ಶನಿವಾರ, ಡಿಸೆಂಬರ್ 7, 2019
25 °C
ಹೊರಗಿನ ಸದ್ದಿಗೆ ತಡೆ

ಆ್ಯಪಲ್ ವೈರ್‌ಲೆಸ್ ಇಯರ್‌ಫೋನ್ ಏರ್‌ಪಾಡ್ಸ್ ಪ್ರೊ;ಭಾರತದಲ್ಲಿ ₹24,900ಕ್ಕೆ ಲಭ್ಯ

Published:
Updated:
ಏರ್‌ಪಾಡ್ಸ್‌ ಪ್ರೊ

ಬೆಂಗಳೂರು: ಕಳೆದ ತಿಂಗಳು ಬಿಡುಗಡೆಯಾಗಿರುವ ಆ್ಯಪಲ್‌ನ ಹೊಸ ಮಾದರಿಯ ವೈರ್‌ಲೆಸ್ ಇಯರ್‌ಫೋನ್‌ ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ₹24,900 ಬೆಲೆಯ ಏರ್‌ಪಾಡ್ಸ್‌ ಪ್ರೊ ಹಲವು ವಿಶೇಷತೆಗಳನ್ನು ಒಳಗೊಂಡಿದೆ. 

ಏರ್‌ಪಾಡ್ಸ್‌ ಸರಣಿಯಲ್ಲಿ ಪ್ರೀಮಿಯಂ ಮಾದರಿಯ ಇಯರ್‌ಫೋನ್‌ ಎಂದೇ ಇದನ್ನು ಪರಿಗಣಿಸಲಾಗುತ್ತಿದೆ. ಹೊರಗಿನ ಗದ್ದಲವನ್ನು ನಿಯಂತ್ರಿಸುವುದು ಹಾಗೂ ಕೇಳುವಿಕೆಯ ಅತ್ಯುತ್ತಮ ಅನುಭವವನ್ನು ಏರ್‌ಪಾಡ್ಸ್ ಪ್ರೊ ನೀಡುವುದಾಗಿ ಆ್ಯಪಲ್‌ ಹೇಳಿಕೊಂಡಿದೆ. ಅಕ್ಟೋಬರ್‌ 30ರಿಂದಲೇ ಅಮೆರಿಕದಲ್ಲಿ ಹೊಸ ಮಾದರಿಯ ಏರ್‌ಪಾಡ್ಸ್‌ ಮಾರಾಟಗೊಂಡಿದ್ದು, ಈಗ ಭಾರತದ ಅಧಿಕೃತ ಆ್ಯಪಲ್‌ ಉತ್ಪನ್ನ ಮಾರಾಟಗಾರರಲ್ಲಿ ₹24,900ಕ್ಕೆ ಇಯರ್‌ಫೋನ್‌ ಲಭ್ಯವಿದೆ. 

ಅಮೆರಿಕದಲ್ಲಿ ಏರ್‌ಪಾಡ್ಸ್‌ ಪ್ರೊ ₹17,850ಕ್ಕೆ (249 ಡಾಲರ್‌) ಮಾರಾಟವಾಗುತ್ತಿದ್ದು, ಭಾರತದಲ್ಲಿ ಸುಮಾರು ₹7,000 ಹೆಚ್ಚು ಬೆಲೆ ತೆರಬೇಕಿದೆ. ವೈರ್‌ಲೆಸ್ ಚಾರ್ಜಿಂಗ್‌, ಧ್ವನಿ ಮೂಲಕ ನಿಯಂತ್ರಣ ಮತ್ತು ಮೋಡ್‌ ಬದಲಿಸುವ ಆಯ್ಕೆಗಳನ್ನು ಪ್ರೊ ಇಯರ್‌ಫೋನ್‌ ಒಳಗೊಂಡಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 4 ಗಂಟೆಗೂ ಹೆಚ್ಚು ಸಮಯ ಸಂಗೀತ ಆಲಿಸಬಹುದು, ಕೇವಲ 5 ನಿಮಿಷ ಚಾರ್ಜ್‌ ಮಾಡಿದರೆ ಇಯರ್‌ಫೋನ್‌ 1 ಗಂಟೆ ಕಾರ್ಯನಿರ್ವಹಿಸುತ್ತದೆ. 

ಹಿಂದಿನ ಮಾದರಿ ಏರ್‌ಪಾಡ್ಸ್‌ ಚಾರ್ಜಿಂಗ್‌ ಕೇಸ್‌ ಸಹಿತ ₹14,900ಕ್ಕೆ ಸಿಗುತ್ತದೆ. ಅದೇ ಏರ್‌ಪಾಡ್ಸ್‌ ಮತ್ತು ವೈರ್‌ಲೆಸ್ ಚಾರ್ಜಿಂಗ್‌ ಕೇಸ್‌ಗೆ ₹18,900 ನೀಡಬೇಕು. ₹7,500ಕ್ಕೆ ಪ್ರತ್ಯೇಕವಾಗಿ ವೈರ್‌ಲೆಸ್ ಚಾರ್ಜಿಂಗ್‌ ಕೇಸ್ ಖರೀದಿಸಬಹುದು.  

ಏರ್‌ಪಾಡ್ಸ್‌ ಪ್ರೊನಲ್ಲಿ ಸಿಲಿಕಾನ್‌ ಇಯರ್‌ಟಿಪ್ಸ್‌ ಅಳವಡಿಸಲಾಗಿದ್ದು, ಸಂಗೀತ ಕೇಳುಗರಿಗೆ ಆರಾಮದಾಯಕ ಅನುಭವ ಸಿಗಲಿದೆ. ಎರಡು ಮೈಕ್ರೋಫೋನ್‌ಗಳನ್ನು ಒಳಗೊಂಡಿರುವ ಜತೆಗೆ ಸಾಫ್ಟ್‌ವೇರ್‌ನೊಂದಿಗೆ ಸಂಪರ್ಕ ಸಾಧಿಸುವುದರಿಂದ ಹೊರಗಿನ ಸುದ್ದು ಗದ್ದಲವನ್ನು ಕ್ಷಣಕ್ಷಣವೂ ನಿಯಂತ್ರಿಸುತ್ತಿರುತ್ತದೆ. ಪ್ರತಿ ಸೆಕೆಂಡ್‌ಗೆ 200 ಬಾರಿ ಶಬ್ದ ತರಂಗಗಳಲ್ಲಿ ಗದ್ದಲ ನಿಯಂತ್ರಿಸುವ ತಂತ್ರಜ್ಞಾನ ಹೊಂದಿದೆ. ಸಂಗೀತ ಕೇಳುವ ಸಮಯದಲ್ಲೇ ಹೊರಗಿನ ಸದ್ದನ್ನೂ ಕೇಳಬೇಕೆಂದರೆ, ಕಿವಿಯಿಂದ ಇಯರ್‌ಫೋನ್‌ ತೆಗೆಯದೆಯೇ ಕೇಳಿಸಿಕೊಳ್ಳುವ ಟ್ರಾನ್ಸ್‌ಪರೆನ್ಸಿ ಮೋಡ್‌ ಸಹ ಇದೆ. 

ಐಒಎಸ್ 13.2 ಅಥವಾ ನಂತರದ ಆಪರೇಟಿಂಗ್‌ ಸಿಸ್ಟಮ್‌ ಹೊಂದಿರುವ ಆ್ಯಪಲ್‌ ಸಾಧನಗಳೊಂದಿಗೆ ಏರ್‌ಪಾಡ್ಸ್‌ ಪ್ರೊ ಕೂಡುತ್ತದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು