ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣ ನಿರ್ದೇಶಕರ ವಜಾ: ಪ್ರಸನ್ನ ಖಂಡನೆ

ಸರ್ಕಾರದ ವಿರುದ್ಧ ಅಸಮಾಧಾನ
Last Updated 16 ಸೆಪ್ಟೆಂಬರ್ 2019, 19:03 IST
ಅಕ್ಷರ ಗಾತ್ರ

ಮೈಸೂರು: ರಂಗಾಯಣ ನಿರ್ದೇಶಕರನ್ನು ವಜಾಗೊಳಿಸಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮವನ್ನು ಹಿರಿಯ ರಂಗಕರ್ಮಿ ಪ್ರಸನ್ನ ಖಂಡಿಸಿದ್ದಾರೆ.

‘ರಂಗಾಯಣ ಸ್ವಾಯತ್ತ ಸಂಸ್ಥೆ. ಇದರ ನಿರ್ದೇಶಕರ ಪದಚ್ಯುತಿ ಕಾನೂನಾತ್ಮಕವಾಗಿ ತಪ್ಪು. ಈ ಸಂಸ್ಥೆಗೆ ತನ್ನದೇ ಆದ ಬೈಲಾ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ರಂಗಾಯಣ ನಿರ್ವಹಣೆಯಲ್ಲಿ ಸಮಸ್ಯೆ ಇದ್ದರೆ ತನಿಖೆ ನಡೆಸಲಿ. ಆದರೆ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನಿರ್ದೇಶಕರನ್ನು ಏಕಾಏಕಿ ತೆಗೆದುಹಾಕಿ ಸರ್ಕಾರ ರಾಜಕೀಯ ಮಾಡುತ್ತಿದೆ. ಹೊಸದಾಗಿ ನೇಮಕವಾಗುವ ನಿರ್ದೇಶಕರು ಹಾಗೂ ಸದಸ್ಯರು ಬಿಜೆಪಿ ಏಜೆಂಟ್‌ಗಳಾಗುವ ಅಪಾಯವಿದೆ. ಕಲಾವಿದರು ರಾಜಕೀಯ ಪ್ರತಿನಿಧಿಗಳಾಗುವ ಸಾಧ್ಯತೆ ಇರುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಹಿಂದೆ ಕಲಬುರ್ಗಿ ರಂಗಾಯಣ ನಿರ್ದೇಶಕರ ವಿರುದ್ಧ ರಂಗ ಸಮಾಜದ ಸದಸ್ಯರು ಹಾಗೂ ಜನರು ದೂರು ನೀಡಿದ್ದರು. ಆದರೂ ಕ್ರಮ ಕೈಗೊಂಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಕುರಿತು ನಾಟಕ ಮಾಡಿದ್ದರು ಎಂದು ಅವರನ್ನು ತೆಗೆಯಲಿಲ್ಲವೇ’ ಎಂದು ಪ್ರಶ್ನಿಸಿದರು.

ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ, ‘ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿರುವ ರಂಗಾಯಣದ ಸ್ವಾಯತ್ತತೆಗೆ ಧಕ್ಕೆಯಾಗಿದೆ. ರಂಗಾಯಣದಲ್ಲಿ ರಾಜಕೀಯ ನಡೆಯುತ್ತಿಲ್ಲ. ನಿರ್ದೇಶಕರನ್ನು ತೆಗೆದುಹಾಕಿ ಸರ್ಕಾರ ರಾಜಕೀಯ ಮಾಡುತ್ತಿದೆ’ ಎಂದು ಟೀಕಿಸಿದರು.

‘ಇದೊಂದು ಕೆಟ್ಟ ಪರಂಪರೆ, ಅನಿಷ್ಟ ಪದ್ಧತಿ. ಕಲಾವಿದರನ್ನು ಒಡೆಯುವ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ’ ಎಂದು ರಂಗಕರ್ಮಿಗಳಾದ ಪ್ರಕಾಶ ಗರುಡ ಹಾಗೂ ಎಚ್‌.ಜನಾರ್ದನ್‌ ಟೀಕಿಸಿದರು.

‘ಆಸ್ಸಾಂನಲ್ಲಿ ನಾಟಕದಲ್ಲಿ ತೊಡಗಿಸಿಕೊಂಡಿದ್ದ ನಾನು ಮೈಸೂರಿಗೆ ಬಂದು ನಿರ್ದೇಶಕರ ಜವಾಬ್ದಾರಿ ವಹಿಸಿಕೊಂಡೆ. ಈಗ ಸರ್ಕಾರ ಕಲಾವಿದರಿಗೆ ಅನ್ಯಾಯ ಮಾಡಿದೆ, ಅಗೌರವ ತೋರಿಸಿದೆ’ ಎಂದು ಮಾಜಿ ನಿರ್ದೇಶಕಿ ರಂಗಕರ್ಮಿ ಭಾಗೀರಥಿ ಬಾಯಿ ಕದಂ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT