ಗುರುವಾರ , ಡಿಸೆಂಬರ್ 3, 2020
19 °C
ಬಡ್ತಿಯನ್ನೇ ಕಾಣದ ಉಪನ್ಯಾಸಕರು

ನೆಟ್‌, ಕೆ–ಸೆಟ್, ಪಿಎಚ್‌.ಡಿ ಇದ್ದರೂ ಪದೋನ್ನತಿ ಇಲ್ಲ!

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ), ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ–ಸೆಟ್‌)ಯಲ್ಲಿ ಉತ್ತೀರ್ಣರಾಗಿ ಪಿಎಚ್‌.ಡಿ ಪದವಿ ಪಡೆದಿದ್ದರೂ, ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಸಾವಿರಕ್ಕೂ ಹೆಚ್ಚು ಉಪನ್ಯಾಸಕರು ಪದೋನ್ನತಿ ಇಲ್ಲದೇ ನಿವೃತ್ತರಾಗುತ್ತಿದ್ದಾರೆ.

ಈ ಉಪನ್ಯಾಸಕರು 10 ವರ್ಷಗಳಿಂದ ಉನ್ನತ ಅವಕಾಶಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಅವರಿಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ.

ಜಿ. ಕುಮಾರ್‌ ನಾಯಕ್‌ ನೇತೃತ್ವದ ಸಮಿತಿ, ಆಂಧ್ರಪ್ರದೇಶ ಮಾದರಿಯಲ್ಲಿ ಅರ್ಹತೆ ಆಧಾರದ ಮೇಲೆ ಪಿಯು ಉಪನ್ಯಾಸಕರನ್ನು ಪದವಿ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರಾಗಿ ಪದೋನ್ನತಿಗೊಳಿಸ ಬೇಕು ಎಂದು ಶಿಫಾರಸು ಮಾಡಿತ್ತು. 2011ರಲ್ಲಿ ಆಂಧ್ರಪ್ರದೇಶ ಹೈಕೋರ್ಟ್‌, ಪಿಯು ಉಪನ್ಯಾಸಕರನ್ನು ಬಡ್ತಿಗೆ ಪರಿಗಣಿಸುವಂತೆ ಆದೇಶ ನೀಡಿದೆ.

ಹುದ್ದೆ ಮೀಸಲಾತಿ ಕೊಡಿ: 2014ರಿಂದ ವೃಂದ ಮತ್ತು ನೇಮಕಾತಿ ಅಧಿಸೂಚನೆ ಪ್ರಕಾರ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಡೆಸುತ್ತದೆ. ಬೋಧಕೇತರ ವರ್ಗದ ಗ್ರೂಪ್‌ ‘ಸಿ’ ಸಿಬ್ಬಂದಿ, ಅರ್ಹತೆ ಆಧಾರದ ಮೇಲೆ ಸಹಾಯಕ ಪ್ರಾಧ್ಯಾಪಕರಾಗಿ ಸ್ಥಿತ್ಯಂತರಗೊಳ್ಳುವ ಸಮಯದಲ್ಲಿ ಶೇ 5ರಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ. ಆದರೆ, ಪಿಯು ಉಪನ್ಯಾಸಕರು ಪರೀಕ್ಷೆ ಎದುರಿಸಲು ಸಿದ್ಧರಿದ್ದರೂ ಗ್ರೂಪ್‌ ‘ಸಿ’ ಮಾದರಿಯಲ್ಲಿ ಇವರಿಗೆ ಹುದ್ದೆಗಳಲ್ಲಿ ಮೀಸಲಾತಿ ನೀಡಿಲ್ಲ.

2018ರಲ್ಲಿ ನಡೆದ ಉನ್ನತ ಶಿಕ್ಷಣ ಪರಿಷತ್‌ ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನಾಗಲಾಂಬಿಕಾ ದೇವಿ, ‘ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅರ್ಹತೆ ಹೊಂದಿದ ಪಿಯು ಉಪನ್ಯಾಸಕರಿಗೆ ಶೇ 5ರಷ್ಟು ಹುದ್ದೆ ಮೀಸಲಿಡಲು ಯಾವುದೇ ಅಭ್ಯಂತರವಿಲ್ಲ’ ಎಂದು ಷರಾ ಬರೆದಿದ್ದರು. ಆದರೆ, ಅದಕ್ಕೆ ಸರ್ಕಾರದಿಂದ ಯಾವುದೇ ಉತ್ತರ ಸಿಕ್ಕಿಲ್ಲ.

‘ಕೂಡಲೇ ಹುದ್ದೆ ಮೀಸಲಾತಿ ನೀಡಬೇಕು. ಜೊತೆಗೆ,  ಈಗಿರುವ ನೇಮಕಾತಿ ವಯೋಮಿತಿಯನ್ನು 45ರಿಂದ 50 ವರ್ಷಕ್ಕೆ ಹೆಚ್ಚಿಸಬೇಕು, ರಾಜ್ಯ ಎನ್‌ಇಟಿ, ಕೆ–ಸೆಟ್‌, ಪಿಎಚ್‌.ಡಿ ಅರ್ಹತೆಯುಳ್ಳ ಸರ್ಕಾರಿ ಪದವಿಪೂರ್ವ ಕಾಲೇಜುಗಳ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಂ.ಎಲ್‌. ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎಸ್‌.ಪುರುಷೋತ್ತಮ್‌ ಅವರ ಒತ್ತಾಯ.

‘ಆಡಳಿತಾತ್ಮಕ ನಿರ್ಧಾರಬೇಕು’
‘ಆಡಳಿತಾತ್ಮಕ ನಿರ್ಧಾರ ಕೈಗೊಂಡರೆ ಮಾತ್ರ ಪದೋನ್ನತಿ ಸಾಧ್ಯವಾಗಬಹುದು. ಕೆಲವು ಕಾಲೇಜುಗಳಲ್ಲಿ ಪದವಿಯ ಜತೆಗೆ ಪಿಯು ಇರುತ್ತದೆ. ಅಂತಲ್ಲಿ ಕಾರ್ಯಬಾಹುಳ್ಯದ ಕಾರಣಕ್ಕೆ ಪಿಯು ಉಪನ್ಯಾಸಕರು ಪದವಿ ತರಗತಿಗಳಿಗೂ ಪಾಠ ಮಾಡುತ್ತಾರೆ. ಇದನ್ನೇ ನೋಡಿಕೊಂಡು ಪಿಯು ಉಪನ್ಯಾಸಕರು ತಮಗೆ ಬಡ್ತಿ ನೀಡಬೇಕೆಂದು ಕೇಳುತ್ತಿರಬಹುದು. ಆದರೆ ಸದ್ಯದ ನಿಯಮಾವಳಿಗಳ ಪ್ರಕಾರ ಬಡ್ತಿ ನೀಡಲು ಅವಕಾಶವೇ ಇಲ್ಲ’ ಎಂದು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು