ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಣ್ಣ ಕೈಗಾರಿಕೆಗಳ ನೆರವಿಗೆ ರಾಜ್ಯ-ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸಲಿ

Last Updated 2 ಮೇ 2020, 10:39 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ತೀವ್ರ ನಷ್ಟಕ್ಕೆ ಒಳಗಾಗಿರುವ ಸಣ್ಣ ಕೈಗಾರಿಕೆಗಳ ನೆರವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದರು.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ ಮತ್ತು ಪೀಣ್ಯ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 40 ದಿನಗಳಿಂದ ಸಣ್ಣ ಕೈಗಾರಿಕೆಗಳಲ್ಲಿ ಉತ್ಪಾದನಾ ಚಟುವಟಿಕೆ ಬಂದ್ ಆಗಿದ್ದು, ಸರ್ಕಾರಕ್ಕೆ ಬರಬೇಕಾದ ಆದಾಯವೂ ನಿಂತು ಹೋಗಿದೆ. ಸಣ್ಣ ಕೈಗಾರಿಕೆಗಳಲ್ಲಿ ಮತ್ತೆ ಚಟುವಟಿ ಆರಂಭವಾಗಬೇಕಾದರೆ ಸರ್ಕಾರ ಆರ್ಥಿಕ ನೆರವು ಒದಗಿಸಬೇಕಾಗಿದೆ ಎಂದರು.

ಸಣ್ಣ ಕೈಗಾರಿಕೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದಂತಿಲ್ಲ. ಇದುವರೆಗೂ ಸಂಘಗಳ ಪದಾಧಿಕಾರಿಗಳ ಜೊತೆ ಸರ್ಕಾರ ಮಾತುಕತೆ ನಡೆಸಿಲ್ಲ. ನಷ್ಟದಲ್ಲಿರುವ ಸಣ್ಣ ಕೈಗಾರಿಕೆಗಳು ಚೇತರಿಸಿಕೊಳ್ಳಬೇಕಾದರೆ ಕೆಲವು ರಿಯಾಯಿತಿಗಳನ್ನು ಸರ್ಕಾರ ಘೋಷಿಸಬೇಕು. ಕಾರ್ಖಾನೆ ಮಾಲೀಕರು ಬ್ಯಾಂಕ್‍ಗಳ ಮೂಲಕ ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ, ಮಾಸಿಕ ಕಂತು ಪಾವತಿಗೆ ವಿನಾಯಿತಿ, ಉತ್ಪನ್ನಗಳ ರಫ್ತಿಗೆ ಉತ್ತೇಜನ ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಒದಗಿಸಿದರೆ ಮಾತ್ರ ಸಣ್ಣ ಕೈಗಾರಿಕೆಗಳು ಮತ್ತು ಆ ಕೈಗಾರಿಕೆಗಳನ್ನು ಅವಲಂಬಿಸಿರುವ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂದರು.

ಈಗಾಗಲೇ ನಷ್ಟ ಅನುಭವಿಸಿರುವ ಕೆಲವು ಕಾರ್ಖಾನೆಗಳು ಮತ್ತೆ ಉತ್ಪಾದನೆ ಆರಂಭಿಸಬೇಕಾದರೆ ಬಂಡವಾಳ ಅಗತ್ಯ. ಅದರ ಕಡೆಗೂ ಸರ್ಕಾರ ಗಮನ ಹರಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ವ್ಯವಸ್ಥೆ ಮಾಡಬೇಕು ಎಂದೂ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದರು.

ಸರ್ಕಾರ ನೆರವು ಒದಗಿಸದಿದ್ದರೆ ಸಾವಿರಾರು ಕಾರ್ಖಾನೆಗಳು ಮುಚ್ಚುವುದರ ಜೊತೆಗೆ ಆ ಕಾರ್ಖಾನೆಗಳನ್ನೇ ಜೀವನಾಧಾರವಾಗಿ ಮಾಡಿಕೊಂಡಿರುವ ಕಾರ್ಮಿಕರು ಬೀದಿಪಾಲಾಗಬೇಕಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್.ರಾಜು, ಪೀಣ್ಯ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶ್ರೀನಿವಾಸ್ ಹಾಗೂ ಉಭಯ ಸಂಘಗಳ ಇತರ ಪದಾಧಿಕಾರಿಗಳು ಸಭೆಯಲ್ಲಿದ್ದರು.

ಸಂಘಗಳ ಪ್ರಮುಖ ಬೇಡಿಕೆಗಳು:

* ಎಫ್‌ಐಆರ್‌ಸಿ ಬಿಲ್ಲುಗಳನ್ನು ಪಾವತಿ ಮಾಡಲು ಅವಧಿ ವಿಸ್ತರಿಸಬೇಕು

* ಮಾಸಿಕ ವಿದ್ಯುತ್ ಶುಲ್ಕ ಪಾವತಿ ಒಂದು ವರ್ಷದವರೆಗೆ ಮನ್ನಾ ಮಾಡಬೇಕು

* ಕಾರ್ಮಿಕರ ಇಎಸ್‍ಐ, ಪಿಎಫ್ ವಂತಿಗೆ ಪಾವತಿ ಆರು ತಿಂಗಳ ವರೆಗೆ ಮನ್ನಾ ಮಾಡಬೇಕು

* ಬ್ಯಾಂಕ್ ಸಾಲದ ಮೇಲಿನ ಬಡ್ಡಿ ಮನ್ನಾ, ಬಡ್ಡಿ ಮತ್ತು ದಂಡ ಬಡ್ಡಿ ಕೈ ಬಿಡಬೇಕು

* ಬಿಬಿಎಂಪಿಗೆ ಸಂದಾಯ ಮಾಡಬೇಕಿರುವ ಆಸ್ತಿ ತೆರಿಗೆಯ ನಿಧಾನ ಪಾವತಿಯ ಮೇಲಿನ ಬಡ್ಡಿ/ನಿಗದಿತ ಮೊಬಲಗನ್ನು ಡಿಸೆಂಬರ್‌ ವರೆಗೆ ಮುಂದೂಡಬೇಕು

* ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ವೇತನವನ್ನು ರಾಜ್ಯ ಸರ್ಕಾರ ಶೇ 50ರಷ್ಟು ಭರಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT