ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಯೋಧರ ಕೊಂದ ಉಗ್ರರಿಗೆ ರಷ್ಯಾ ಕೊಡುಗೆ ಆರೋಪ: ಟ್ರಂಪ್‌ಗೆ ಬಿಡೆನ್ ಚಾಟಿ

ಅಮೆರಿಕ ಸೈನಿಕರ ಮೇಲೆ ದಾಳಿ ನಡೆಸಿದ ಉಗ್ರರಿಗೆ ರಷ್ಯಾ ಬಹುಮಾನ
Last Updated 28 ಜೂನ್ 2020, 8:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಅಫ್ಗಾನಿಸ್ತಾನದಲ್ಲಿ ಅಮೆರಿಕದ ಸೈನಿಕರನ್ನು ಹತ್ಯೆ ಮಾಡಿದ್ದ ತಾಲಿಬಾನ್‌ ಉಗ್ರರಿಗೆ ರಷ್ಯಾದ ಸೇನಾ ಗುಪ್ತಚರ ದಳವು ರಹಸ್ಯವಾಗಿ ಹಣಕಾಸಿನ ಕೊಡುಗೆಗಳನ್ನು ನೀಡಿತ್ತು’ ಎಂಬ ವರದಿಯನ್ನು ಆಧಾರವಾಗಿಟ್ಟು, ಡೆಮಾಕ್ರೆಟಿಕ್‌ ಪಕ್ಷದ ನಾಯಕ ಜೋ ಬಿಡೆನ್‌ ಅವರು ಅಧ್ಯಕ್ಷ ಟ್ರಂಪ್‌ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

‘ಈ ವರದಿಯು ನಿಜವೇ ಆಗಿದ್ದಲ್ಲಿ, ಅದು ಆಘಾತಕಾರಿ ಬೆಳವಣಿಗೆ. ಸೇನಾ ಮುಖ್ಯಸ್ಥರು ಮತ್ತು ಅಧ್ಯಕ್ಷ ಟ್ರಂಪ್‌ ಅವರು ಅಫ್ಗಾನಿಸ್ತಾನದಲ್ಲಿರುವ ಸೇನಾ ಸಿಬ್ಬಂದಿಯನ್ನು ರಕ್ಷಿಸಲು ಮತ್ತು ರಷ್ಯಾವನ್ನು ತಡೆಹಾಕಲು ವಿಫಲರಾಗಿದ್ದಾರೆ ಎಂದಂತಾಗುತ್ತದೆ’ ಎಂದು ಬಿಡೆನ್‌ ಆರೋಪಿಸಿದ್ದಾರೆ.

ಬಿಡೆನ್‌, ಅಮೆರಿಕದ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರೆಟ್‌ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

‘ಅಫ್ಗಾನಿಸ್ತಾನದಲ್ಲಿರುವ ಅಮೆರಿಕದ ಯೋಧರನ್ನು ಕೊಂದುಹಾಕುವ ತಾಲಿಬಾನ್‌ ಉಗ್ರರಿಗೆ ದೊಡ್ಡ ಮೊತ್ತದ ಹಣಕಾಸು ನೆರವು ನೀಡಲು ರಷ್ಯಾದ ಸೇನಾ ಗುಪ್ತಚರ ಘಟಕ ಗೋಪ್ಯವಾಗಿ ಆಮಿಷ ಒಡ್ಡಿತ್ತು ಎಂಬುದು ಅಮೆರಿಕದ ಗುಪ್ತಚರ ಅಧಿಕಾರಿಗಳ ತನಿಖೆಯ ವೇಳೆ ಬಯಲಾಗಿತ್ತು’ ಎಂದು ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಶುಕ್ರವಾರ ವರದಿ ಮಾಡಿತ್ತು.

‘ಟ್ರಂಪ್‌ ಅವರಿಗೆ ಗುಪ್ತಚರ ಇಲಾಖೆಯು ಮಾರ್ಚ್‌ನಲ್ಲೇ ಈ ವಿಷಯವನ್ನು ತಿಳಿಸಿತ್ತು. ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲೂ ಇದು ಚರ್ಚೆಯಾಗಿತ್ತು’ ಎಂದು ಅಮೆರಿಕದ ಗುಪ್ತಚರ ಇಲಾಖೆಯ ನಿಕಟ ಸಂಪರ್ಕವಿರುವ ವ್ಯಕ್ತಿಯೊಬ್ಬರು ತಿಳಿಸಿರುವುದು ಮತ್ತು ತಮ್ಮ ಉಗ್ರರು ರಷ್ಯಾದ ಜತೆಗೆ ಇಂಥ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯನ್ನು ತಾಲಿಬಾನ್‌ನ ವಕ್ತಾರ ನಿರಾಕರಿಸಿದ್ದಾರೆ ಎಂಬ ವಿಷಯಗಳೂ ಪತ್ರಿಕೆಯ ವರದಿಯಲ್ಲಿದ್ದವು.

ಈ ವರದಿಯ ಆಧಾರದಲ್ಲಿ ಟ್ರಂಪ್‌ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಬಿಡೆನ್‌, ‘ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದ ರಷ್ಯಾದ ಮೇಲೆ ನಿಷೇಧ ಹೇರಲು ಅಥವಾ ಅದಕ್ಕೆ ಎಚ್ಚರಿಕೆ ನೀಡುವಲ್ಲಿ ಟ್ರಂಪ್‌ ವಿಫಲರಾಗಿದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿರುವ ದೇಶಕ್ಕೆ ನಮ್ಮ ಸೈನಿಕರನ್ನು ಕಳುಹಿಸುವಾಗ ಅವರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದು ನಾವು ಮಾಡಬೇಕಾಗಿದ್ದ ಕರ್ತವ್ಯಕ್ಕೆ ಎಸಗಿದ ದ್ರೋಹ’ ಎಂದಿದ್ದಾರೆ.

‘ನಾನು ಅಧ್ಯಕ್ಷನಾದರೆ ಪುಟಿನ್‌ಗೆ ತಕ್ಕ ಉತ್ತರ ನೀಡುತ್ತೇನೆ ಮತ್ತು ರಷ್ಯಾ ತನ್ನ ಕೃತ್ಯಕ್ಕೆ ಭಾರಿ ಬೆಲೆ ತೆರುವಂತೆ ಮಾಡುತ್ತೇನೆ’ ಎಂದೂ ಬಿಡೆನ್‌ ಹೇಳಿದ್ದಾರೆ.

ನ್ಯೂಯಾರ್ಕ್‌ ಟೈಮ್ಸ್‌ನ ವರದಿಯನ್ನು ನಿರಾಕರಿಸಿರುವ ಟ್ರಂಪ್‌ ಆಡಳಿತ, ‘ಅಧ್ಯಕ್ಷರಿಗಾಗಲಿ, ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರಿಗಾಗಲಿ ಗುಪ್ತಚರ ಇಲಾಖೆ ಇಂಥ ಮಾಹಿತಿ ನೀಡಿಲ್ಲ. ಕೆಲವು ತಿಂಗಳ ಹಿಂದೆಯೇ ಮಾಹಿತಿ ನೀಡಲಾಗಿದೆ’ ಎಂದು ಪತ್ರಿಕೆಯ ತಪ್ಪಾಗಿ ವರದಿ ಮಾಡಿದೆ’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ ‘ಅಸಂಬದ್ಧ’: ರಷ್ಯಾ

ನ್ಯೂಯಾರ್ಕ್‌ ಟೈಮ್ಸ್‌ನ ಈ ವರದಿಯನ್ನು ರಷ್ಯಾದ ವಿದೇಶಾಂಗ ಸಚಿವಾಲಯವು ‘ಅಸಂಬದ್ಧ’ ಎಂದು ತಳ್ಳಿಹಾಕಿದೆ.

‘ಈ ಕಪೋಲಕಲ್ಪಿತ ವರದಿಯು ಅಮೆರಿಕ ಗುಪ್ತಚರ ಇಲಾಖೆಯ ಸಾಮರ್ಥ್ಯ ಕಳಪೆ ಎಂಬುದನ್ನು ತೋರಿಸುತ್ತದೆ. ಇವರು ಸಮರ್ಥನೀಯವಾದ ವಿಚಾರವನ್ನು ಹೇಳುವ ಬದಲು ಇಂಥ ಅಸಂಬದ್ಧ ವಿಷಯವನ್ನು ಸೃಷ್ಟಿಸಿದ್ದಾರೆ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT