ಶನಿವಾರ, ಜೂಲೈ 11, 2020
29 °C
ಉಜ್ಜಯಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಮಧ್ಯಪ್ರವೇಶಿಸಲು ಆಗ್ರಹ

ಕೊಪ್ಪಳ: ಮರುಳಸಿದ್ಧೇಶ್ವರದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ವಿವಾಹ; ಪೀಠತ್ಯಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಉಜ್ಜಯಿನಿ ಶಾಖಾ ಮಠವಾಗಿರುವ ತಾಲ್ಲೂಕಿನ ಅಳವಂಡಿ ಮರುಳಸಿದ್ಧೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಪೀಠತ್ಯಾಗ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸ್ವಾಮೀಜಿ ವಿವಾಹವಾಗಿರುವ ಕಾರಣ ಪೀಠತ್ಯಾಗ ಮಾಡಿದ್ದಾರೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ. 

ಈ ಕುರಿತು ಗ್ರಾಮದ ಮುಖಂಡ ಸುರೇಶ ದಾಸರಡ್ಡಿ ಪ್ರಕಟಣೆ ನೀಡಿ, ಸಿದ್ಧಲಿಂಗಸ್ವಾಮಿ ಮರುಳಸಿದ್ದೇಶ್ವರ ಮಠದ ಪೀಠತ್ಯಾಗ ಮಾಡಿ ವಿವಾಹವಾಗಿರುವ ಬಗ್ಗೆ ಖಚಿತವಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಉಜ್ಜಯಿನಿ ಪೀಠದ ಶಾಖಾ ಮಠವಾಗಿರುವುದರಿಂದ ಉಜ್ಜಯಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಮಧ್ಯಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಶ್ರೀಗಳು ಪೀಠತ್ಯಾಗ ದುರಾದೃಷ್ಟಕರ ಮಠದ ಅಭಿವೃದ್ಧಿಗೆ ಸಹಕಾರ ಸಿಗಲಿಲ್ಲ ಎಂಬುವುದು ಸುಳ್ಳು. ಮಠದಲ್ಲಿರುವ ಶ್ರೀಗಳ ಕುಟುಂಬದವರ ಆಸ್ತಿ ಜಗಳ, ಪಟ್ಟಭದ್ರ ಹಿತಾಸಕ್ತಿತನದ ಸ್ವಭಾವ ಮತ್ತು ಜಗಳದಿಂದ ಮಠದ ಅಭಿವೃದ್ಧಿ, ಧಾರ್ಮಿಕ ಚಟುವಟಿಕೆಗಳು ಕಳೆದ 25 ವರ್ಷಗಳಿಂದ ನಿಂತುಹೋಗಿವೆ. ಮಠದಲ್ಲಿರುವ ಕಟ್ಟಿಮನಿ ಹಿರೇಮಠ ಇನಾಮದಾರ ವಂಶಸ್ಥರು ತಮ್ಮ ಹಿತಾಸಕ್ತಿಗಾಗಿ, ಅಸ್ತಿತ್ವಕ್ಕಾಗಿ ಮಠದಲ್ಲಿ ಇದ್ದರೆ ವಿನಾ ಗ್ರಾಮದ ಭಕ್ತರ ಒಳಿತಿಗಾಗಿ ಅಲ್ಲ ಎಂದು ಅವರು ತಿಳಿಸಿದ್ದಾರೆ.

ಶ್ರೀಗಳು ಪೀಠ ತ್ಯಾಗ ಮಾಡುವಾಗ ಯಾರ ಗಮನಕ್ಕೂ ತಾರದೇ ಭಕ್ತರಲ್ಲಿ ತಮಗಾಗುವ ತೊಂದರೆಗಳ ಬಗ್ಗೆ ಚರ್ಚಿಸಿಲ್ಲ. ಏಕಾಏಕಿ ಪೀಠ ತ್ಯಾಗ ಮಾಡಿರುವುದು ಮತ್ತು ವಿವಾಹವಾಗಿರುವುದು ಮಠದ ಭಕ್ತರಿಗೆ ಮಾಡಿದ ಅಪಮಾನವಾಗಿದೆ ಎಂದು ಅವರು ಹೇಳಿದ್ದಾರೆ.

ಉಜ್ಜಯಿನಿ ಶ್ರೀಗಳು ಮಧ್ಯೆ ಪ್ರವೇಶಿಸಿ, ಸಮಗ್ರ ವಿವರ ಪಡೆದು ಸದ್ಯ ಅಳವಂಡಿಯಲ್ಲಿ ವಾಸವಿರುವ ಕಟ್ಟಿಮನಿ ಇನಾಮದಾರ ವಂಶಸ್ಥರನ್ನು ಹೊರತುಪಡಿಸಿ, ಉನ್ನತ ವ್ಯಾಸಂಗ ಮಾಡಿದ ಉತ್ತಮ ವಾಗ್ಮಿ ತಮ್ಮ ಶಿಷ್ಯರೊಬ್ಬರನ್ನು ನಮ್ಮ ಮಠಕ್ಕೆ ಸ್ವಾಮಿಗಳನ್ನಾಗಿ ಪಟ್ಟಕ್ಕೆ ತರಬೇಕು ಎಂಬುವುದು ಗ್ರಾಮದ ಜನರ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು