ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರಯಾಣಿಕರ ಸುರಕ್ಷೆಯ ಹೊಣೆ ನಮ್ಮದು ಎಂದ ಕೆಎಸ್‌ಆರ್‌ಟಿಸಿ ನಿರ್ವಾಹಕರು

Last Updated 28 ಜೂನ್ 2019, 4:06 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಬಸ್‌ ಹತ್ತಿರುವ ನೀವು,ನಿಮ್ಮೂರಿನಲ್ಲಿ ಇಳಿಯುವವರೆಗೆ ನಿಮ್ಮ ಸುರಕ್ಷೆ ನಮ್ಮ ಹೊಣೆ. ನಾವು ನಿಮ್ಮ ಸಹಾಯಕ್ಕೆ ಇದ್ದೇವೆ. ಏನೇ ತೊಂದರೆಯಾದರು ನಮಗೆ ತಿಳಿಸಿ’ ಎಂದು ಕೆಎಸ್‌ಆರ್‌ಟಿಸಿ ನಿರ್ವಾಹಕರು ರಾತ್ರಿ ಬಸ್‌ಗಳು ಪ್ರಯಾಣ ಆರಂಭಿಸುವ ಮೊದಲು ಬಸ್‌ಗಳಲ್ಲಿ ಉದ್ಘೋಷಿಸುತ್ತಿದ್ದಾರೆ.

ವಿಮಾನಗಳು ಟೇಕ್‌ಆಫ್‌ ಮೊದಲು ಗಗನಸಖಿಯರು ಸುರಕ್ಷಾ ಕ್ರಮಗಳನ್ನು ವಿವರಿಸಿ ಹೇಳುವಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕಂಡಕ್ಟರ್‌ಗಳು, ‘ನಾನು ಮುಂದೆ ಡ್ರೈವರ್ ಹತ್ತಿರ ಕೂತಿರ್ತೀನಿ. ರಾತ್ರಿ ಪ್ರಯಾಣದಲ್ಲಿ ಯಾರಾದರೂ ತೊಂದರೆ ಕೊಟ್ಟರೆ, ಕೀಟಲೆ ಮಾಡಿದರೆ ನನಗೆ ಅಥವಾ ಡ್ರೈವರ್‌ಗೆ ಹೇಳಿ. ಅಕ್ಕಪಕ್ಕದಲ್ಲಿರುವ ನೆರವು ಪಡೆದುಕೊಳ್ಳಿ’ ಎಂದು ತಿಳಿಹೇಳುತ್ತಿದ್ದಾರೆ.

ಇಂಥಶೂರರಿಂದ ಮಹಿಳೆಯರನ್ನು ಹೇಗೆ ರಕ್ಷಿಸುತ್ತೆ ಕೆಎಸ್‌ಆರ್‌ಟಿಸಿ?

ಕೆಎಸ್‌ಆರ್‌ಟಿಸಿಯ ಈ ಕ್ರಮಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸಂಸ್ಥೆಯ ಈ ಕ್ರಮಕ್ಕೆ ಕಾರಣವಾಗಿದ್ದು ಕವಯತ್ರಿ ದೀಪಾ ಗಿರೀಶ್ ಅವರ ಫೇಸ್‌ಬುಕ್‌ ಪೋಸ್ಟ್‌. ಅವರ ಬರಹದ ಸಂಗ್ರಹ ರೂಪ ಇಲ್ಲಿದೆ.

‘ನಿನ್ನೆ (ಜೂನ್ 26)ಯಾವುದೋ ಕೆಲಸದ ಮೇಲೆ ಸಾಗರ ಹೋಗಿದ್ದವಳು ರಾತ್ರಿ ಬೆಂಗಳೂರಿಗೆ ಬಸ್ ಹತ್ತಿದೆ. ಹಿಂದಿನಿಂದ ಮೂರನೆಯ ಕಿಟಕಿ ಪಕ್ಕದ ಸೀಟನ್ನು ಬುಕ್ ಮಾಡಿದೆ.ಬಸ್ ಹತ್ತುವಾಗಲೇ ಕಂಡಕ್ಟರ್ ‘ಇಲ್ಲೇ ಮುಂದೆಯೇ ಕೂರಿ, ಖಾಲಿ ಇದೆ’ಎಂದರು. ಪಕ್ಕದಲ್ಲಿ ಇನ್ನೊಬ್ಬರಿದ್ದ ಕಾರಣ ನಾ ಬೇಡವೆಂದು ನನ್ನ ಸೀಟಿಗೆ ಹೋದೆ. ಆಗ ಬಹುಶಃ ನಾನೇ ಬಸ್ಸಿಗೆ ಕಡೆಯವಳು.

‘ಸುಮಾರು ಎರಡು ಗಂಟೆಯ ಹೊತ್ತಿಗೆ ಹಿಂಬದಿಯ ಸೀಟಿನಿಂದ ಕೈಯೊಂದು ಕಿಟಕಿ ಮತ್ತು ಸೀಟಿನ ನಡುವಲ್ಲಿ ತೂರಿ ಬಂದು ಎಡಭಾಗದಿಂದ ನನ್ನನ್ನು ತಡವಿತು. ನಿದ್ರೆಗಣ್ಣಾಗಿದ್ದವಳಿಗೆ ಕಿರಿಕಿರಿಯಾದರೂ ಕಣ್ಣುಬಿಡಲಾಗಲಿಲ್ಲ, ಮಗ್ಗುಲು ಬದಲಿಸಿ ಬಲಭಾಗಕ್ಕೆ ಸರಿದು ಕೂತೆ. ಇನ್ನು ಕೆಲವೇ ನಿಮಿಷದಲ್ಲಿ ಪೀಡೆ ಬಲಭಾಗದಿಂದಲೂ ಸುಖವನ್ನು ತಡವುದಿತ್ತು. ಒಟ್ರಾಶಿ ಕೋಪವೆಲ್ಲಾ ನುಗ್ಗಿ ಸೀಟಿನಿಂದ ಎದ್ದು ಹಿಂದಕ್ಕೆ ತಿರುಗಿ ಕೊರಳಪಟ್ಟಿ ಹಿಡಿದು ಕೆನ್ನೆಗೆ ಬಾರಿಸಿದೆ. ಮುಂದಿದ್ದ ನಾಲ್ಕಾರು ಜನ ತಿರುಗಿ ನೋಡಿದ್ರು. ನಾನು ಧ್ವನಿ ಏರಿಸಿ ಬೈಯ್ಯತೊಡಗಿದೆ. ಅವ ತಲೆತಗ್ಗಿಸಿ ಪುಟುಪುಟು ಎದ್ದುಹೋಗಿ ಮುಂದೆಲ್ಲೊ ಕುಳಿತ. ಜನ ನನ್ನತ್ತ ತಿರುಗಿ ನೋಡುತ್ತಾ ಗುಸುಗುಸು ಮಾಡಿಕೊಂಡರು. ಮುಂದೆ ಖಾಲಿಯಿದ್ದರೂ ಹಿಂಬದಿಯ ಸೀಟಿನಲ್ಲಿ ಕೂತ ನನ್ನ ದಾಷ್ಟ್ಯಕ್ಕೆ ಹೀಗೇ ಆಗಬೇಕು ಅನ್ನುವಂತ ಮಾತುಗಳೂ ಕೇಳಿಸಿತು. ಕೆಲವರ ನಿದ್ರೆಗೆ ಚ್ಯುತಿ ಬಂದದ್ದಕ್ಕೆ ಸಿಡುಕುತ್ತಾ ಒರಗಿದರು.

‘ಮಹಿಳೆಯರು ಸೀಟ್ ರಿಸರ್ವ್ ಮಾಡುವಾಗ ಮೀಸಲು ಸೀಟ್ ಅಲ್ಲದ್ದನ್ನ ಆಯ್ಕೆ ಮಾಡಿಕೊಂಡರೆ ‘ನೀವು ಜನರಲ್ ಸೀಟ್ ಆಯ್ದುಕೊಂಡಿದ್ದೀರಿ, ನಿಮ್ಮ ಪಕ್ಕ ಬರುವ ಪ್ರಯಾಣಿಕರು ಪುರುಷರೂ ಆಗಿರಬಹುದು’ಎಂಬ ಮೆಸೇಜ್ ಬರುತ್ತದೆ. ಅದನ್ನು ತಿಳಿದೂ ನನಗೆ ವಿಂಡೋ ಸೀಟ್ ಬೇಕಿದ್ದರಿಂದ ಹಾಗೂ ನಾನು ಬಸ್ ಹೊರಡುವ ಕೆಲವೇ ಗಂಟೆ ಮೊದಲು ಬುಕ್ ಮಾಡ್ತಿರೋದ್ದರಿಂದ ಈ ಸೀಟ್ ಆಯ್ದುಕೊಂಡೆ.

‘ಪಕ್ಕದಲ್ಲಿ ಬರುವ ಗಂಡಸರಿಂದಾಗಿ ಮಹಿಳೆಯರು ಕಿರಕಿರಿ ಅನುಭವಿಸಬಹುದೆಂದು ಊಹಿಸುವ ಆಡಳಿತ, ಹಿಂದಿನ ಸೀಟಿನಿಂದ ಜೊಲ್ಲು ಸೋರಿಸುವ ಇಂಥಶೂರರಿಂದ ಮೀಸಲು ಸೀಟಿನ ಮಹಿಳೆಯರನ್ನಾದರೂ ಹೇಗೆ ರಕ್ಷಿಸುತ್ತದೆ?ಬಸ್ಸಿನ ಸ್ತ್ರೀಯರಿಗೆ ಮೀಸಲಲ್ಲದ ಸೀಟಲ್ಲಿ ಕೂರುವ ಮಹಿಳೆಯರ ಸುರಕ್ಷತೆ ಹೇಗೆ? ಅವರಾಗೇ ಧ್ವನಿ ಎತ್ತಿದರೂ ಜೊತೆಯಾಗದ ಜನರಿರುವಾಗ ಆಡಳಿತದ ಕ್ರಮವೇನು? ಮೀಸಲು ಸೀಟು ಆಯ್ಕೆ ಮಾಡದ ಏಕೈಕ ಕಾರಣದಿಂದ ಘಟನೆಯ ಸಂಪೂರ್ಣ ಹೊಣೆಯನ್ನು ನಾನೇ ಹೊರಬೇಕೇ?

‘ಸುತ್ತಲಿದ್ದ ಸಮಾಜ ಅರ್ಥಾತ್ ಆ ಬಸ್ಸಿನ ಜನ ಧ್ವನಿಗೂಡಿಸುವುದಿರಲಿ, ಏನು ಎತ್ತ ಎಂದು ವಿಚಾರಿಸಲಿಲ್ಲ! ನನ್ನ ಕಾಳಜಿ ದಿನಂಪ್ರತಿ ಹಗಲು ರಾತ್ರಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವ ಲಕ್ಷಾಂತರ ಹೆಣ್ಣುಮಕ್ಕಳದ್ದು. ನಮ್ಮ ಸಮಾಜದಲ್ಲಿ ಇಂತಹ ಘಟನೆಗಳನ್ನೆಲ್ಲಾ ‘ತೀರಾ ಸಣ್ಣದ್ದು’ಎಂದೇ ಕರೆಯಲಾಗುತ್ತದೆ’ ಎಂದು ದೀಪಾ ಗಿರೀಶ್ ಅವರು ತಮಗೆ ಆದ ಕೆಟ್ಟ ಅನುಭವವನ್ನು ಹಂಚಿಕೊಳ್ಳುತ್ತಾ ಸಂಸ್ಥೆಯನ್ನು ಪ್ರಶ್ನಿಸಿದ್ದರು.

‘ಬರೆದು ಒಳ್ಳೇದು ಮಾಡಿದಿರಿ’

‘ಆ ಪೀಡೆಗೆ ತಕ್ಕ ಶಾಸ್ತಿ ಮಾಡಿದ್ದೀರಿ. ಅದನ್ನು ಎಲ್ಲರ ಗಮನಕ್ಕೂ ಬರುವಂತೆ ಹಂಚಿಕೊಂಡು ಬೇರೆ ಹೆಣ್ಣುಮಕ್ಕಳಿಗೆ ಧೈರ್ಯ ಕೊಟ್ಟಿದ್ದೀರಿ. ಇಂತಹ ಬಹುತೇಕ ಸಂದರ್ಭಗಳಲ್ಲಿ ಸಮಾಜ ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುವುದಲ್ಲದೆ ಹೆಣ್ಣುಮಕ್ಕಳ ಮೇಲೆಯೇ ಆರೋಪ ಹೊರಿಸುವುದು ಸಾಮಾನ್ಯ. ಆದರೂ 'ಪೀಡೆ'ಗಳನ್ನು ಸಹಿಸಿಕೊಳ್ಳದೆ ನೀವು ಮಾಡಿದ ಕೆಲಸವನ್ನೇ ಎಲ್ಲರೂ ಮಾಡಿದರೆ ಆಗ ಅವುಗಳಿಗೆ ಸ್ವಲ್ಪ ಭಯ ಬರಬಹುದು’ ಎಂದು ದೀಪಾ ಗಿರೀಶ್ ಅವರ ಪೋಸ್ಟ್‌ಗೆ ಜ್ಯೋತಿ ಅನಂತಸುಬ್ಬರಾವ್ ಪ್ರತಿಕ್ರಿಯಿಸಿದ್ದರು.

‘ಡ್ರೈವರ್ ಕಂಡಕ್ಟರ್ ಗಳಿಗೆ ಇಂತಹಾ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕೆಂಬ ಮತ್ತು ಮಹಿಳಾಪರವಾಗಿ ದನಿ ಎತ್ತಿ ಇಡೀ ಪ್ರಯಾಣಿಕರು ಉರಿದೇಳುವಂತೆ ಮಾಡುವ , ಮಾಡಬೇಕಾದ ತುರ್ತು ಇಲ್ಲಿದೆ. ಇದು ಸಮಾಜ ಮೊದಲ್ಗೊಂಡು ಎಲ್ಲ ದಿಕ್ಕಿನಲ್ಲೂ ಉದಾಸೀನದ ಪರಮಾವಧಿ. ಅಷ್ಟೇ ದುರಂತ , ಅಪಾಯಕರ, ಆತಂಕ ಹುಟ್ಟಿಸುವ ಸನ್ನಿವೇಶ’ ಎಂದು ರೇಣುಕಾ ಮಂಜುನಾಥ್ ಸಲಹೆ ಮಾಡಿದ್ದರು.

ಎಂ.ಕೆ.ಮತ ಅವರು ತಮ್ಮ ಪ್ರತಿಕ್ರಿಯೆಯಲ್ಲಿ ‘awatar@ksrtc.org ಇಮೇಲ್‌ಗೆದೂರು ಕೊಡೋಕೆ ಹೇಳಿ... ಅದು ಹೇಗೆ ವ್ಯವಸ್ಥೆಯನ್ನು ಬದಲಾಯಿಸಲ್ವೋ ನೋಡೋಣ...’ ಎಂದು ಸಲಹೆ ಮಾಡಿದ್ದರು.

‘ಬರೆದು ಒಳ್ಳೆಯದೇ ಮಾಡಿದಿರಿ.ಇಂಥ ಕಾಟ ಅನುಭವಿಸುವ ನಮ್ಮ ಎಷ್ಟೋ ಪಾಪದ ಹೆಣ್ಣು ಮಕ್ಕಳಿಗೆ ಇದರಿಂದ ಧೈರ್ಯ, ಸ್ಫೂರ್ತಿ ದೊರೆಯಲಿ. ರಾತ್ರಿ ಒಬ್ಬರೇ ಪಯಣಿಸುವಾಗ ವ್ಯಾನಿಟಿ ಬ್ಯಾಗಲ್ಲೊಂದು ಬ್ಲೇಡ್ ಇಟ್ಟು ಕೊಳ್ಳಿ ಇಂಥ ಕಾಣದ ಕೈಗಳಿಗೆ ಕಚಕ್ ಮಾಡಿ.. ಎಂದು ನನ್ನ ವಿದ್ಯಾರ್ಥಿನಿಯರಿಗೆ ಎಷ್ಟೋ ಬಾರಿ ಹೇಳಿದ್ದಿದೆ. ಸಹಪ್ರಯಾಣಿಕರ ಮೌನ ನಿರೀಕ್ಷಿತವೇ. ಅವುಗಳ ಮಕ್ಕಳಿಗೆ ಹೀಗಾದಾಗ ಮಾತ್ರ ಅವರ ಸಂಕಟ ಜಾಗ್ರತವಾಗೋದು’ ಎಂದು ಭುವನೇಶ್ವರಿ ಹೆಗಡೆ ಪ್ರತಿಕ್ರಿಯಿಸಿದ್ದರು.

ಕೆಎಸ್‌ಆರ್‌ಟಿಸಿ ಸ್ಪಂದನೆ

ದೀಪಾ ಗಿರೀಶ್ ಅವರ ಫೇಸ್‌ಬುಕ್ ಪೋಸ್ಟ್‌ ಮತ್ತು ಅವರ ಪರವಾಗಿ ಸಾರ್ವಜನಿಕರು ಮಾಡಿದ ಒತ್ತಾಯಕ್ಕೆ ಸ್ಪಂದಿಸಿದ ಕೆಎಸ್‌ಆರ್‌ಟಿಸಿ ಜೂನ್ 27ರ ರಾತ್ರಿಯಿಂದಲೇ ದೂರ ಪ್ರಯಾಣದಬಸ್ಸುಗಳಲ್ಲಿ ‘ತುರ್ತು ಸಂದರ್ಭದಲ್ಲಿ ಕಂಡಕ್ಟರ್‌ ಮತ್ತು ಡ್ರೈವರ್ ನೆರವು ಪಡೆದುಕೊಳ್ಳಿ’ ಎಂದು ಉದ್ಘೋಷಿಸುವ ವ್ಯವಸ್ಥೆ ಜಾರಿಗೆ ತಂದಿದೆ.

ಈ ವಿಷಯವನ್ನೂ ದೀಪಾ ಗಿರೀಶ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ‘ಅತ್ಯಂತ ಕಳಕಳಿಯಿಂದ ಸ್ಪಂದಿಸಿದ ವ್ಯವಸ್ಥಾಪಕ ನಿರ್ದೇಶಕರು ಇಲಾಖೆಯ ಎಲ್ಲಾ ಸ್ಥರಗಳಲ್ಲೂ ಕಾರ್ಯಪ್ರವೃತ್ತರಾಗುವಂತೆ ಆದೇಶಿಸಿದ್ದಾರೆ. ಸಂಸ್ಥೆಯು ಮಹಿಳೆಯರಿಗೆ ಆಗುವ ಕಿರುಕುಳವನ್ನು ಸಹಿಸುವುದಿಲ್ಲ. ಮಹಿಳೆಯರು ತಮಗೆ ಉಂಟಾಗುವ ಸಮಸ್ಯೆಯನ್ನು ನಿರ್ವಾಹಕರಿಗೆ ತಿಳಿಸುವಂತೆಯೂ ಹಾಗೂ ಸಹಪ್ರಯಾಣಿಕರು ಸ್ಪಂದಿಸಬೇಕು ಎಂದು ಸಂಸ್ಥೆಯ ಸಿಬ್ಬಂದಿಮೌಖಿಕವಾಗಿ ಅನೌನ್ಸ್ ಮಾಡುತ್ತಿದ್ದಾರೆ. ಇಲಾಖೆಯ ಈ ನಡೆ ನಿಜಕ್ಕೂ ಆಶಾದಾಯಕ’ ಎಂದು ದೀಪಾ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

‘KSRTC ಅಧಿಕಾರಿಗಳುನನ್ನ ಇಮೇಲ್‌ಗೆಸಕಾರಾತ್ಮಕವಾಗಿ ಮತ್ತು ಕ್ಷಿಪ್ರವಾಗಿ ಉತ್ತರಿಸಿದ್ದಾರೆ. ಅವರಿಗೆ ಕೃತಜ್ಞತೆಗಳು’ ಎಂದು ದೆಹಲಿ ಜವಾಹರಲಾಲ್ ನೆಹರು ವಿವಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ,ಜಾನಪದ ತಜ್ಞಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯಿಸಿದ್ದಾರೆ.

ತಾವು ಅನುಭವಿಸಿದ ನೋವನ್ನು ಸಂಸ್ಥೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದ ದೀಪಾ ಅವರ ನಡೆಯನ್ನೂ ಹಲವರು ಶ್ಲಾಘಿಸಿದ್ದಾರೆ. ‘ನೀವು ಎರಡು ಹೆಜ್ಜೆಮುಂದೆ ಹೋಗಿ ಇಲಾಖೆಗೆ ತಿಳಿಸಿದ್ದು ಶ್ಲಾಘನೀಯ. ಇಂಥ ಪ್ರಸಂಗಗಳು ಉನ್ನತ ಅಧಿಕಾರಿಗಳಿಗೆ ಮುಟ್ಟದಿರುವುದೇ ಅವಘಡಗಳಿಗೆ ದಾರಿ ಮಾಡಿಕೊಡುತ್ತದೆ.ಹಾಗೆಯೇ repeat offenders ಗಳಿಗೆ ತಮ್ಮನ್ನು ಹೇಳುವವರು ಕೇಳುವವರು ಯಾರು ಇಲ್ಲ ಇದನ್ನೆಲ್ಲಾ ಸಹಿಸಿಕೊಳ್ಳುವ ಮಹಿಳೆಯರು ಇದ್ದಾರೆ ಎಂಬ ಕೆಟ್ಟ ಕಾನ್ಫಿಡೆನ್ಸ್ ಬಂದು ಬಿಡುತ್ತದೆ. My whole hearted appreciations to you deepa avare’ (ನಿಮಗೆ ತುಂಬು ಹೃದಯದ ಅಭಿನಂದನೆ) ಎಂದು ವೀಣಾ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT