ಶನಿವಾರ, ಜನವರಿ 25, 2020
22 °C
ಷೋಕಾಸ್‌ ನೋಟಿಸ್‌ಗೂ ಉತ್ತರ ಇಲ್ಲ

ಪಿಯುಗೆ 5 ವರ್ಷದಿಂದ ಪ್ರವೇಶ ಇಲ್ಲ: 299 ಖಾಸಗಿ ಕಾಲೇಜು ಬಂದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ 3,194 ಅನುದಾನರಹಿತ ಪದವಿಪೂರ್ವ ಕಾಲೇಜುಗಳಿದ್ದು, ಕಳೆದ ಐದು ವರ್ಷಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆಗದೇ ಇರುವುದರಿಂದ 299 ಕಾಲೇಜುಗಳು ಶೀಘ್ರ ಬಂದ್‌ ಆಗಲಿವೆ.

‘ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಕಾಲ ಕಾಲಕ್ಕೆ ಸೂಚನೆ ನೀಡುತ್ತ ಬಂದರೂ ಪಾಲನೆ ಮಾಡದ ಕಾರಣಕ್ಕೆ ಇಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕಳೆದ 5 ವರ್ಷಗಳಲ್ಲಿ ಹೊಸದಾಗಿ ವಿದ್ಯಾರ್ಥಿಗಳು ಪ್ರವೇಶ ಪಡೆಯದ ಕಾಲೇಜುಗಳಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಮೊದಲಿಗೆ ಇವುಗಳ ಮಾನ್ಯತೆ ರದ್ದು ಮಾಡಿ, ಬಳಿಕ ಮಂಜೂರಾತಿ ರದ್ದು ಮಾಡಲಾಗುತ್ತದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಎಂ.ಕನಗವಲ್ಲಿ ತಿಳಿಸಿದ್ದಾರೆ.

ಬಂದ್‌ ಆಗುತ್ತಿರುವುದು ಖಾಸಗಿ ಕಾಲೇಜುಗಳು ಮಾತ್ರ. ಕೆಲವು ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಸಹ ಪ್ರವೇಶಾತಿ ತೀರಾ ಕಡಿಮೆ ಇದೆ. ಆದರೆ, ಅವುಗಳನ್ನು ಮುಚ್ಚುವುದು ಅಷ್ಟು ಸುಲಭವಲ್ಲ. ಅದಕ್ಕೆ ಹಲವಾರು ನಿಯಮಗಳಿವೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಖಾಸಗಿ ಕಾಲೇಜಿಗೂ ನೋಟಿಸ್‌ ಹೋಗಿಲ್ಲ. ನೋಟಿಸ್‌ ನೀಡಲಾದ ಕಾಲೇಜುಗಳು ಉತ್ತರ ನೀಡಿದ್ದೇ ಆದರೆ ಮಾನ್ಯತೆ ರದ್ದು ಮಾಡುವ ಮೊದಲು ಪರಿಶೀಲನೆ ಮಾಡುವುದು ಸಾಧ್ಯವಿದೆ, ಉತ್ತರಿಸದ ಕಾಲೇಜುಗಳ ಮಾನ್ಯತೆ ರದ್ದುಪಡಿಸದೆ ಇಲಾಖೆಗೆ ಬೇರೆ ದಾರಿಯೇ ಇಲ್ಲ, ಹೀಗಾಗಿ ಇಂತಹ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುವ ಮೊದಲು ಪೋಷಕರು ಎಚ್ಚರಿಕೆ ವಹಿಸಬೇಕು ಎಂದರು.*
ಸರ್ಕಾರಿ, ಅನುದಾನಿತ ಕಾಲೇಜುಗಳು ಇರುವಲ್ಲಿ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡದೆ ಇರುವುದೇ ಇಂತಹ ಸಮಸ್ಯೆಗೆ ಇರುವ ಪರಿಹಾರವಾದೀತು
-ಎಂ.ಪಿ.ಕರಬಸಪ್ಪ,ಅಧ್ಯಕ್ಷರು, ಅನುದಾನಿತ ಶಾಲಾ ಕಾಲೇಜು ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟ

*
ನಿಜಕ್ಕೂ ಇದು ಅಪಾಯಕಾರಿ ಬೆಳವಣಿಗೆ, ದೊಡ್ಡ ನು ಸಣ್ಣ ಮೀನನ್ನು ತಿಂದಂತಹ ಸ್ಥಿತಿ. ಶಿಕ್ಷಣ ವ್ಯಾಪಾರೀಕರಣದ ಫಲ ಇದು.

-ತಿಮ್ಮಯ್ಯ ಪುರ್ಲೆಅಧ್ಯಕ್ಷರು, ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು