ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಯ, ಚೋಕ್ಸಿ, ಬಾಬಾ ರಾಮದೇವ ಸಾಲ ಮನ್ನಾಕ್ಕೆ ಖಂಡನೆ: ರಾಷ್ಟ್ರಪತಿಗೆ ಪತ್ರ

ಕಾರ್ಮಿಕರಿಗೆ ನೆರವಾಗುವ ಬದಲು ಉದ್ಯಮಿಗಳ ಸಾಲ ಮನ್ನಾ– ರಾಷ್ಟ್ರಪತಿಗೆ ಪತ್ರ ಬರೆದ ಸಾಮಾಜಿಕ ಮುಖಂಡರು
Last Updated 30 ಏಪ್ರಿಲ್ 2020, 15:02 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು ಲಾಕ್‌ಡೌನ್‌ ಸಂದರ್ಭದಲ್ಲಿ ಕಾರ್ಮಿಕರ ಸಂಕಷ್ಟ ಪರಿಹರಿಸಲು ಕ್ರಮ ಕೈಗೊಳ್ಳುವ ಬದಲು ದೇಶಬಿಟ್ಟು ಪರಾರಿಯಾಗಿರುವ ಮಲ್ಯ, ಮೆಹುಲ್‌ ಚೋಕ್ಸಿ ಅಂಥವರಸಾಲ ಮನ್ನಾ ಮಾಡಿರುವುದನ್ನು ಸಾಮಾಜಿಕ ಹೋರಾಟಗಾರರು ಖಂಡಿಸಿದ್ದಾರೆ.

ಕೇಂದ್ರ ಸರ್ಕಾರದ ಈ ನಡೆಯನ್ನು ಖಂಡಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಹಿರಿಯ ಸಾಹಿತಿ ದೇವನೂರ ಮಹಾದೇವ ಸೇರಿದಂತೆ 21 ಸಾಮಾಜಿಕ ಹೋರಾಟಗಾರರು ರಾಷ್ಟ್ರಪತಿಯವರಿಗೆ ಗುರುವಾರ ಪತ್ರ ಬರೆದಿದ್ದಾರೆ.

ಜನರು ಕಾರ್ಮಿಕ ದಿನವಾದ ಮೇ 1ರಂದು (ಶುಕ್ರವಾರ) ತಮ್ಮ ಮನೆಗಳಲ್ಲಿ ಬಾಬಾಸಾಹೇಬ್‌ ಅಂಬೇಡ್ಕರ್‌ ಮತ್ತು ಮಹಾತ್ಮ ಗಾ೦ಧಿ ಅವರ ಭಾವಚಿತ್ರವಿಟ್ಟು ನಮನ ಸಲ್ಲಿಸುವ ಮೂಲಕ ಸರ್ಕಾರದ ಬಂಡವಾಳಶಾಹಿ ಪರ ನೀತಿಯನ್ನು ಖಂಡಿಸಬೇಕು. ಈ ದಿನವನ್ನು ಬದುಕಿನ ಹಕ್ಕಿನ ದಿನವನ್ನಾಗಿ ಆಚರಿಸಬೇಕು ಎಂದು ಸಲಹೆ ನೀಡಿದ್ದಾರೆ. ಅವರು ಬರೆದ ಪತ್ರದ ಪೂರ್ತಿ ಒಕ್ಕಣೆ ಇಂತಿದೆ

ಇವರಿಗೆ,

ಘನವೆತ್ತ ರಾಷ್ಟ್ರಪತಿಗಳು,

ರಾಷ್ಟ್ರಪತಿ ಭವನ, ನವದೆಹಲಿ

ಕೊರೊನಾ ಮಹಾಮಾರಿ ಜಗತ್ತನ್ನು ನು೦ಗಿ ನೊಣೆಯುತ್ತಿರುವ ಸ೦ಕಟಮಯ ಸ೦ದರ್ಭದಲ್ಲೂ ಕಾರ್ಮಿಕರ ದಿನವನ್ನು ಆಚರಿಸುವುದು ಹಿಂದೆ೦ದಿಗಿಂತಲೂ ಹೆಚ್ಚು ಪ್ರಸ್ತುತ. ಇ೦ದು ದೇಶದಲ್ಲಿ ಕೋಟ್ಯಂತರ ಕಾರ್ಮಿಕರು ಅಕ್ಷರಶಃ ತುತ್ತು ಅನ್ನವಿಲ್ಲದೆ ಬೀದಿಗೆ ಎಸೆಯಲ್ಬಟ್ಟಿದ್ದಾರೆ. ಲಾಕ್‌ಡೌನ್‌ ಎಂಬುದು ಮಹಾಮಾರಿಯನ್ನು ಎಷ್ಟು ಹಿಮ್ಮೆಟ್ಟಿಸಿದೆಯೋ ಅದಕ್ಕಿಂತ ಸಹಸ್ರಪಟ್ಟು ಕಾರ್ಮಿಕರನ್ನು ನಿರ್ಗತಿಕರನ್ನಾಗಿಸಿದೆ. ಇ೦ಥ ವಿಷಮ ಪರಿಸ್ಥಿತಿಯಲ್ಲೂ ಸರ್ಕಾರವು ದುಡಿಯುವ ಜನತೆಯ ಸ೦ಕಟಕ್ಕೆ ಆಸರೆಯಾಗುವ ಬದಲು ಖದೀಮರಾದ ಉದ್ದಿಮೆದಾರರ ಹಿತಾಸಕ್ತಿ ಕಾಪಾಡುತ್ತಿರುವುದು ಅಕ್ಷಮ್ಯ. ರೈತರು ವಿಲವಿಲ ಒದ್ದಾಡಿದರೂ ಅವರ ಸಾಲದಲ್ಲಿ ನಯಾಪೈಸೆ ಮನ್ನಾ ಮಾಡಲು ತಯಾರಾಗದ ಸರ್ಕಾರವು ಕೋಟ್ಯಂತರ ಸಾಲ ಮುಳುಗಿಸಿ ದೇಶ ಬಿಟ್ಟು ಕಳ್ಳತನದಿಂದ ಓಡಿಹೋದ ಮೆಹುಲ್‌ ಚೋಸ್ಕಿ, ನೀರವ್‌ ಮೋದಿ, ವಿಜಯ ಮಲ್ಯ ಮು೦ತಾದವರಲ್ಲದೇ ರಾಮದೇವ ಬಾಬಾರಂತಹ 50ಕ್ಕೂ ಹೆಚ್ಚು ಉದ್ಯಮಿಗಳು ಸುಮಾರು ₹ 68,607 ಕೋಟಿಯಷ್ಟು ಸಾಲದ ಮೊತ್ತವನ್ನು ಮನ್ನಾ ಮಾಡಿ ನಿರ್ಲಜ್ಜತೆ ಮೆರೆಯುತ್ತಿದೆ.
ಒ೦ದೆಡೆ ದೇಶವು ಆರ್ಥಿಕ ಸ೦ಕಷ್ಟವನ್ನು ಎದುರಿಸುತ್ತಿದೆ ಎ೦ಬ ನೆಪವೊಡ್ಡಿ ನೌಕರರ ತುಟ್ಟಿ ಭತ್ಯೆ ಕಡಿತ ಮಾಡುತ್ತದೆ. ಇನ್ನೊಂದೆಡೆ ಆ‌ಗರ್ಭ ಶ್ರೀಮಂತ ಕಳ್ಳರ ಎಣೆಯಿಲ್ಲದಷ್ಟು ಸಾಲ ಮಾಫ್‌ ಮಾಡುತ್ತದೆ. ಮಗದೊಂದೆಡೆ ಖಾಸಗಿ ಉದ್ದಿಮೆದಾರರು ಲಾಕ್‌ಡೌನ್‌ ಸಂದರ್ಭದಲ್ಲಿ ತನ್ನ ಕಾರ್ಮಿಕರಿಗೆ ಸ೦ಬಳ ನೀಡಲೇಬೇಕೆಂದು ಒತ್ತಾಯಿಸಲಾಗದೆ೦ದು ಕಾರ್ಮಿಕ ಸಚಿವಾಲಯದ ಸ೦ಸದೀಯ ಸಮಿತಿ ಕೈ ಎತ್ತಿದೆ. ಇದು ತೀರ ನಾಚಿಕೆಗೇಡು ನಿರ್ಧಾರವಲ್ಲವೆ? ಈ ಕಡೆ ಪ್ರಾಕೃತಿಕ ವಿಕೋಪ, ಆ ಕಡೆ ಅದಕ್ಕಿಂತ ಉಗ್ರವಾದ ಜನವಿರೋಧಿ ಸರ್ಕಾರ. ಎರಡರ ಬರ್ಬರತೆಯಿಂದಾಗಿ ರೈತರ ಸರಣಿ ಆತ್ಮಹತ್ಯೆಗಳು, ಕಾರ್ಮಿಕರ ದಾರುಣ ಸಾವುಗಳು, ಮಧ್ಯಮ ವರ್ಗದವರ ಅತಂತ್ರ ಸ್ಥಿತಿಯು ಮಾನವ ಸಮುದಾಯನ್ನು ವಿನಾಶಗೈಯಲು ಶಪಥ ಮಾಡಿವೆ.
ಇ೦ಥ ವ್ಯತಿರಿಕ್ತ ಸಂದರ್ಭದಲ್ಲಿ ಜನರು ತಮ್ಮ ಬದುಕುವ ಹಕ್ಕಿನ ದಿನವನ್ನಾಗಿ ಕಾರ್ಮಿಕ ದಿನವನ್ನು ಆಚರಿಸಲು ಮುಂದಾಗಿದ್ದಾರೆ. ಸಮಸ್ತ ಜನತೆಯ ಒಳಿತಿಗಾಗಿ ಮೇ 1 ರಂದು ತಮ್ಮ ಮನೆಗಳಲ್ಲಿ ಬಾಬಾಸಾಹೇಬರ ಮತ್ತು ಮಹಾತ್ಮ ಗಾ೦ಧಿ ಅವರ ಭಾವಚಿತ್ರವಿಟ್ಟು ನಮನ ಸಲ್ಲಿಸುವ ಮೂಲಕ ಸರ್ಕಾರದ ಬಂಡವಾಳಶಾಹಿ ಪರ ನೀತಿಯನ್ನು ಖಂಡಿಸುತ್ತಿದ್ದಾರೆ. ಜನತೆಯಿಂದ ಆಯ್ಕೆಯಾದ ಸರ್ಕಾರ ಸಮಸ್ತ ಜನತೆಯ ಹಿತಾಸಕ್ತಿ ಕಾಪಾಡುವುದು ಬಿಟ್ಟು ಕೆಲವೇ ಶ್ರೀಮ೦ತರ ಪರ ನಿಲ್ಲುತ್ತಿರುವುದು ವರ್ತಮಾನದ ಬಹು ದೊಡ್ಡ ದುರಂತ.
ಶ್ರಮಗಳ್ಳ ಬ೦ಡವಾಳಿಗರ ಪರ ವಹಿಸುವುದು ಬಿಟ್ಟು ದುಡಿಯುವವರ ಹೊಟ್ಟೆಗೆ ಕನಿಷ್ಟ ಅನ್ನ ನೀಡಬೇಕೆಂದು ಆಗ್ರಹಿಸುತ್ತೇವೆ. ಹಸಿವಿನ ಬೆಂಕಿ ಆಳುವ ಸರ್ಕಾರಗಳನ್ನು ಆಪೋಷನ ತೆಗೆದುಕೊಳ್ಳದೇ ಇರದು ಎಂಬ ಎಚ್ಚರಿಕೆ ನೀಡುತ್ತಾ ಸಮಸ್ತರು ಕಾರ್ಮಿಕ ದಿನವನ್ನು ತಮ್ಮ ತಮ್ಮ ಮನೆಗಳಲ್ಲ ಅರ್ಥಪೂರ್ಣವಾಗಿ ಆಚರಿಸುವಂತೆ ಕರೆ ನೀಡಲಾಗುತ್ತಿದೆ.

* ಎಚ್‌.ಎಸ್‌. ದೊರೆಸ್ಟಾಮಿ, ಸ್ವಾತಂತ್ರ್ಯ ಹೋರಾಟಗಾರ

* ದೇವನೂರ ಮಹಾದೇವ, ಹಿರಿಯ ಸಾಹಿತಿ

* ಗಣೇಶ ದೇವಿ, ಭಾಷಾ ತಜ್ಞ

* ಡಾ.ಶರಣ ಪ್ರಕಾಶ ಪಾಟೀಲ, ರಾಜಕಾರಣಿ

* ಬಿ.ಆರ್‌.ಪಾಟೀಲ, ಹಿರಿಯ ರಾಜಕಾರಣಿ

* ಕೆ. ನೀಲಾ, ಜನವಾದಿ ಮಹಿಳಾ ಸ೦ಘಟನೆ

* ಪ್ರಸನ್ನ ಹೆಗ್ಗೋಡು, ಹಿರಿಯ ರಂಗಕರ್ಮಿ

* ಪ್ರೊ. ಆರ್‌.ಕೆ ಹುಡಗಿ, ಹಿರಿಯ ಸಾಹಿತಿ

* ಡಾ.ಸಿದ್ಧನಗೌಡ ಪಾಟಿಲ, ವಿಚಾರವಾದಿ

* ಕೋಡಿಹಳ್ಳಿ ಚಂದ್ರಶೇಖರ, ರಾಜ್ಯಾಧ್ಯಕ್ಷ ಕರ್ನಾಟಕ ರೈತ ಸ೦ಘ

* ಅಲ್ಲಮಪ್ರಭು ಪಾಟೀಲ, ಹಿರಿಯ ರಾಜಕಾರಣಿ

* ಮೈಕಲ್‌ ಫರ್ನಾ೦ಡಿಸ್‌, ರಾಜಕಾರಣಿ

* ಡಾ. ಸುನೀಲಂ, ರಾಜಕಾರಣಿ

* ಸಿ.ಬಿ.ಪಾಟೀಲ ಓಕಳಿ, ಸಾಮಾಜಿಕ ಮುಖಂಡ

* ಡಾ.ಟಿ.ಎಸ್‌.ಪ್ರಕಾಶ ಕಮ್ಮರಡಿ, ಕೃಷಿ ತಜ್ಞ

* ಡಾ.ಕಾಶಿನಾಥ ಅ೦ಬಲಗೆ, ಸಾಹಿತಿ

* ಡಾ.ಪ್ರಭೂ ಖಾನಾಪೂರೆ, ಸಾಹಿತಿ

* ಮಾರುತಿ ಗೋಖಲೆ, ಸಾಮಾಜಿಕ ಮುಖಂಡ

* ದತ್ತಾತ್ರಯ ಇಕ್ಕಳಕಿ, ಸಾಮಾಜಿಕ ಮುಖಂಡ

* ಅಬ್ದುಲ್‌ ಹಮೀದ್‌, ಸಾಮಾಜಿಕ ಮುಖ೦ಡ

* ಮೆಹರಾಜ್‌ ಪಟೇಲ, ಸಾಮಾಜಿಕ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT