ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ವಸ್ತುಗಳ ಕೊರತೆ ಇಲ್ಲ, ಬಡವರಿಗೆ ಉಚಿತ ಹಾಲು: ಸಿಎಂ ಯಡಿಯೂರಪ್ಪ

Last Updated 1 ಏಪ್ರಿಲ್ 2020, 9:00 IST
ಅಕ್ಷರ ಗಾತ್ರ

ಬೆಂಗಳೂರು:ರಾಜ್ಯದಲ್ಲಿ ಯಾವುದೇ ಅಗತ್ಯ ವಸ್ತುಗಳ ಕೊರತೆ ಇಲ್ಲ, ಬಡವರಿಗೆ ಉಚಿತವಾಗಿ ಹಾಲು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಹೇಳಿದ್ದಾರೆ.

ಅಡುಗೆ ಎಣ್ಣೆ ಸೇರಿ ಅಗತ್ಯ ವಸ್ತುಗಳ ‌ಕೊರತೆಯಿಲ್ಲ, ಜನ ಆತಂಕಪಡುವ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಗುರುವಾರದಿಂದ ಬಡವರಿಗೆ ಉಚಿತವಾಗಿ ಕೆಎಂಎಫ‌್ ಹಾಲು ನೀಡಲಾಗುವುದು. ಕೆಎಂಎಫ್ ಮೂಲಕ 7 ಲಕ್ಷ ಲೀಟರ್ ಹಾಲನ್ನು ಸರ್ಕಾರ ‌ಖರೀದಿಸಿ ಕೊಳಚೆ ಪ್ರದೇಶಗಳು ಹಾಗೂ ಬಡಜನರು ವಾಸಿಸುವ ಪ್ರದೇಶಗಳಲ್ಲಿ ‌ಉಚಿತವಾಗಿ ಏಪ್ರಿಲ್ 14 ರವರೆಗೆ ಹಾಲು ವಿತರಿಸಲಾಗುವುದು ಎಂದರು.

ವಿಧವಾ ವೇತನ, ವೃದ್ದಾಪ್ಯ ವೇತನ ಎರಡು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು.‌ ಕಲಬುರ್ಗಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಯಡಿಯೂರಪ್ಪ ತಿಳಿಸಿದರು.

ಟೊಮೊಟೊ, ಕರಬೂಜ, ದ್ರಾಕ್ಷಿ ಸರಬರಾಜಿಗೆ‌ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ.

ಹಾಪ್ ಕಾಮ್ಸ್ ನಲ್ಲಿ ಟೊಮೊಟೊ, ದ್ರಾಕ್ಷಿ, ಕಲ್ಲಂಗಡಿ ಹಾಗೂ ಕೋಳಿ ಮೊಟ್ಟೆ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ರೈಲುಗಳ ಮೂಲಕ ಹೊರ ರಾಜ್ಯಗಳಿಗೆ ಹಣ್ಣು ಹಂಪಲು ತರಕಾರಿ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.

27 ರೇಷ್ಮೆ ‌ಮಾರುಕಟ್ಟೆ ತೆಗೆಯಲು ಸೂಚಿಸಲಾಗಿದ್ದು ಅಕ್ಕಿ ಗಿರಣಿ ಆರಂಭಿಸಲು ಆದೇಶಿಸಲಾಗಿದೆ.ಚೆಕ್ ಪೋಸ್ಟ್ ಗಳಲ್ಲಿ ಸರಕು ಸಾಗಣೆ ವಾಹನಗಳ ಓಡಾಟಕ್ಕೆ ಯಾವುದೇ ಅಡ್ಡಿಯಿಲ್ಲ.‌ ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ‌ ಎಂದೂ ಹೇಳಿದರು.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಮುಖ್ಯಾಂಶಗಳು

1. ಕರ್ನಾಟಕದಿಂದ ಟೊಮ್ಯಾಟೋ, ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ನಿಂಬೆ ಮೊದಲಾದ ಹಣ್ಣು ತರಕಾರಿಗಳು ದೊಡ್ಡ ಪ್ರಮಾಣದಲ್ಲಿ ಹೊರ ರಾಜ್ಯಗಳಿಗೆ ರಫ್ತಾಗುತ್ತಿತ್ತು. ಈಗ ಬೇಡಿಕೆ ಕುಸಿದಿದೆ.
2. ಈ ನಿಟ್ಟಿನಲ್ಲಿ ಈ ಅವಶ್ಯಕ ವಸ್ತುಗಳ ಸಾಗಾಣಿಕೆಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಕ್ರಮ ವಹಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ.
3. ಜೊತೆಗೆ ಟೊಮ್ಯಾಟೋ ಸಂಸ್ಕರಣಾ ಘಟಕಗಳ ಮೂಲಕ ಕೆಚಪ್ ತಯಾರಿಕೆ ಮಾಡಲು ಸೂಚಿಸಲಾಗಿದೆ.
4. ಹಾಪ್‍ಕಾಮ್ಸ್ ಮೂಲಕವೂ ತರಕಾರಿ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ವಾಹನಗಳ ಮೂಲಕ ಪೂರೈಕೆಗೆ ಕೂಡ ಕ್ರಮ ವಹಿಸಲಾಗಿದೆ. ಇದರಿಂದ ಗ್ರಾಹಕರಿಗೂ ಸೂಕ್ತ ದರದಲ್ಲಿ ಹಣ್ಣು ತರಕಾರಿ ಲಭ್ಯವಾಗುವಂತೆ ಮಾಡಲಾಗಿದೆ.
5. ಹಾಪ್‍ಕಾಮ್ಸ್‍ನಲ್ಲಿ ಮೊಟ್ಟೆ ಮಾರಾಟಕ್ಕೆ ಸಹ ವ್ಯವಸ್ಥೆ ಮಾಡಲಾಗಿದೆ.


6. ಹಣ್ಣು ತರಕಾರಿ ದಿನಸಿ ಮತ್ತಿತರ ಅಗತ್ಯ ವಸ್ತುಗಳ ಅಂಗಡಿಗಳು ದಿನವಿಡೀ ತೆರೆದಿಡಲು ಸೂಚಿಸಲಾಗಿದೆ. ಆದರೆ ಖರೀದಿದಾರರು ಸಾಮಾಜಿಕ ಅಂತರ ಕಾಯ್ದುಕೊಂಡು ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ಅಗತ್ಯ ವಸ್ತು ಖರೀದಿಸುವಂತೆ ಸೂಚಿಸಲಾಗಿದೆ.
7. ರೈಲುಗಳ ಮೂಲಕ ಹೊರ ರಾಜ್ಯಗಳಿಗೆ ಹಣ್ಣು-ತರಕಾರಿ ಮೊದಲಾದ ವಸ್ತುಗಳ ಮಾರಾಟಕ್ಕೆ ಅನುವು ಮಾಡಿಕೊಡಲಾಗುವುದು.
8. ವೈನರಿಗಳಲ್ಲಿ ಉತ್ಪಾದನೆ ಮುಂದುವರಿಸಲು ಕ್ರಮ ವಹಿಸಲು ಸೂಚಿಸಲಾಗಿದೆ.
9. ಮಾರುಕಟ್ಟೆಗಳಲ್ಲಿ ದಾಸ್ತಾನು ಕೊರತೆ ಇಲ್ಲ. ಆದ್ದರಿಂದ ಜನರು ವದಂತಿಗಳಿಗೆ ಕಿವಿಗೊಡಬಾರದು.
10. ಲಾಕ್‍ಡೌನ್ ಹಿನ್ನೆಲೆಯಲ್ಲಿ ದಿನಸಿ ಮತ್ತು ತರಕಾರಿಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ಪರವಾನಿಗೆ ರದ್ದು ಮಾಡಲಾಗುವುದು.


11. ಅಡುಗೆ ಎಣ್ಣೆ ದಾಸ್ತಾನು ಲಭ್ಯವಿದ್ದು, ಪ್ಯಾಕೇಜಿಂಗ್ ವ್ಯವಸ್ಥೆ ಮಾಡಿ ಪೂರೈಕೆಗೆ ಕ್ರಮ ವಹಿಸಲು ಸೂಚಿಸಲಾಗಿದೆ.
12. ಬೆಳೆ ಕಟಾವಿಗೆ ನೆರೆಯ ರಾಜ್ಯಗಳಿಂದ ಕಟಾವು ಯಂತ್ರಗಳನ್ನು ತರಿಸಿ, ಕಟಾವಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಮುಂದಿನ ತಿಂಗಳಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಬಿತ್ತನೆಯಾಗಲಿದ್ದು, ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಲಭ್ಯವಿದೆ.
13. 27 ರೇಷ್ಮೆ ಮಾರುಕಟ್ಟೆ ತೆರೆಯಲು ಕ್ರಮ ವಹಿಸಲಾಗಿದೆ. ಇನ್ನು 14 ಮಾರುಕಟ್ಟೆಗಳಲ್ಲಿ ತಂಡಗಳನ್ನು ರಚಿಸಿ, ರೀಲರು ರೈತರನ್ನು ನೇರವಾಗಿ ಸಂಪರ್ಕ ಕಲ್ಪಿಸುವಂತೆ ಸೂಚಿಸಲಾಗಿದೆ. ಆದರೆ ಏಜೆಂಟರನ್ನು ಮನೆಗೆ ಕಳುಹಿಸಿ ಕಡಿಮೆ ದರಕ್ಕೆ ಖರೀದಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ರೇಷ್ಮೆ ಮಾರುಕಟ್ಟೆಯನ್ನು ತೆರೆಯಲು ಸೂಚನೆ ನೀಡಲಾಗಿದೆ.
14. ಅಕ್ಕಿ ಮಿಲ್‍ಗಳನ್ನು ಪ್ರಾರಂಭಿಸಲು ಸೂಚನೆ ನೀಡಲಾಗಿದೆ.
15. ಕೆಎಂಎಫ್ ಮೂಲಕ 69 ಲಕ್ಷ ಲೀಟರ್ ಹಾಲು ಖರೀದಿಯಾಗುತ್ತಿದ್ದು, 42 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. 7.5 ಲಕ್ಷ ಲೀಟರ್ ಹಾಲು ಉಳಿತಾಯವಾಗುತ್ತಿದೆ. ಇದನ್ನು ಲಾಕ್‍ಡೌನ್ ಮುಗಿಯುವ ವರೆಗೆ ಸರ್ಕಾರವೇ ಖರೀದಿಸಿ ಅಧಿಸೂಚಿಸಿದ ಕೊಳೆಗೇರಿಗಳು ಮತ್ತು ಕಾರ್ಮಿಕರ ಬಡಾವಣೆಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಉಚಿತವಾಗಿ ವಿತರಿಸಲು ಕ್ರಮ ವಹಿಸಲಾಗುವುದು.
16. ಅಗತ್ಯ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ವ್ಯಾಪಾರಿಗಳು ಸಂಕಷ್ಟದ ಅವಧಿಯನ್ನು ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ಇಂತಹ ಅಕ್ರಮಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ.
17. ಲಾಕ್‍ಡೌನ್‍ನಿಂದ ನಗರದಲ್ಲಿ ಸಿಲುಕಿಕೊಂಡಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಿಲ್ಡರುಗಳೇ ಊಟ, ವಸತಿ ವ್ಯವಸ್ಥೆ ಒದಗಿಸುವಂತೆ ಸೂಚಿಸಲಾಗುವುದು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಆರ್. ಅಶೋಕ್, ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ನಾರಾಯಣಗೌಡ, ಕೆ. ಗೋಪಾಲಯ್ಯ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT