ಭಾನುವಾರ, ಆಗಸ್ಟ್ 1, 2021
26 °C
ಕೋರ್‌ ವಿಷಯಗಳ ಪರೀಕ್ಷೆ ಮುಕ್ತಾಯ * ಎರಡು ಭಾಷಾ ಪರೀಕ್ಷೆಗಳಷ್ಟೇ ಬಾಕಿ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಮಾಜವಿಜ್ಞಾನ ಶೇ 98ರಷ್ಟು ಹಾಜರಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಸ್ಸೆಸ್ಸೆಲ್ಸಿ ಸಮಾಜವಿಜ್ಞಾನ ಪರೀಕ್ಷೆ ಬುಧವಾರ ನಡೆದಿದ್ದು, 7,84,287 ವಿದ್ಯಾರ್ಥಿಗಳ ಪೈಕಿ 7,68,341 ಮಂದಿ ಪರೀಕ್ಷೆ ಬರೆಯುವ ಮೂಲಕ ಶೇ 97.96ರಷ್ಟು ಹಾಜರಾತಿ ದಾಖಲಾಗಿದೆ.

‘ಕಳೆದ ವರ್ಷ ಶೇ 98.78 ಹಾಜರಾತಿ ಇತ್ತು. ಕಂಟೈನ್ಮೆಂಟ್ ಪ್ರದೇಶಗಳ 3,363 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 613 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮಗ
ಳಲ್ಲಿ ಭಾಗಿಯಾದ ಯಾವುದೇ ಪ್ರಕರಣಗಳು ನಡೆದಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೋವಿಡ್‌ ಕಾರಣಕ್ಕೆ ಇದುವರೆಗೆ 32 ಮಂದಿ ಪರೀಕ್ಷೆ ಬರೆದಿಲ್ಲ. ನೆರೆ ರಾಜ್ಯಗಳಿಂದ 645 ವಿದ್ಯಾರ್ಥಿಗಳ ಪೈಕಿ 593 ಮಂದಿ ಪರೀಕ್ಷೆ ಬರೆದಿದ್ದಾರೆ. 12,644 ವಲಸೆ ವಿದ್ಯಾರ್ಥಿಗಳ ಪೈಕಿ 12,541 ಮಂದಿ ಹಾಜರಾಗಿದ್ದಾರೆ’ ಎಂದು ಸಚಿವರು ತಿಳಿಸಿದರು.

‘ಕೋರ್‌ ವಿಷಯಗಳ ಪರೀಕ್ಷೆ ಕೊನೆಗೊಂಡಿದೆ. ಗುರುವಾರ ಮತ್ತು ಶುಕ್ರವಾರ ಪ್ರಥಮ ಭಾಷೆ, ತೃತೀಯ ಭಾಷೆ ಪರೀಕ್ಷೆಗಳಿವೆ. ಇವುಗಳ ಯಶಸ್ಸಿಗೂ ಇದೇ ರೀತಿಯ ಬದ್ಧತೆ ಇರಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ವ್ಯವಸ್ಥೆ ಮೇಲೆ
ವಿಶ್ವಾಸವಿಟ್ಟುಕೊಳ್ಳಬೇಕು’ ಎಂದು ಸಚಿವರು ಮನವಿ ಮಾಡಿದರು.

‘ಫೂಟೇಜ್‌’ ಪರಿಶೀಲನೆ ಕಡ್ಡಾಯ
‘ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಪ್ರತಿದಿನದ ಪರೀಕ್ಷೆ ಮುಗಿದ ಬಳಿಕ ಸಿಸಿಟಿವಿ ಫೂಟೇಜ್‌ಗಳನ್ನು ಹಿರಿಯ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು’ ಎಂದು ಸಚಿವ ಸುರೇಶ್‌ ಕುಮಾರ್ ಎಚ್ಚರಿಸಿದ್ದಾರೆ.

ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಬಂದ್‌ ಮಾಡಿ ನಕಲು ಮಾಡಿರುವ ಪ್ರಕರಣದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

‘ಪ್ರಾಥಮಿಕ ವರದಿಯಂತೆ ಅಕ್ರಮ ನಡೆದಿರುವುದು ಗೊತ್ತಾಗಿಲ್ಲ, ಆದರೆ, ಫೂಟೇಜ್‌ ಅನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್‌ ತಿಳಿಸಿದರು.

ಕಾಡಿದ ಅಪೆಂಡಿಸೈಟಿಸ್

* ಬೆಂಗಳೂರಿನ ನಿರ್ಮಲಾ ರಾಣಿ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬರು ಅಪೆಂಡಿಸೈಟಿಸ್ ತೊಂದರೆಯಿಂದ ಬಳಲುತ್ತಿದ್ದು, ಮಲ್ಲೇಶ್ವರದ ಕೆಪಿಎಸ್ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ತೀವ್ರ ಹೊಟ್ಟೆನೋವಿನಿಂದ ಬಳಲಿದರು. ಆಕೆಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲು ನಿರ್ಧರಿಸಲಾಗಿದೆ.

* ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಘಟಪ್ರಭಾದ ಕೆ.ಆರ್. ಹುಕ್ಕೇರಿ ಪ್ರೌಢಶಾಲೆಯ ವಿದ್ಯಾರ್ಥಿ ಸಂಬಂಧಿಕರ ವಾಹನದಲ್ಲಿ ಬರುತ್ತಿದ್ದಾಗ ಅಪಘಾತವಾಗಿ ಸಣ್ಣಪುಟ್ಟ ಗಾಯಗಳಾಗಿದ್ದು, ಮಾನಸಿಕ ಆಘಾತಕ್ಕೊಳಗಾದ ಕಾರಣ ಪೂರಕ ಪರೀಕ್ಷೆ ಬರೆಯಲು ತಿಳಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು