ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡುವ ಊಟ ಸಾಲುತ್ತಿಲ್ಲ: ಕಾರ್ಮಿಕರ ಅಸಮಾಧಾನ

Last Updated 8 ಏಪ್ರಿಲ್ 2020, 20:18 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕರಿಗೆ ನೀಡಲಾಗುತ್ತಿರುವ ಊಟ ಅರೆ ಹೊಟ್ಟೆಗೂ ಸಾಲುತ್ತಿಲ್ಲ ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರಮಜೀವಿಗಳಾದ ಅಸಂಘಟಿತ ಕಾರ್ಮಿಕರು ಹೆಚ್ಚು ಪ್ರಮಾಣದ ಊಟ ಸೇವಿಸುತ್ತಾರೆ. ಆದರೆ, ಕಾರ್ಮಿಕ ಇಲಾಖೆ ಪೂರೈಸುತ್ತಿರುವ ಆಹಾರ 200 ರಿಂದ 300 ಗ್ರಾಂ ಮಾತ್ರವೇ ಇದೆ. ಹೀಗಾಗಿ ಅರೆ ಹೊಟ್ಟೆಯಲ್ಲಿರಬೇಕಿದೆ ಎಂದು ಅಳಲು ತೋಡಿಕೊಂಡರು.

‘ನಿನ್ನೆ ಬಿಸಿಬೇಳೆ ಬಾತ್ ಕೊಟ್ಟಿದ್ದರು. ಅದು ನೀರಿನಂತೆ ತೆಳ್ಳಗೆ ಇತ್ತು. ನಾವು ದುಡಿಯುವ ಜನ. ಹೆಚ್ಚು ತಿನ್ನುತ್ತೇವೆ. ಒಂದು ಮುಷ್ಟಿಯಷ್ಟು ಅನ್ನ ಕೊಟ್ಟರೆ ಸಾಲುತ್ತದೆಯೇ’ ಎಂದು ಹೊಸೂರು ರಸ್ತೆ ಗಾರ್ವೆಬಾವಿಪಾಳ್ಯದ ಲಕ್ಷ್ಮಿ ಬಡಾವಣೆಯ ಕಟ್ಟಡ ನಿರ್ಮಾಣ ಕಾರ್ಮಿಕ ಸುರೇಶ್ ಬೇಸರ ವ್ಯಕ್ತಪಡಿಸಿದರು.

ಮಂಗಮ್ಮನಪಾಳ್ಯ ವಾರ್ಡ್‌ಗೆ ಕೇವಲ 400 ಪ್ಯಾಕೆಟ್ ಆಹಾರ ನೀಡಲಾಗುತ್ತಿದೆ. ಆದರೆ, ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಟ್ಟಡ ಕಾರ್ಮಿಕರಿದ್ದಾರೆ. ಅದರಲ್ಲೂ ವಲಸಿಗರು ಹೆಚ್ಚಿದ್ದಾರೆ. ಕಾರ್ಮಿಕರು ಇರುವ ಸ್ಥಳಕ್ಕೆ ಊಟ ತೆಗೆದುಕೊಂಡು ಹೋಗಲು ವಾಹನ ವ್ಯವಸ್ಥೆಯನ್ನೂ ಮಾಡಿಲ್ಲ. ನಮ್ಮ ಸ್ವಂತ ವಾಹನ ಬಳಸಿ ನೀಡುತ್ತಿದ್ದೇವೆ’ ಎಂದು ಕಾರ್ಮಿಕ ಸಂಘಟನೆಯಿಂದ ಕೋವಿಡ್ ಸ್ವಯಂಸೇವಕರಾಗಿರುವ ಎನ್.ದಯಾನಂದ್ ಹೇಳಿದರು.

ಸಿಂಗಸಂದ್ರ ವಾರ್ಡ್‌ನಲ್ಲಿ ದೊಡ್ಡ ಕಂಪನಿಗಳ ಕೆಲಸಗಾರರಿಗೆ ಊಟ ನೀಡುವ ಸಲುವಾಗಿ ನಮಗೆ ಕಡಿಮೆ ನೀಡಲಾಗುತ್ತಿದೆ. ದೊಡ್ಡ ಉದ್ದಿಮೆದಾರರು ತಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಊಟ ಹಾಕದಷ್ಟು ದಿವಾಳಿ ಆಗಿದ್ದಾರೆಯೇ ಎಂದು ಕಾರ್ಮಿಕ ಸಂಘಟನೆಯ ಕೋವಿಡ್ ಸ್ವಯಂಸೇವಕ ಪ್ರದೀಪ್ ಕುಮಾರ್ ಪ್ರಶ್ನಿಸಿದರು.

‘ಹಿರಿಯ ಅಧಿಕಾರಿಗಳ ಸೂಚನೆಯಂತೆ ಕೆಲ ದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆಗಳ ಕಾರ್ಮಿಕರಿಗೆ ಊಟ ನೀಡುತ್ತಿದ್ದೇವೆ’ ಎಂದು ಕಾರ್ಮಿಕ ನಿರೀಕ್ಷಕರೊಬ್ಬರು ಹೇಳಿದರು.

ಕಲ್ಯಾಣ ಮಂಡಳಿಗೆ ಕೋಟ್ಯಂತರ ರೂ. ಸೆಸ್ ಕಟ್ಟುತ್ತೇವೆ. ಹೀಗಾಗಿ ಸರ್ಕಾರವೇ ಅವರಿಗೆ ಊಟ ನೀಡಬೇಕೆಂದು ರಿಯಲ್ ಎಸ್ಟೇಟ್ ಉದ್ದಿಮೆದಾರರು ಒತ್ತಡ ಹೇರಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಸಿದ್ಧ ಆಹಾರವನ್ನು ಸ್ವಿಗ್ಗಿ ಅವರು ತಲುಪಿಸುತ್ತಾರೆ. ದಾಸೋಹ – 2020 ಆ್ಯಪ್ ಮೂಲಕ ಪ್ರಕ್ರಿಯೆ ನಡೆಯುವಂತೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಆ್ಯಪ್ ಇನ್ನೂ ಚಾಲನೆಗೆ ಬಂದಿಲ್ಲ. ಸ್ವಿಗ್ಗಿ ಮೂಲಕ ಆಹಾರ ತಲುಪಿಸುವ ವ್ಯವಸ್ಥೆಯೂ ಆಗುತ್ತಿಲ್ಲ. ಸಂಘಟನೆಗಳ ಸಲಹೆ ತಿರಸ್ಕರಿಸಿ ಬೇಕಾಬಿಟ್ಟಿ ಮಾಡಲಾಗುತ್ತಿದೆ’ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ.ಕೆ.ಪ್ರಕಾಶ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT