲ್‌.ದೇವರಾಜು, ಬಿಜೆಪಿಯ ಕೆ.ಸಿ.ನಾರಾಯಣಗೌಡ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಬಿಎಸ್‌ವೈ ತಮ್ಮ ಇಡೀ ರಾಜಕೀಯ ಬದುಕಿನಲ್ಲಿ ಇದೇ ಮೊದಲ ಬಾರಿಗೆ ತವರು ಕ್ಷೇತ್ರವನ್ನು ಬಹಳ ಗಂಭೀರವಾಗಿ ಪರಿಗಣಿಸಿದಂತಿದೆ. ‘ತವರು ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿಲ್ಲ ಎಂಬ ನೋವಿದೆ’ ಎಂದು ಕೊರಗುತ್ತಿದ್ದ ಅವರು, ಉಪ ಚುನಾವಣೆ ಗೆಲ್ಲಲೇಬೇಕು ಎಂಬಂತೆ ಮುಂದಡಿ ಇಟ್ಟಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌–ಜೆಡಿಎಸ್‌ ಹಣಾಹಣಿಗೆ ಕಾರಣವಾಗುತ್ತಿದ್ದ ಕ್ಷೇತ್ರದಲ್ಲೀಗ ಮೂರು ಪಕ್ಷಗಳ ಹಣಾಹಣಿ ನಡೆದಿದೆ.

ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಮುಖಂಡರು ಹೊಂದಾಣಿಕೆಯ ಆಟಕ್ಕೆ ಶರಣಾಗುತ್ತಿದ್ದರು. ಅಭ್ಯರ್ಥಿಗಳನ್ನು ಸಾಂಕೇತಿಕವಾಗಿ ಕಣಕ್ಕಿಳಿಸಿ ಕೈತೊಳೆದುಕೊಳ್ಳುತ್ತಿದ್ದರು. ಈ ಬಾರಿ ಮುಖ್ಯಮಂತ್ರಿ ಅವರೇ ‘ತವರಿನ ಋಣ ತೀರಿಸಲು ಅವಕಾಶ ಕೊಡಿ’ ಎನ್ನುತ್ತಾ ಕಮಲ ಅರಳಿಸುವ ಯತ್ನದಲ್ಲಿದ್ದಾರೆ. ‘ತ್ಯಾಗ’ ಎನ್ನುತ್ತಾ ರಾಜೀನಾಮೆ ಯನ್ನು ಸಮರ್ಥಿಸಿಕೊಳ್ಳುತ್ತಿರುವ ಕೆ.ಸಿ.ನಾರಾಯಣಗೌಡ, ವಿವಿಧ ಪಕ್ಷಗಳ ಸ್ಥಳೀಯ ಮುಖಂಡರನ್ನು ಬಿಜೆಪಿಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣಾ ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಯುವ ಮುಖಂಡ ಬಿ.ವೈ.ವಿಜಯೇಂದ್ರ, ಶಾಸಕ ಪ್ರೀತಂಗೌಡ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದು, ಯುವಜನರನ್ನು ಆಕರ್ಷಿಸುತ್ತಿದ್ದಾರೆ.

ಜೆಡಿಎಸ್‌, ಕಾಂಗ್ರೆಸ್‌ ಮುಖಂಡರು ನಾರಾಯಣಗೌಡರನ್ನು ‘ಬಾಂಬೆ ಗಿರಾಕಿ’ ಎಂದು ಜರಿಯುತ್ತಿದ್ದು, ‘ಮುಂಬೈನಲ್ಲಿ ಸಾಮ್ರಾಜ್ಯ ಕಟ್ಟಿರುವ ಅವರು ಜನರ ಕೈಗೆ ಸಿಗುವುದಿಲ್ಲ’ ಎಂದು ಆರೋಪಿಸುತ್ತಿದ್ದಾರೆ. ಮುಂಬೈನಲ್ಲಿ ದುಡಿದ ಹಣವನ್ನು ಕ್ಷೇತ್ರದಲ್ಲಿ ಸುರಿಯುವುದಾಗಿ ಹೇಳುವ ಮೂಲಕ ನಾರಾಯಣಗೌಡ ತಿರುಗೇಟು ನೀಡುತ್ತಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ಯಲ್ಲಿ ಕೆ.ನಿಖಿಲ್‌ ಸೋಲು ಕಂಡ ನಂತರ, ಎಚ್‌.ಡಿ.ದೇವೇಗೌಡರ ಕುಟುಂಬ ಈಗ ರಕ್ಷಣಾತ್ಮಕ ನಿಲುವು ತಾಳಿದೆ. ಅದಕ್ಕಾಗಿಯೇ ನಿಷ್ಠಾವಂತ ಕಾರ್ಯಕರ್ತ ಬಿ.ಎಲ್‌.ದೇವರಾಜು ಅವರಿಗೆ ಮಣೆ ಹಾಕಿದೆ. ಆರಂಭದಲ್ಲಿ, ನಿಖಿಲ್‌ ಕಣಕ್ಕಿಳಿಯುತ್ತಾರೆ ಎನ್ನಲಾಗುತ್ತಿತ್ತು. ಸ್ಥಳೀಯ ನಾಯಕತ್ವದ ಕೂಗು ಎದ್ದ ಹಿನ್ನೆಲೆಯಲ್ಲಿ ಬಿ.ಎಲ್‌.ದೇವರಾಜು ಅವರಿಗೆ ಟಿಕೆಟ್‌ ನೀಡಿ ‘ಜೆಡಿಎಸ್‌ ನಿಷ್ಠಾವಂತ ಕಾರ್ಯಕರ್ತರ ಪರವಾಗಿದೆ’ ಎಂಬ ಸಂದೇಶ ಸಾರಿದೆ.

ಕಳೆದ ಚುನಾವಣೆಯಲ್ಲಿ ಎಲ್ಲಾ ಏಳು ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದ ಜೆಡಿಎಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ಹಟ ಇದೆ. ಶಾಸಕರಾದ ಎಚ್‌.ಡಿ.ರೇವಣ್ಣ, ಬಾಲಕೃಷ್ಣ ಕ್ಷೇತ್ರದಲ್ಲೇ ಉಳಿದಿದ್ದಾರೆ.

ಕ್ಷೇತ್ರದಲ್ಲಿ ಕುರುಬ ಸಮುದಾಯದ 36 ಸಾವಿರ ಮತಗಳಿದ್ದು, ಅವುಗಳನ್ನು ಕಾಂಗ್ರೆಸ್‌ಗೆ ಗಟ್ಟಿ ಮಾಡಿಕೊಡಲು ಸಿದ್ದರಾಮಯ್ಯ ಪ್ರಚಾರಕ್ಕಿಳಿದಿದ್ದಾರೆ. ಸತತ ಎರಡು ಚುನಾವಣೆಯಲ್ಲಿ ಸೋಲು ಕಂಡಿರುವ ಕೆ.ಬಿ.ಚಂದ್ರಶೇಖರ್‌ ಮೇಲೆ ಕೊಂಚ ಅನುಕಂಪವೂ ಜನರಿಗಿದೆ.

ಮೇಲ್ನೋಟಕ್ಕೆ, ಸಂಸದೆ ಸುಮಲತಾ ತಟಸ್ಥವಾಗಿ ಉಳಿದಿರುವಂತೆ ಕಾಣುತ್ತಿದೆ. ಅಂತಿಮವಾಗಿ ಅವರು ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ನಿರ್ಣಾಯಕರ ಮೇಲೆ ಕಾಂಗ್ರೆಸ್‌ ಕಣ್ಣು

ಕಳೆದ ಚುನಾವಣೆಯಲ್ಲಿ ಕೆ.ಬಿ.ಚಂದ್ರಶೇಖರ್‌ 70 ಸಾವಿರ ಮತ ಗಳಿಸಿದ್ದರು. ಈಗ ಆ ಮತಗಳನ್ನು ಉಳಿಸಿಕೊಂಡರೆ ಜಯ ನಿಶ್ಚಿತ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿದೆ. ಬಿಜೆಪಿ, ಜೆಡಿಎಸ್‌ನ ಮತ ವಿಭಜನೆಯಿಂದಾಗಿ ಕಾಂಗ್ರೆಸ್‌ ಗೆಲುವಿನ ದಡ ಸೇರಲಿದೆ ಎಂಬ ವಿಶ್ವಾಸ ಮುಖಂಡರದ್ದು. ಅದಕ್ಕಾಗಿ ನಿರ್ಣಾಯಕರಾಗಿರುವ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತರ ಮತಗಳ ಮೇಲೆ ಕಟ್ಟಿದ್ದಾರೆ.

ಮತದಾರರ ವಿವರ

ಪುರುಷರು;1,06,088

ಮಹಿಳೆಯರು;1,02,844

ಇತರರು;05

ಒಟ್ಟು;2,08,937

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT