ಸೋಮವಾರ, ಆಗಸ್ಟ್ 2, 2021
28 °C
ಪರಿಷತ್‌ ಮತ್ತು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ: ಮೂರು ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ

ಜೆಡಿಎಸ್‌ ಇಂದು, ಬಿಜೆಪಿ ನಾಳೆ ತೀರ್ಮಾನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯಸಭೆ ಮತ್ತು ವಿಧಾನಪರಿಷತ್‌ ಚುನಾವಣೆ ಹಿನ್ನೆಲೆ ಯಲ್ಲಿ ಮೂರೂ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಜೆಡಿಎಸ್‌ ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆದಿದ್ದರೆ, ಬಿಜೆಪಿ ಪ್ರಮುಖ ನಾಯಕರ ಸಭೆ ಶನಿವಾರ ನಡೆಯಲಿದೆ.

ರಾಜ್ಯಸಭೆ ಮತ್ತು ವಿಧಾನಪರಿಷತ್‌ ಅಭ್ಯರ್ಥಿಗಳ ಆಯ್ಕೆ ಬಹುತೇಕ ನಿರ್ಧಾರ ವಾಗಲಿದೆ ಎಂದು ಎರಡೂ ಪಕ್ಷಗಳ ಮೂಲಗಳು ಹೇಳಿವೆ. ರಾಜ್ಯಸಭೆ ಚುನಾವಣೆಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ರಾಜ್ಯಸಭೆಗೆ ಸ್ಪರ್ಧಿಸುವ ಬಗ್ಗೆ ಶುಕ್ರವಾರದ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ. 

ಕಾಂಗ್ರೆಸ್ ಹೆಚ್ಚುವರಿ ಮತಗಳನ್ನು ವರ್ಗಾಯಿಸುವ ಮೂಲಕ ಸಹಕಾರ ನೀಡಿದರೆ ಮಾತ್ರ ದೇವೇಗೌಡರು ಕಣಕ್ಕೆ ಇಳಿಯಲಿದ್ದಾರೆ. ದೇವೇಗೌಡರು ಹೊಂದಾಣಿಕೆ ಪ್ರಸ್ತಾಪ ಮುಂದಿಟ್ಟರೆ, ಗೌಡರಿಗೆ ಅಡ್ಡಗಾಲು ಹಾಕುವುದಿಲ್ಲ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಕಾಂಗ್ರೆಸ್‌ನ ಒಂದು ಗುಂಪು ದೇವೇಗೌಡರಿಗೆ ಬೆಂಬಲ ನೀಡುವ  ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.

ಕತ್ತಿ ಸಹೋದರರ ಹೆಚ್ಚಿದ ಒತ್ತಡ: ಸಹೋದರ ರಮೇಶ ಕತ್ತಿ ಅವರಿಗೆ ಟಿಕೆಟ್‌ ನೀಡಬೇಕು ಎಂದು ಬಿಜೆಪಿಯ ಹಿರಿಯ ಶಾಸಕ ಉಮೇಶ ಕತ್ತಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಒತ್ತಡ ಮುಂದುವರಿಸಿದ್ದಾರೆ. 

ಬುಧವಾರ ಬೆಳಿಗ್ಗೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಉಮೇಶ ಕತ್ತಿ ಟಿಕೆಟ್‌ ವಿಷಯ ಪ್ರಸ್ತಾಪಿಸಿದ್ದರು. ಆದರೆ, ಯಡಿಯೂರಪ್ಪ ಯಾವುದೇ ಭರವಸೆ ನೀಡಿರಲಿಲ್ಲ. ಅಷ್ಟಕ್ಕೆ ಸುಮ್ಮನಾಗದ ಕತ್ತಿ ಪುನಃ ಗುರುವಾರ ಬೆಳಿಗ್ಗೆ ಯಡಿಯೂರಪ್ಪ ಅವರ ಮನೆಗೆ ರಮೇಶ ಅವರನ್ನು ಕರೆದುಕೊಂಡು ಹೋಗಿ ಒತ್ತಡ ಹೇರುವ ತಂತ್ರ ಅನುಸರಿಸಿದರು.  ನಿವೃತ್ತ ಡಿಜಿಪಿ ಶಂಕರಬಿದರಿ, ಮಾಜಿ ಶಾಸಕ ನಿರ್ಮಲ್‌ ಕುಮಾರ್ ಸುರಾನ, ತೇಜಸ್ವಿನಿ ಅನಂತ ಕುಮಾರ್, ಐಸಿಐಸಿಐ ಬ್ಯಾಂಕಿನ ಮಾಜಿ ಮುಖ್ಯಸ್ಥ ಕೆ.ವಿ.ಕಾಮತ್‌, ಪ್ರೊ.ಎಂ.ನಾಗರಾಜ್, ಉದ್ಯಮಿ ಪ್ರಕಾಶ್‌ ಶೆಟ್ಟಿ ಹೆಸರುಗಳು ಬಿಜೆಪಿಯಲ್ಲಿ ಮುಂಚೂಣಿಗೆ ಬಂದಿವೆ. ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ್‌ ಕೋರೆ ಇನ್ನೊಂದು ಅವಧಿಗೂ ಅವಕಾಶ ಕೇಳಿದ್ದಾರೆ.

ಶನಿವಾರ ನಡೆಯುವ ಪ್ರಮುಖರ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾಗಿಯಾಗಲಿದ್ದು, ದೆಹಲಿಯಲ್ಲಿರುವ ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ಮತ್ತು ಡಿ.ವಿ.ಸದಾನಂದಗೌಡ ಅವರು ವೆಬ್‌ನೆರ್‌ ಮೂಲಕ(ವರ್ಚುವಲ್) ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಲ್ಲಿ ರಾಜ್ಯಸಭೆಯ ಒಂದು ಸ್ಥಾನಕ್ಕೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪಮೊಯಿಲಿ, ಕೆ.ಎಚ್‌.ಮುನಿಯಪ್ಪ, ಮುದ್ದಹನುಮೇಗೌಡ, ಬಿ.ಕೆ.ಹರಿಪ್ರಸಾದ್‌, ರಾಜೀವ್‌ಗೌಡ, ವಿ.ಎಸ್.ಉಗ್ರಪ್ಪ ಆಕಾಂಕ್ಷಿಗಳಾಗಿದ್ದಾರೆ. ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು