ಕೆ.ಜಿ.ಹಾರ್ಲಿಕ್ಸ್ ₹20,ವಾಷಿಂಗ್ ಪೌಡರ್ ₹5! ಅಗ್ಗದ ದರಕ್ಕೆ ಬೆಚ್ಚಿದ ಅಧಿಕಾರಿಗಳು

ಗುರುವಾರ , ಜೂಲೈ 18, 2019
29 °C
ಜಿಲ್ಲೆಯ ವಸತಿಶಾಲೆಗಳಿಗೆ ಅಗತ್ಯ ಸಾಮಗ್ರಿ ಪೂರೈಸುವ ಗುತ್ತಿಗೆದಾರರ ಕರಾಮತ್ತು

ಕೆ.ಜಿ.ಹಾರ್ಲಿಕ್ಸ್ ₹20,ವಾಷಿಂಗ್ ಪೌಡರ್ ₹5! ಅಗ್ಗದ ದರಕ್ಕೆ ಬೆಚ್ಚಿದ ಅಧಿಕಾರಿಗಳು

Published:
Updated:

ಶಿವಮೊಗ್ಗ: ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಈ ಸಮಯದಲ್ಲಿ ಜಿಲ್ಲೆಯ ವಿವಿಧ ವಸತಿ ಶಾಲೆಗಳಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸಲು ಗುತ್ತಿಗೆದಾರರು ನಮೂದಿಸಿದ ಅಗ್ಗದ ದರಪಟ್ಟಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.

ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅಧ್ಯಕ್ಷತೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವಾರದ ಹಿಂದೆ ಗುತ್ತಿಗೆದಾರರ ಸಮಕ್ಷಮ ಟೆಂಡರ್ ತೆರೆದಾಗ ಅಲ್ಲಿ ನಮೂದಿಸಿದ ದರಗಳು ಬಯಲಾಗಿವೆ.

ಅತ್ಯಂತ ಕಡಿಮೆ ದರಕ್ಕೆ ದಿನಸಿ ಪೂರೈಸುವ ಭರವಸೆಯ ಜತೆಗೆ, ಹೆಸರಾಂತ ಕಂಪನಿಗಳ ಜಾಮೂನು ಪೌಡರ್ ₹ 10, ಕಾಫಿ ಪೌಡರ್ ₹ 30, ಒಣಮೆಣಸಿನಕಾಯಿ ₹ 20, ವಾಷಿಂಗ್ ಪೌಡರ್ ₹ 5 (ಎಲ್ಲವೂ ಒಂದು ಕೆ.ಜಿಗೆ), ಒಂದು ಪೌಂಡ್‌ ಬ್ರೆಡ್‌ ₹ 6, ಒಂದು ಮೊಟ್ಟೆ ₹ 4, ಒಂದು ಬಲ್ಬ್‌ ₹ 5, ಸೊಳ್ಳೆಬತ್ತಿ ₹ 1, ಲೀಟರ್ ಆ್ಯಸಿಡ್ ₹ 5 ಹಾಗೂ 450 ಮಿ.ಲೀ ಫಿನಾಯಿಲ್‌ ₹ 5 ಎಂದು ನಮೂದಿಸಿದ್ದಾರೆ. ಹೀಗೆ ಹತ್ತಾರು ಅಗತ್ಯ ಸಾಮಗ್ರಿಗಳಿಗೆ ಅಗ್ಗದ ದರವನ್ನು ನಮೂದಿಸಲಾಗಿದೆ.

ಜಿಲ್ಲೆಯಲ್ಲಿ ಮೊರಾರ್ಜಿ ವಸತಿಶಾಲೆ, ಅಂಬೇಡ್ಕರ್, ಕಿತ್ತೂರು ರಾಣಿ ಚನ್ನಮ್ಮ, ಇಂದಿರಾಗಾಂಧಿ, ವಾಜಪೇಯಿ ವಸತಿಶಾಲೆಗಳು ಸೇರಿ 24 ಶಾಲೆಗಳಿಗೆ ಆಹಾರ ಸಾಮಗ್ರಿ ಸೇರಿ ಅಗತ್ಯ ವಸ್ತುಗಳನ್ನು ಪೂರೈಸಲು ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಪ್ರಾಧಿಕಾರದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಆಹಾರ ಇಲಾಖೆ ಉಪ ನಿರ್ದೇಶಕರು ಇರುತ್ತಾರೆ. ಟೆಂಡರ್ ನಿಯಮದಂತೆ ಅತಿ ಕಡಿಮೆ ದರ ನಮೂದಿಸಿದ ಗುತ್ತಿಗೆದಾರರಿಗೆ ಒಂದು ವರ್ಷದವರೆಗೆ ಆಹಾರ ಪೂರೈಸಲು ಅವಕಾಶ ನೀಡಬೇಕಿದೆ.

‘ಜಿಲ್ಲೆಯ ಹಾಸ್ಟೆಲ್‌ಗಳು, ವಸತಿಶಾಲೆಗಳಿಗೆ ಸಾಮಗ್ರಿ ಪೂರೈಸುವ ಗುತ್ತಿಗೆ ಪಡೆಯಲು ಪೈಪೋಟಿ ನಡೆದಿದೆ. ಒಬ್ಬರಿಗಿಂತ ಮತ್ತೊಬ್ಬರು ಪೈಪೋಟಿ ಮೇಲೆ ಕಡಿಮೆ ದರ ನಮೂದಿಸುತ್ತಾರೆ. ಗುತ್ತಿಗೆ ಪಡೆದ ನಂತರ ಒಂದು ವಸ್ತು ಕೊಟ್ಟು 20 ಪೂರೈಸಲಾಗಿದೆ ಎಂದು ದಾಖಲೆ ಸಲ್ಲಿಸುತ್ತಾರೆ. ನಂತರ ಬೆಲೆ ಏರಿಕೆಯಾಗಿದೆ ಎಂದು ಪರಿಷ್ಕರಣೆಗೆ ಅರ್ಜಿ ಸಲ್ಲಿಸುತ್ತಾರೆ. ಅಧಿಕಾರಿಗಳೂ ಇದರಲ್ಲಿ ಶಾಮೀಲಾಗುವುದರಿಂದ  ಇಂತಹ ದಂಧೆ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಹಾಸ್ಟೆಲ್‌, ವಸತಿಶಾಲೆಯ ಮಕ್ಕಳಿಗೆ ಅನ್ಯಾಯವಾಗುತ್ತಿದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ವಸತಿಶಾಲೆಯೊಂದರ ಪ್ರಾಂಶುಪಾಲರು.

‘ಕಡಿಮೆ ದರ ನಮೂದಿಸಿದವರಿಗೆ ಅವಕಾಶ ನೀಡುವುದು ನಿಯಮ. ಆದರೆ, ಅವರು ನಮೂದಿಸಿದ ದರ ಮಾರುಕಟ್ಟೆ ದರಕ್ಕೆ ಸಮೀಪ ಇರಬೇಕು. ಮಾರುಕಟ್ಟೆ ದರಕ್ಕಿಂತಲೂ ಅತ್ಯಂತ ಕಡಿಮೆ ಇದ್ದರೆ ವಿವೇಚನಾಧಿಕಾರ ಬಳಸಿ ಪ್ರಕ್ರಿಯೆ ತಡೆಯುವ ಅಧಿಕಾರ ಪ್ರಾಧಿಕಾರಕ್ಕೆ ಇರುತ್ತದೆ’ ಎನ್ನುತ್ತಾರೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಚ್‌.ವಿ.ಮಂಜುನಾಥ್.

ಹಿಂದೆಯೂ ಕಡಿಮೆ ದರಕ್ಕೆ ಬಿಡ್ ಸಲ್ಲಿಸಿದವರು ಅವಕಾಶ ಸಿಗದ ಕಾರಣ ಕೋರ್ಟ್ ಮೊರೆಹೋಗಿ, ಯಶ ಕಂಡಿದ್ದಾರೆ. ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ 75 ಹಾಸ್ಟೆಲ್‌ಗಳಿಗೆ ಅಗತ್ಯ ಸಾಮಗ್ರಿ ಪೂರೈಸುವ ಪ್ರಕ್ರಿಯೆಯು 6 ತಿಂಗಳಿನಿಂದ ಕೋರ್ಟ್‌ ಅಂಗಳದಲ್ಲಿದೆ.

ಬರಹ ಇಷ್ಟವಾಯಿತೆ?

 • 10

  Happy
 • 5

  Amused
 • 3

  Sad
 • 0

  Frustrated
 • 31

  Angry

Comments:

0 comments

Write the first review for this !