ಬುಧವಾರ, ಏಪ್ರಿಲ್ 8, 2020
19 °C
ಕಲಬುರ್ಗಿಯಲ್ಲಿ ಮೊದಲ ಪ್ರಯೋಗ; ನಿತ್ಯ ಮೂರು ನಾಟಕ ಪ್ರದರ್ಶನ

ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಬಯಲು ರಂಗ ವೇದಿಕೆ'

ಗಣೇಶ ಡಿ. ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿ ನಡೆಯಲಿರುವ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಟಕಗಳ ಪ್ರದರ್ಶನಕ್ಕಾಗಿ ಪ್ರತ್ಯೇಕ ‘ಬಯಲು ರಂಗ ವೇದಿಕೆ’ ತಲೆ ಎತ್ತಲಿದೆ.

ಸಮ್ಮೇಳನದ ಮುಖ್ಯ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆಗಳಲ್ಲಿ ಗೋಷ್ಠಿಗಳು ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ವಾಡಿಕೆಯಂತೆ ನಡೆಯಲಿವೆ. ರಂಗ ಚಟುವಟಿಕೆಗಾಗಿಯೇ ಪ್ರತ್ಯೇಕ ವೇದಿಕೆ ನಿರ್ಮಾಣಗೊಳ್ಳಲಿದೆ.

‘ಗುಲಬರ್ಗಾ ವಿಶ್ವವಿದ್ಯಾಲಯ ಆವರಣದ 35 ಎಕರೆ ವಿಶಾಲ ಪ್ರದೇಶದಲ್ಲಿ ಸಮ್ಮೇಳನ ನಡೆಯಲಿದ್ದು, ಮುಖ್ಯ ವೇದಿಕೆಯಿಂದ ಸ್ವಲ್ಪ ದೂರದಲ್ಲಿ ‘ರಂಗ ವೇದಿಕೆ’ ನಿರ್ಮಿಸಿ 1500 ಆಸನಗಳನ್ನು ಹಾಕುತ್ತೇವೆ’ ಎಂಬುದು ಸಮ್ಮೇಳನದ ಸ್ವಾಗತ ಸಮಿತಿಯ ಕೋಶಾಧ್ಯಕ್ಷ, ಜಿಲ್ಲಾಧಿಕಾರಿ ಶರತ್‌ ಬಿ ಅವರ ವಿವರಣೆ.

ಸಮ್ಮೇಳನದಲ್ಲಿ ಅವಕಾಶ ಕೋರಿ 24 ನಾಟಕ ಹಾಗೂ ಮೂರು ಬಯಲಾಟ ತಂಡಗಳವರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಎರಡು ಬಯಲಾಟ ಹಾಗೂ 7ರಿಂದ 9 ನಾಟಕ ತಂಡಗಳಿಗೆ ಅವಕಾಶ ಕಲ್ಪಿಸಲು ಸಮ್ಮೇಳನದ ಸ್ವಾಗತ ಸಮಿತಿ ಮುಂದಾಗಿದೆ.

‘ಈ ಭಾಗದ ಇತಿಹಾಸ ಸಾರುವ ‘ಹುಕುಂ ಪತ್ರ’ ಮತ್ತು ‘ಕಾಗಿಣಾ ದಡದಲ್ಲಿ’ ಅಂತಹ ನಾಟಕಗಳಿಗೆ ಆದ್ಯತೆ ನೀಡಲಾಗುವುದು. ನೀನಾಸಂ, ರಂಗಾಯಣಗಳಿಂದ ತಂಡಗಳನ್ನು ಆಹ್ವಾನಿಸಿಲ್ಲ. ಅರ್ಜಿ ಸಲ್ಲಿಸಿರುವವರಲ್ಲಿ ಯಾವ ನಾಟಕ ತಂಡಗಳಿಗೆ ಅವಕಾಶ ಕಲ್ಪಿಸಬೇಕು ಎಂಬುದನ್ನು ರಂಗ ತಜ್ಞರ ತಂಡ ನಿರ್ಧರಿಸಲಿದೆ’ ಎನ್ನುತ್ತಾರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೀರಭದ್ರ ಸಿಂಪಿ.

‘ಈ ವೇದಿಕೆಯಲ್ಲಿ ಸಂಜೆ 6ರಿಂದ ಒಂದು ಗಂಟೆ ಸಂಗೀತ ಕಾರ್ಯಕ್ರಮ ನಡೆಯಲಿವೆ. ಆ ನಂತರ ರಾತ್ರಿ 11ರ ವರೆಗೆ ನಿತ್ಯ ಮೂರು ನಾಟಕಗಳು ಪ್ರದರ್ಶನಗೊಳ್ಳಲಿವೆ. ಇತರೆ ವೇದಿಕೆಗಳಲ್ಲಿ ನಡೆಯುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ರಂಗ ಕಲೆಯನ್ನೂ ಆಸಕ್ತರು ಆಸ್ವಾದಿಸಬಹುದು’ ಎಂದು ಅವರು ಹೇಳಿದರು.

ಮೆರವಣಿಗೆಯ ದಾರಿ 6 ಕಿ.ಮೀ.!

ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಯು ಕಲಬುರ್ಗಿಯ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಿಂದ ಆರಂಭಗೊಂಡು ಕುಸನೂರ ರಸ್ತೆ ಮಾರ್ಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿಯ ಸಮ್ಮೇಳನದ ಮುಖ್ಯ ವೇದಿಕೆ ತಲುಪಲಿದೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. 6 ಕಿ.ಮೀ. ಅಂತರದ ಈ ಮಾರ್ಗ ಕ್ರಮಿಸಲು ಬಹಳ ಸಮಯ ತಗಲುವುದರಿಂದ ಸಮ್ಮೇಳನದ ಉದ್ಘಾಟನಾ ಸಮಾರಂಭವೂ ಸಾಕಷ್ಟು ವಿಳಂಬವಾಗುವ ಸಾಧ್ಯತೆ ಇದೆ.

‘ಮೆರವಣಿಗೆ ಇಷ್ಟು ದೂರ ನಡೆಸುವುದು ಸರಿಯಲ್ಲ. ವಯಸ್ಸಾದವರಿಗೆ ತೊಂದರೆಯಾಗುತ್ತದೆ. ಎರಡೂವರೆ ಕಿ.ಮೀ.ಗೆ ಮಿತಿಗೊಳಿಸಿ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಸಿದ್ಧತಾ ಸಭೆಯಲ್ಲಿ ಸಲಹೆ ನೀಡಿದ್ದರು. ಮೆರವಣಿಗೆ ಅಂತರ ಕಡಿಮೆಮಾಡುವ ಚರ್ಚೆ ನಡೆಯುತ್ತಿದೆ’ ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.

‘ಕಲಾವಿದರು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಅರ್ಜಿ ಸಲ್ಲಿಸಿದ ಸ್ಥಳೀಯ ಎಲ್ಲ ಕಲಾ ತಂಡಗಳಿಗೂ ಅವಕಾಶ ಕಲ್ಪಿಸಿ, ಎಲ್ಲ ಕಲಾವಿದರಿಗೂ ಪ್ರಮಾಣ ಪತ್ರ ವಿತರಿಸಬೇಕು ಎಂದು ಗೋವಿಂದ ಕಾರಜೋಳ ಸಲಹೆ ನೀಡಿದ್ದರು. ಮೆರವಣಿಗೆಯಲ್ಲಿ 60 ಕಲಾ ತಂಡಗಳು ಪಾಲ್ಗೊಳ್ಳುತ್ತಿದ್ದು, ಆ ಪೈಕಿ ಕಲಬುರ್ಗಿ ಜಿಲ್ಲೆಯ 30 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ವೀರಭದ್ರ ಸಿಂಪಿ ಮಾಹಿತಿ ನೀಡಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು