ಶುಕ್ರವಾರ, ಜುಲೈ 30, 2021
25 °C

ಗಾಳಿಯಿಂದ ಕೊರೊನಾ ಸೋಂಕು ಸಾಧ್ಯತೆ ತಳ್ಳಿಹಾಕಲು ಆಗದು: ವಿಶ್ವ ಆರೋಗ್ಯ ಸಂಸ್ಥೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್ ಸೋಂಕು ಗಾಳಿಯಿಂದ ಹರಡುವ ಸಾಧ್ಯತೆಯನ್ನು ತಳ್ಳಿಹಾಕಲು ಆಗುವುದಿಲ್ಲ ಎಂದು ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಕೊರೊನಾ ವಿರುದ್ಧದ ಸೆಣೆಸಾಟದ ಇದು ಮಹತ್ವದ ಬೆಳವಣಿಗೆ ಎನಿಸಿದೆ.

'ಕೊರೊನಾ ಸೋಂಕು ಗಾಳಿಯಿಂದ ಹರಡುವುದಿಲ್ಲ' ಎಂದೇ ಹಲವು ತಿಂಗಳುಗಳಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿಪಾದಿಸುತ್ತಿತ್ತು. ಆದರೆ ಇದೀಗ ಸಂಸ್ಥೆಯ ಆಯಕಟ್ಟಿನ ಸ್ಥಾನದಲ್ಲಿರುವ ಅಧಿಕಾರಿಯೇ 'ಸೋಂಕು ಗಾಳಿಯಿಂದ ಹರಡುವ ಸಾಧ್ಯತೆ ಇರುವುದನ್ನು ತಳ್ಳಿಹಾಕಲು ಆಗದು' ಎಂದು ಹೇಳಿರುವುದು ಮಹತ್ವದ ವಿದ್ಯಮಾನ ಎನಿಸಿದೆ.

'ಕೊರೊನಾ ಸೋಂಕು ಹರಡುವುದನ್ನು ತಡೆಯಲೆಂದು ರೂಪಿಸಿರುವ ಮಾನದಂಡಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ಮುಂದಿನ ದಿನಗಳಲ್ಲಿ ಪರಿಷ್ಕರಿಸುವ ಸಾಧ್ಯತೆಯಿದೆ. ಸಾರ್ವಜನಿಕ ಸಾರಿಗೆ, ಹೊಟೆಲ್, ಬಾರ್‌ ಮತ್ತು ದೈಹಿಕ ಅಂತರದ ನಿಯಮಗಳನ್ನು ಸರ್ಕಾರಗಳು ಇನ್ನಷ್ಟು ಬಿಗಿ ಮಾಡುವ ಸಾಧ್ಯತೆಗಳೂ ಇವೆ' ಎಂದು ಬಿಬಿಸಿ ವರದಿ ಮಾಡಿದೆ.

ಇದನ್ನೂ ಓದಿ: 'ಗಾಳಿಯಿಂದ ಹರಡುತ್ತಿದೆ ಕೊರೊನಾ ಸೋಂಕು'- ಮಾರ್ಗಸೂಚಿ ಬದಲಿಸಲು ವಿಜ್ಞಾನಿಗಳ ಮನವಿ

'ಜನಸಂದಣಿ ಹೆಚ್ಚಾಗಿರುವ, ಮುಚ್ಚಿದ ಮತ್ತು ವಾಯುಸಂಚಾರ ಮುಕ್ತವಾಗಿ ಇಲ್ಲದ ಪ್ರದೇಶದಲ್ಲಿ ಸೋಂಕು ಗಾಳಿಯಿಂದ ಹರಡಬಹುದು' ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥ ಬೆನೆಡೆಟ್ಟಾ ಅಲೆಗ್ರಾಂಝಿ ಬಿಬಿಸಿ ಸುದ್ದಿತಾಣಕ್ಕೆ ಮಾಹಿತಿ ನೀಡಿದ್ದಾರೆ.

'ಕೆಲ ವಾತಾವರಣಗಳಲ್ಲಿ ಗಾಳಿಯಿಂದಲೂ ಸೋಂಕು ಹರಡುವುದು ದೃಢಪಟ್ಟಿದೆ. ಒಳಾಂಗಣದಲ್ಲಿ ಹೇಗಿರಬೇಕು ಎಂಬ ಮಾರ್ಗಸೂಚಿಗಳನ್ನು ಪರಿಷ್ಕರಿಸಬೇಕಿದೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

'ಕೊರೊನಾ ಸೋಂಕು ಹರಡುವ ವೈರಾಣುಗಳು ಸೋಂಕಿತರಿಂದ ಹೊರಹೊಮ್ಮುವ ದ್ರವಕಣಗಳಿಂದ ಮಾತ್ರ ಹರಡುತ್ತದೆ' ಎಂದು ಈವರೆಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಿತ್ತು.

ಈ ನಿಲುವನ್ನು 32 ದೇಶಗಳ 239 ವಿಜ್ಞಾನಿಗಳು ಪ್ರಶ್ನಿಸಿದ್ದರು.

'ವಿಶ್ವ ಆರೋಗ್ಯ ಸಂಸ್ಥೆಯು ವಾಸ್ತವ ಒಪ್ಪಿಕೊಳ್ಳಬೇಕು. ನಮ್ಮೊಂದಿಗೆ ಸಂವಾದ ನಡೆಸಬೇಕು, ನಾವು ಮುಂದಿಡುವ ಸಾಕ್ಷ್ಯಗಳನ್ನು ಪರಿಶೀಲಿಸಬೇಕೆಂದು ವಿನಂತಿಸುತ್ತೇವೆ' ಎಂದು ಕೊಲೊರಾಡೊ ವಿವಿಯ ರಸಾಯನಶಾಸ್ತ್ರ ವಿಜ್ಞಾನಿ ಜೋಸ್ ಮಿಮಿನೆಝ್ ಒತ್ತಾಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು