ಮೀನುಗಾರರು ಬದುಕುಳಿಯುವ ಯಾವುದೇ ಅವಕಾಶಗಳಿಲ್ಲ: ರಘುಪತಿ ಭಟ್

ಬುಧವಾರ, ಮೇ 22, 2019
29 °C
‘ಸುವರ್ಣ ತ್ರಿಭುಜ’ ದೋಣಿಯ ಶೋಧ ಕಾರ್ಯಾಚರಣೆ ವೀಕ್ಷಿಸಿದ ಉಡುಪಿ ಶಾಸಕರಿಂದ ಮಾಹಿತಿ

ಮೀನುಗಾರರು ಬದುಕುಳಿಯುವ ಯಾವುದೇ ಅವಕಾಶಗಳಿಲ್ಲ: ರಘುಪತಿ ಭಟ್

Published:
Updated:
Prajavani

ಕಾರವಾರ: ‘ಸಮುದ್ರದಲ್ಲಿ ಮುಳುಗಿರುವ ಮೀನುಗಾರಿಕಾ ದೋಣಿ ಸುವರ್ಣ ತ್ರಿಭುಜದಲ್ಲಿದ್ದ ಮೀನುಗಾರರು ಬದುಕುಳಿಯುವ ಯಾವುದೇ ಅವಕಾಶಗಳೂ ಅಲ್ಲಿಲ್ಲ. ದೋಣಿಯಲ್ಲಿದ್ದ ಏಳೂ ಮೀನುಗಾರರ ಕುಟುಂಬಗಳಿಗೆ ದೊಡ್ಡ ರೀತಿಯ ಪರಿಹಾರ ನೀಡುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮತ್ತೊಮ್ಮೆ ಭೇಟಿ ಮಾಡಿ ಮನವಿ ಮಾಡಲಿದ್ದೇವೆ’ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ನಾಪತ್ತೆಯಾದ ದೋಣಿಯ ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅವರು, ಇಲ್ಲಿನ ಸೀಬರ್ಡ್ ನೌಕಾನೆಲೆಗೆ ಶುಕ್ರವಾರ ಬೆಳಿಗ್ಗೆ ವಾಪಸಾಗಿ ಸುದ್ದಿಗಾರರ ಜತೆ ಮಾತನಾಡಿದರು. 

‘ಸುವರ್ಣ ತ್ರಿಭುಜ ದೋಣಿಯ ಅವಶೇಷಗಳು ಬುಧವಾರ ಪತ್ತೆಯಾಗಿವೆ. ಕಾರ್ಯಾಚರಣೆಯನ್ನು ವೀಕ್ಷಿಸಲು ನನ್ನನ್ನು ಹಾಗೂ ಮೀನುಗಾರರ ಒಂಬತ್ತು ಮಂದಿ ಮುಖಂಡರನ್ನು ನೌಕಾಪಡೆಯ ಅಧಿಕಾರಿಗಳು ಭಾನುವಾರ ರಾತ್ರಿ ಕರೆದುಕೊಂಡು ಹೋಗಿದ್ದರು. ಸುಮಾರು ಐದು ದಿನ ಸಮುದ್ರದಲ್ಲಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ನೌಕಾಪಡೆಯ ನುರಿತ ಕ್ಯಾಪ್ಟನ್‌ಗಳ ಸಮ್ಮುಖದಲ್ಲಿ, ಶಬ್ದದ ಕಂಪನ ಆಧರಿಸಿದ ಸೋನಾರ್ ತಂತ್ರಜ್ಞಾನ ಬಳಸಿ ಶೋಧ ಕಾರ್ಯ ನಡೆಸಲಾಯಿತು’ ಎಂದರು. 

‘ಇಡೀ ಕಾರ್ಯಾಚರಣೆಯ ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ದೋಣಿಯ ಅವಶೇಷಗಳನ್ನು ನಾವು ಸ್ವತಃ ನೋಡಿದ್ದೇವೆ. ಅವು ಕಂಡಲ್ಲೇ ನಾವಿದ್ದ ದೋಣಿಯನ್ನು ನಿಲ್ಲಿಸಿ ನೌಕಾಪಡೆಯ ಮುಳುಗು ತಜ್ಞರನ್ನು ಕೆಳಗಿಳಿಸಲಾಯಿತು. ಮೀನುಗಾರರ ಸಮ್ಮುಖದಲ್ಲೇ ಹುಡುಕಾಟ ಮಾಡಿದ್ದರಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ. ನಾಗರಿಕರಿಗೆ ಇದೇ ಮೊದಲ ಬಾರಿಗೆ ನೌಕಾನೆಲೆಯ ದೋಣಿಯಲ್ಲಿ ಹೋಗುವ ಅವಕಾಶ ನೀಡಿದ್ದರಿಂದ ಸುವರ್ಣ ತ್ರಿಭುಜ ದೋಣಿ ಪತ್ತೆಯಾಯಿತು. ಇದಕ್ಕೆ ನೌಕಾನೆಲೆಯ ಎಲ್ಲ ಅಧಿಕಾರಿಗಳಿಗೆ, ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು ಸಲ್ಲಬೇಕು’ ಎಂದು ಹೇಳಿದರು.

ಇದನ್ನೂ ಓದಿ: ಮಲ್ಪೆಯಿಂದ ನಾಪತ್ತೆಯಾಗಿದ್ದ ಮೀನುಗಾರಿಕಾ ದೋಣಿಯ ಅವಶೇಷ ಪತ್ತೆ

ಉಡುಪಿ ಜಿಲ್ಲೆ ಮಲ್ಪೆ ಬಂದರಿನಿಂದ ಡಿ.15ರಂದು ಆಳಸಮುದ್ರ ಮೀನುಗಾರಿಕೆಗೆ ಹೊರಟಿದ್ದ ದೋಣಿಯಲ್ಲಿ ಉತ್ತರ ಕನ್ನಡದ ಐವರು ಹಾಗೂ ಉಡುಪಿಯ ಇಬ್ಬರು ಮೀನುಗಾರರಿದ್ದರು. ಮಹಾರಾಷ್ಟ್ರದ ಸಿಂಧುದುರ್ಗಾ ಜಿಲ್ಲೆಯ ತೀರದ ಸಮೀಪದಿಂದ ದೋಣಿಯು ಮೀನುಗಾರರ ಸಹಿತ ನಿಗೂಢ ರೀತಿಯಲ್ಲಿ ಕಾಣೆಯಾಗಿತ್ತು. ಪೊಲೀಸ್‌, ಕರಾವಳಿ ಕಾವಲು ಪಡೆ ಮತ್ತು ನೌಕಾಸೇನೆಯಿಂದ ಸಾಕಷ್ಟು ಶೋಧನೆ ನಡೆದರೂ ಪತ್ತೆಯಾಗಿರಲಿಲ್ಲ. ಇದು ಅದರಲ್ಲಿದ್ದವರ ಕುಟುಂಬದ ಸದಸ್ಯರು ಮತ್ತು ಇತರ ಮೀನುಗಾರರ ಆತಂಕಕ್ಕೆ ಕಾರಣವಾಗಿತ್ತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 4

  Sad
 • 1

  Frustrated
 • 1

  Angry

Comments:

0 comments

Write the first review for this !