ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತ್ ಇದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ: ಡಿ.ಕೆ. ಶಿವಕುಮಾರ್

‘ಅನಂತ ನಮನ–64’ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ
Published 23 ಸೆಪ್ಟೆಂಬರ್ 2023, 16:15 IST
Last Updated 23 ಸೆಪ್ಟೆಂಬರ್ 2023, 16:15 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ಅನಂತಕುಮಾರ್ ಅವರು ಪಕ್ಷಭೇದ ಮರೆತು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದರು. ಅವರಿದ್ದಿದ್ದರೆ ಕಾವೇರಿ ವಿಚಾರದಲ್ಲಿ ಇಂದು ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. 

ಅನಂತಕುಮಾರ್ ಅವರ ಜನ್ಮದಿನದ ಪ್ರಯುಕ್ತ ಅನಂತಕುಮಾರ್ ಪ್ರತಿಷ್ಠಾನ ಹಾಗೂ ಅದಮ್ಯ ಚೇತನ ಫೌಂಡೇಷನ್ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಅನಂತ ನಮನ–64’ ಕಾರ್ಯಕ್ರಮದಲ್ಲಿ ‘ಹಸಿರು ಭಾನುವಾರ’ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು. 

‘ರಾಜ್ಯ ನಾಯಕರು ಯಾವುದೆ ಕೆಲಸ ಸಂಬಂಧ ನವದೆಹಲಿಗೆ ಹೋದರೂ ತಮ್ಮ ಕಚೇರಿಯಲ್ಲೇ ಸಂಬಂಧಪಟ್ಟ ಸಚಿವರನ್ನು ಕರೆಸಿ, ಕೆಲಸ ಆಗುವಂತೆ ನಿರ್ವಹಣೆ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ಕಾವೇರಿ ವಿವಾದ ಪ್ರಾರಂಭವಾದಾಗ ಆಗಿನ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರಿಂದ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಅಫಿಡವಿಟ್ ತಿದ್ದಿಸಿ, ಸಲ್ಲಿಸುವಂತೆ ಮಾಡಿದ್ದರು. ಈ ಬಾರಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆಯಲ್ಲಿ ಕುಳಿತಾಗಲೂ ಅನಂತಕುಮಾರ್ ಅವರನ್ನು ನೆನಪಿಸಿಕೊಂಡು, ಅವರಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಂದುಕೊಂಡೆವು’ ಎಂದು ಹೇಳಿದರು. 

‘ತೇಜಸ್ವಿನಿ ಅನಂತಕುಮಾರ್ ಅವರ ಜೊತೆಗೆ ರಾಜಕೀಯ ಭಿನ್ನಾಭಿಪ್ರಾಯ ಇದೆ. ಇದೇ ವೇಳೆ ಮೃದು ಧೋರಣೆಯೂ ಇದೆ. ರಾಜ್ಯದಲ್ಲಿ ನೂರಾರು ಜನನಾಯಕರನ್ನು ಬೆಳೆಸಿದ ಅವರ ಕುಟುಂಬ ರಾಜಕಾರಣದಲ್ಲಿ ಇರಬೇಕು’ ಎಂದು ತಿಳಿಸಿದರು. 

‘ಅನಂತ ನಮನ’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ, ‘ನನ್ನ ಮತ್ತು ಅನಂತಕುಮಾರ್ ಅವರ ಸ್ನೇಹ ರಾಜಕೀಯ ಮೀರಿದ್ದಾಗಿದೆ. ಜೊತೆಯಲ್ಲಿಯೇ ರಾಜ್ಯ ಸುತ್ತಿ, ಪಕ್ಷವನ್ನು ಬೆಳೆಸಿದೆವು. ಇಂದು ನಮ್ಮ ಪಕ್ಷ ಈ ಹಂತಕ್ಕೆ ಬರಲು ಪ್ರಮುಖ ಕಾರಣ ಅನಂತಕುಮಾರ್. ಅವರು ಇನ್ನೂ ಹೆಚ್ಚಿನ ಕಾಲ ಇರಬೇಕಾಗಿತ್ತು. ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ಅವರ ಮಾರ್ಗದರ್ಶನ ಅಗತ್ಯವಿತ್ತು. ನಾವು ಅವರನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದೇವೆ. ಅವರು ಇದ್ದಿದ್ದರೆ ರಾಜ್ಯದ ಚಿತ್ರಣವೇ ಬದಲಾಗುತ್ತಿತ್ತು’ ಎಂದು ಹೇಳಿದರು.

ಅದಮ್ಯ ಚೇತನ ಫೌಂಡೇಷನ್ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣ ಭಟ್, ವಿಜ್ಞಾನಿ ವಿ.ಕೆ. ಆತ್ರೆ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರೆಸ್ಸೆಸ್‌ನ ಹಿರಿಯ ಕ್ಷೇತ್ರೀಯ ಸಂಘ ಚಾಲಕ ವಿ. ನಾಗರಾಜ್ ಇದ್ದರು.

‘ಮೆಟ್ರೊ ತಂದಿದ್ದೆ ಅನಂತ್’

‘ಬೆಂಗಳೂರಿಗೆ ಮೊನೊ ರೈಲು ಬೇಕೊ ಅಥವಾ ಮೆಟ್ರೊ ರೈಲು ಬೇಕೊ ಎಂಬ ಗೊಂದಲ ಉಂಟಾಗಿತ್ತು. ಆ ಸಂದರ್ಭದಲ್ಲಿ ಆಗಿನ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್ ಅವರು ರಾಜ್ಯ ನಗರಾಭಿವೃದ್ಧಿ ಸಚಿವನಾಗಿದ್ದ ನನ್ನನ್ನು ಹಾಗೂ ಇನ್ನಿತರ ಐವರು ಸಚಿವರು ಮತ್ತು ಅಧಿಕಾರಿಗಳನ್ನು ವಿದೇಶಕ್ಕೆ ಅಧ್ಯಯನ ನಡೆಸಲು ಕಳುಹಿಸಿದ್ದರು. ಆ ಅಧ್ಯಯನ ಪ್ರವಾಸದ ನಂತರ ಹಾಗೂ ನವದೆಹಲಿಯ ಮೆಟ್ರೊ ರೈಲು ನೋಡಿದ ಬಳಿಕ ಬೆಂಗಳೂರಿಗೆ ಮೆಟ್ರೊ ರೈಲೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಬರಲಾಯಿತು. ಬೆಂಗಳೂರಿಗೆ ಮೆಟ್ರೊ ತರಲು ನೂರಾರು ಜನರು ತಾವೇ ಕಾರಣ ಎಂದು ಹೇಳಿದರೂ ಮೂಲ ಕಾರಣ ಅನಂತಕುಮಾರ್’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT