ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ದಕ್ಷಿಣ: ‘ಅನಂತ’ ಛಾಯೆ ಮಧ್ಯೆ ಕೈ– ಕಮಲ ಫೈಟ್

‘ಹಿಂದುತ್ವ’ದ ಪ್ರತಿಪಾದನೆಗೆ ‘ಜಾತ್ಯತೀತ’ರ ಸವಾಲು
Last Updated 30 ಏಪ್ರಿಲ್ 2019, 13:54 IST
ಅಕ್ಷರ ಗಾತ್ರ

ಬೆಂಗಳೂರು: ಒಡಲಲ್ಲಿ ಹೆಸರಾಂತ ಬಡಾವಣೆಗಳು, ಗಣನೀಯ ಸಂಖ್ಯೆಯಲ್ಲಿ ಪ್ರಬುದ್ಧ ಮತದಾರರನ್ನು ಇಟ್ಟುಕೊಂಡ ಕ್ಷೇತ್ರ ಬೆಂಗಳೂರು ದಕ್ಷಿಣ. 1991ರಲ್ಲಿ ಬಿಜೆಪಿಯಿಂದ ವೆಂಕಟಗಿರಿ ಗೌಡ ಮೊದಲ ಬಾರಿಗೆ ಇಲ್ಲಿಂದ ಆರಿಸಿ ಬಂದಿದ್ದರು. ಅಲ್ಲಿಂದೀಚೆಗೆ ಈ ಕ್ಷೇತ್ರ ಕಮಲ ಪಕ್ಷದ ಭದ್ರಕೋಟೆಯಾಗಿ ಬದಲಾಗಿದೆ. 1996ರಿಂದ ಅನಂತಕುಮಾರ್‌ ಅವರನ್ನು ನಿರಂತರ ಗೆಲ್ಲಿಸುತ್ತಲೇ ಬಂದಿದ್ದ ಮತದಾರರಿಗೆ, ಈ ಬಾರಿ ಅವರ ಅನುಪಸ್ಥಿತಿ ಕಾಡುತ್ತಿದೆ. ಅಷ್ಟರಮಟ್ಟಿಗೆ ಇಲ್ಲಿ ‘ಅನಂತ’ ಪ್ರಭಾವವಿದೆ.

2009ರಲ್ಲಿ ಕೃಷ್ಣ ಬೈರೇಗೌಡರ ವಿರುದ್ದದ ಪೈಪೋಟಿಯಲ್ಲಿ ಕಡಿಮೆ ಅಂತರದಲ್ಲಿ ಅನಂತಕುಮಾರ್‌ ಗೆಲುವಿನ ದಡ ಸೇರಿದ್ದರು. ಈ ಕಾರಣಕ್ಕೆ 2014ರಲ್ಲಿ ಇನ್ಫೊಸಿಸ್‌ ಸಹಸಂಸ್ಥಾಪಕರಲ್ಲಿ ಒಬ್ಬರಾಗಿದ್ದ, ಭಾರತೀಯ ವಿಶೇಷ ಗುರುತಿನ ಪ್ರಾಧಿಕಾರ (ಯುಐಡಿಎಐ) ಅಧ್ಯಕ್ಷರೂ ಆಗಿದ್ದ ನಂದನ್‌ ನಿಲೇಕಣಿ ಅವರನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್‌, ಗೆಲುವಿನ ಕನಸು ಕಂಡಿತ್ತು. ಈ ‘ಕದನ ಕುತೂಹಲ’ ಇಡೀ ದೇಶದ ಗಮನವನ್ನೂ ಸೆಳೆದಿತ್ತು. ಆದರೆ, ಸುನಾಮಿಯಂತೆ ಎರಗಿದ ಮೋದಿ ಅಲೆಯಲ್ಲಿ ಕಾಂಗ್ರೆಸ್‌ನ ತಂತ್ರಗಾರಿಕೆ ಕೊಚ್ಚಿಹೋಗಿತ್ತು. 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಅನಂತಕುಮಾರ್‌, ಆರನೇ ಬಾರಿ ಲೋಕಸಭೆ ಪ್ರವೇಶಿಸಿದ್ದರು.

ಅನಂತಕುಮಾರ್‌ ‘ಉತ್ತರಾಧಿಕಾರಿ’ಯಾಗಿ ಅವರ ಪತ್ನಿ ತೇಜಸ್ವಿನಿ ಅವರಿಗೆ ಬಿಜೆಪಿ ಮಣೆ ಹಾಕಲಿದೆ ಎಂದೇ ಭಾವಿಸಲಾಗಿತ್ತು. ಅನುಕಂಪದ ನೆಲೆಯಲ್ಲಿ ಅವರ ಅಭಿಮಾನಿಗಳೂ ಅದನ್ನೇ ನಿರೀಕ್ಷಿಸಿದ್ದರು. ಅದಕ್ಕೆ ‍ಪೂರಕವಾದ ರಾಜಕೀಯ ಬೆಳವಣಿಗೆಗಳೂ ನಡೆದಿದ್ದವು. ಆದರೆ, ಬಿಜೆಪಿ ವರಿಷ್ಠರ ಅಂತಿಮ ಕ್ಷಣದ ಲೆಕ್ಕಾಚಾರ ಅವರಿಗೆ ಟಿಕೆಟ್‌ ತಪ್ಪುವಂತೆ ಮಾಡಿದೆ. ಅವರ ಬದಲು, ಅನಂತಕುಮಾರ್‌ ಗರಡಿಯಲ್ಲೇ ಬೆಳೆದ, ಹಿಂದುತ್ವದ ಪ್ರಖರ ಪ್ರತಿಪಾದಕ, ಇಪ್ಪತ್ತೆಂಟರ ಹರೆಯದ ಹೊಸಮುಖ ತೇಜಸ್ವಿ ಸೂರ್ಯ ಅವರಿಗೆ ಕಣಕ್ಕಿಳಿಯುವ ಅವಕಾಶ ಸಿಕ್ಕಿದೆ. ತೇಜಸ್ವಿ ಬಸವನಗುಡಿಯ ಶಾಸಕ ಎಲ್‌.ಎ. ರವಿಸುಬ್ರಹ್ಮಣ್ಯ ಅವರ ಅಣ್ಣನ ಮಗ. ಎಬಿವಿಪಿ ರಾಜ್ಯ ಕಾರ್ಯದರ್ಶಿಯಾಗಿದ್ದವರು. ಪ್ರಸ್ತುತ ಬಿಜೆಪಿ ರಾಜ್ಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ. ಆದರೆ, ತೇಜಸ್ವಿಗೆ ಟಿಕೆಟ್‌ ನೀಡಿದ್ದು ಕ್ಷೇತ್ರ ವ್ಯಾಪ್ತಿಯ ಶಾಸಕರೂ ಆಗಿರುವ ಆರ್‌.ಅಶೋಕ್ ಮತ್ತು ವಿ.ಸೋಮಣ್ಣ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ರೋಡ್‌ ಶೋಗೆ ಎಲ್ಲರೂ ಹಾಜರಾಗುವಂತೆ ಮಾಡುವ ಮೂಲಕ ಅಮಿತ್‌ ಶಾ ಪಕ್ಷದೊಳಗಿನ ಅತೃಪ್ತಿಯನ್ನು ಸ್ವಲ್ಪಮಟ್ಟಿಗೆ ತಣಿಸಿದ್ದಾರೆ.

ಆದರೆ, ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಈ ಬಾರಿ ಸಮರ್ಥ ಅಭ್ಯರ್ಥಿಗಳೇ ಇಲ್ಲ ಎಂಬ ಮಾತು ನಾಮಪತ್ರ ಸಲ್ಲಿಕೆಯ ಹಿಂದಿನ ದಿನದವರೆಗೂ ಕೇಳಿಬಂದಿತ್ತು. ಸ್ಪರ್ಧಿಸಲು ನಿರಾಕರಿಸಿದ್ದ ಬಿಟಿಎಂ ಲೇಔಟ್‌ ಶಾಸಕ ರಾಮಲಿಂಗಾ ರೆಡ್ಡಿ ಮತ್ತು ಗೋವಿಂದರಾಜನಗರದ ಮಾಜಿ ಶಾಸಕ ಪ್ರಿಯಕೃಷ್ಣ ಹೆಸರನ್ನು ರಾಜ್ಯ ಕಾಂಗ್ರೆಸ್‌ ನಾಯಕರು ತಮ್ಮ ವರಿಷ್ಠರಿಗೆ ಶಿಫಾರಸು ಮಾಡಿದ್ದರು. ಆದರೆ, ಬೆಂಗಳೂರು ಕೇಂದ್ರ ಅಥವಾ ದಕ್ಷಿಣ ಕನ್ನಡ ಕ್ಷೇತ್ರದ ಟಿಕೆಟ್‌ಗಾಗಿ ದುಂಬಾಲು ಬಿದ್ದಿದ್ದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಅವರನ್ನು ಅಖಾಡ ಕ್ಕಿಳಿಸುವ ಮೂಲಕ ಕಾಂಗ್ರೆಸ್‌ ಅಚ್ಚರಿ ಮೂಡಿಸಿದೆ. ರಾಷ್ಟ್ರ ರಾಜಕಾರಣದ ಆಳ– ಅಗಲವನ್ನು ಅರೆದು ಕುಡಿದಿರುವ ಹರಿಪ್ರಸಾದ್‌, ಎರಡು ದಶಕಗಳ (1999ರಲ್ಲಿ) ಹಿಂದೆ ಅನಂತಕುಮಾರ್‌ ಅವರಿಗೆ ಸೆಡ್ಡು ಹೊಡೆದಿದ್ದರು ಎಂದು ನೆನಪಿಗೆ ಬಂದುದು ಆಗಲೇ!

ಕ್ಷೇತ್ರದಲ್ಲಿ ಕೈ– ಕಮಲ ಚುನಾವಣಾ ಪ್ರಚಾರ ಭರಾಟೆಯ ನಡುವೆಯೂ ‘ಅನಂತ’ ಛಾಯೆ ದಟ್ಟವಾಗಿದೆ. ಆ ನೆರಳಿನಡಿಯಲ್ಲೇ ಮತದಾರರ ಕದ ತಟ್ಟುತ್ತಿದ್ದಾರೆ ತೇಜಸ್ವಿ‌. ಮೋದಿ– ಶಾ ಜೋಡಿಯ ಆಯ್ಕೆ ತಾನೆಂಬ ಸಕಾರಾತ್ಮಕ ಅಂಶದ ಜೊತೆಗೆ ಅನಂತಕುಮಾರ್‌ ಹಾದಿಯನ್ನು ಮೆಲುಕು ಹಾಕುತ್ತಲೇ ಸುತ್ತಾಡುತ್ತಿರುವ ತೇಜಸ್ವಿ, ಮೋದಿ ತೇಲಿ ಬಿಟ್ಟಿರುವ ರಾಷ್ಟ್ರೀಯತೆ, ಭಾವನಾತ್ಮಕ ವಿಚಾರಗಳಿಗೆ ಧ್ವನಿಯಾಗುತ್ತಿದ್ದಾರೆ. ಸಾಂಪ್ರದಾಯಿಕ ಮತಗಳು ‘ಕೈ’ಕೊಡುವುದಿಲ್ಲ ಎನ್ನುವ ಅಚಲ ನಂಬಿಕೆ ಬಿಜೆಪಿ
ಯವರದ್ದು.

ಆದರೆ, ಪ್ರತಿಸ್ಪರ್ಧಿ ಹರಿಪ್ರಸಾದ್‌, ಸೋಲರಿಯದ ಸರದಾರನಿಲ್ಲದ (ಅನಂತಕುಮಾರ್‌) ನೆಲದಲ್ಲಿ ಎದ್ದಿರುವ ಭಿನ್ನಾಭಿಪ್ರಾಯದ ಲಾಭ ಪಡೆಯಲು ಹೊರಟಿದ್ದಾರೆ. ಅಷ್ಟೇ ಅಲ್ಲ; ಕೊಟ್ಟ ಭರವಸೆಗಳನ್ನು ಈಡೇರಿಸದೆ ‘ಮತ್ತೊಮ್ಮೆ ಮೋದಿ’ ಎಂದು ಮತ ಕೇಳುವ ಬಿಜೆಪಿಯ ಆಡಳಿತ ವೈಫಲ್ಯಗಳನ್ನು ಕೆದಕಿ ಸುಶಿಕ್ಷಿತರನ್ನು ಸೆಳೆಯಲು ಮುಂದಾಗಿದ್ದಾರೆ.

ಈ ಹಿಂದಿನ ಪ್ರತಿ ಚುನಾವಣೆಯಲ್ಲಿ ಅನಂತಕುಮಾರ್ ಪರ ಕಾಣದ ‘ಕೈ’ಗಳು ಕೆಲಸ ಮಾಡಿದ್ದವು. ಕ್ಷೇತ್ರ ವ್ಯಾಪ್ತಿಯಲ್ಲಿ ಅವರು ಅಷ್ಟರಮಟ್ಟಿನ ‘ರಾಜಕೀಯ ಬಾಂಧವ್ಯ’ ಹೊಂದಿದ್ದರು ಎನ್ನುವುದು ಬಹಿರಂಗ ಸತ್ಯ. ಮೇಲೋಟಕ್ಕೆ ಈ ಬಾರಿ ಆ ‘ಕೈ’ಗಳೆಲ್ಲ ಹರಿಪ್ರಸಾದ್‌ ಬೆನ್ನಿಗಿವೆ. ತೇಜಸ್ವಿನಿ ಕಣದಲ್ಲಿ ಇಲ್ಲದೇ ಇರುವುದರಿಂದ ಅನುಕಂಪದ ಅಲೆ ಎದುರಿಸುವ ಆತಂಕವೂ ಇಲ್ಲ. ಅಷ್ಟೇ ಅಲ್ಲ, ಅನಂತ ಬೆಂಬಲಿಗರ ಅಸಹನೆ ಕೂಡಾ ಬದಲಾವಣೆಯ ಪರ್ವಕ್ಕೆ ದಾರಿ ಮಾಡಿಕೊಡಬಹುದು. ಈ ಕಾರಣಕ್ಕೆ ಹರಿಪ್ರಸಾದ್‌ ಪ್ರಚಾರದಲ್ಲಿ ಎಲ್ಲೂ ಅನಂತಕುಮಾರ್‌ ಬಗ್ಗೆ ಚಕಾರ ಎತ್ತುತ್ತಿಲ್ಲ. ಜೆಡಿಎಸ್‌ ಮತಗಳೂ ‘ಕೈ’ ಹಿಡಿಯಬಹುದೆಂಬ ನಿರೀಕ್ಷೆ ಕಾಂಗ್ರೆಸ್ಸಿಗರದ್ದು.

ಅಹಿಂದ ಪ್ರಾಬಲ್ಯ ಇದ್ದರೂ ಬ್ರಾಹ್ಮಣ– ಒಕ್ಕಲಿಗ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿರುವ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಮೂಲಸೌಲಭ್ಯದ ಕೊರತೆ ಇಲ್ಲ. ‘ನಮ್ಮ ಮೆಟ್ರೊ’ ಬಂದ ಬಳಿಕ ಸಂಚಾರ ದಟ್ಟಣೆಯೂ ಕಡಿಮೆಯಾಗಿದೆ. ಆದರೆ, ಜಯನಗರ, ಬಿಟಿಎಂ ಲೇಔಟ್‌, ಬಸವನಗುಡಿ, ವಿಜಯನಗರ ಭಾಗದಲ್ಲಿ ಪಾರ್ಕಿಂಗ್‌ ಸಮಸ್ಯೆ ಇದೆ. ಹೆಸರಿಗೆ ತಕ್ಕಂತೆ ಕಿರಿದಾದ ರಸ್ತೆಗಳ ಚಿಕ್ಕಪೇಟೆಯಲ್ಲಿ ದಟ್ಟಣೆ, ಪಾರ್ಕಿಂಗ್‌ ಸಮಸ್ಯೆ ಮಾಮೂಲಾಗಿದೆ. ಕೊಳೆಗೇರಿ ಮತ್ತು ಸುಸಜ್ಜಿತ ಬಡಾವಣೆಗಳನ್ನು ಹೊಂದಿರುವ ಬಿಟಿಎಂ ಲೇಔಟ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.

*
ಮೋದಿ ವಿರುದ್ಧದ ಸಿಟ್ಟು ಒಳಪ್ರವಾಹ ವಾಗಿ ಹರಿಯುತ್ತಿದೆ. ಜಿಎಸ್‌ಟಿ, ನೋಟು ರದ್ದತಿಯಿಂದ ಜನ ಪರಿತಪಿಸು ತ್ತಿದ್ದಾರೆ. ಸವಾಲು ಇದ್ದರೂ, ದಾರಿ ಸುಗಮವಾಗಿದೆ.
-ಬಿ.ಕೆ. ಹರಿಪ್ರಸಾದ್‌, ಕಾಂಗ್ರೆಸ್‌ ಅಭ್ಯರ್ಥಿ

*
ಮೋದಿ ಸರ್ಕಾರದಲ್ಲಿ ಸೃಷ್ಟಿಯಾದಷ್ಟು ಉದ್ಯೋಗ ಹಿಂದಿನ ಯಾವ ಸರ್ಕಾರದ ಅವಧಿಯಲ್ಲೂ ಸೃಷ್ಟಿ ಆಗಿರಲಿಲ್ಲ. ಬಡತನ ನಿರ್ಮೂಲನೆ ಹಿಂದುತ್ವದ ಭಾಗ ಎನ್ನುವುದು ನನ್ನ ನಂಬಿಕೆ.
-ತೇಜಸ್ವಿ ಸೂರ್ಯ, ಬಿಜೆಪಿ ಅಭ್ಯರ್ಥಿ

*
ಭ್ರಷ್ಟಾಚಾರ ತೊಲಗಿಸುವ, ಅಭಿವೃದ್ಧಿ, ಭದ್ರತೆ ಚಿಂತನೆಯ ಕಾರ್ಯಸೂಚಿ, ಬದ್ಧತೆ ಹೊಂದಿರುವವರ ಕೈಯಲ್ಲಿ ದೇಶದ ಆಡಳಿತ ಚುಕ್ಕಾಣಿ ನೀಡಬೇಕಿದೆ.
-ಶಕೀಲಾ ಶೆಟ್ಟಿ, ಸಮಾಜ ಸೇವಕಿ, ಗೋವಿಂದರಾಜ ನಗರ

*
ಭಯೋತ್ಪಾದನೆ ಮಟ್ಟಹಾಕಿ ದೇಶದ ಹಿತಾಸಕ್ತಿ ಕಾಪಾಡುವುದು ನಾಯಕತ್ವ ವಹಿಸುವವರ ಮುಂದಿರುವ ಸವಾಲು. ಹೀಗಾಗಿ, ಎಲ್ಲರನ್ನೂ ಜೊತೆಗೆ ತೆಗೆದುಕೊಳ್ಳುವ ರಾಜಕೀಯ ಅಗತ್ಯ.
-ನಾಗರಾಜ ಎಂ.ಪಿ, ಉದ್ಯಮಿ, ಚಂದ್ರಾ ಲೇಔಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT